ಕೇಂದ್ರ ಸರ್ಕಾರದ ಶೇ.10 EWS Reservation ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದ ಬೆನ್ನಲ್ಲೇ ರಾಜ್ಯಗಳಲ್ಲಿ ಮೀಸಲಾತಿ ಕಲ್ಪಿಸುವುದಕ್ಕೆ ದೊಡ್ಡ ಅವಕಾಶವೇ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಪ್ರತಿ ರಾಜ್ಯದಲ್ಲೂ ಆಯಾ ರಾಜ್ಯಕ್ಕೆ ಸಿಮೀತವಾದ ಸಮುದಾಯಗಳು ಮೀಸಲಾತಿಗೆ ಆಗ್ರಹಿಸುತ್ತಿದ್ದವು. ಆದರೆ, ಯಾವುದೇ ಮೀಸಲಾತಿ ಶೇ.50 ಮೀರಬಾರದು ಎಂಬ ಇಂದಿರಾ ಸಾಹ್ನಿ ತೀರ್ಪು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ನಿರಾಕರಣೆ ಮಾಡುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರ ಸರ್ಕಾರದ ಶೇ.10 EWS ಮೀಸಲು ಶೇ.50 ಮಿತಿ ಮೀರಲು ಕಾರಣವಾಗಿದೆ. ಹಾಗಾಗಿ, ಎಲ್ಲ ರಾಜ್ಯಗಳಲ್ಲೂ ಈ ಮಿತಿ ಹೆಚ್ಚಳವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ನಮ್ಮ ಕರ್ನಾಟಕ ರಾಜ್ಯದ್ದೇ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಇತ್ತೀಚೆಗಷ್ಟೇ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಮಿತಿಯನ್ನು ಶೇ.15ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದೆ. ಇದರಿಂದಾಗಿ ಒಟ್ಟಾರೆ ಮೀಸಲು ಪ್ರಮಾಣ ಶೇ.56ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಈ ನಿರ್ಧಾರವನ್ನು ಜಾರಿಗೆ ತರಲು ಹೊರಟಿದೆ. ಚಳಿಗಾಲದ ವಿಧಾನ ಮಂಡಳದ ಅಧಿವೇಶನದಲ್ಲಿ ಬಿಲ್ ಮಂಡಿಸಿ, ಒಪ್ಪಿಗೆಯನ್ನು ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಈ ಹಿಂದೆ ಪ್ರಕಟಿಸಿದೆ. ಒಂದೊಮ್ಮೆ ಕರ್ನಾಟಕ ವಿಧಾನಸಭೆಯು ಈ ವಿಧೇಯಕನ್ನು ಜಾರಿ ಮಾಡಿದರೆ, ಈ ಮೊದಲು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಶೇ.50 ಮೀಸಲು ಮಿತಿಯನ್ನು ಮುಂದಿಟ್ಟುಕೊಂಡು ತಳ್ಳಿ ಹಾಕಬಹುದಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್ ವಿಶೇಷ ಸಂದರ್ಭಗಳಲ್ಲಿ ಮೀಸಲು ಮಿತಿಯನ್ನು ಮೀರಬಹುದು ಎಂದು ಶೇ.10 EWS ಮೀಸಲಾತಿ ಸಂಬಂಧ ನೀಡಿದ ತೀರ್ಪಿನಲ್ಲಿ ಹೇಳಿದೆ. ಹಾಗಾಗಿ, ರಾಜ್ಯಗಳು ಹೆಚ್ಚಿಸುತ್ತಿರುವ ಮೀಸಲಾತಿಗೂ ಈಗ ಸಂವಿಧಾನ ಮಾನ್ಯತೆ ದೊರೆಯಬಹುದು ಎಂದು ವಿಶ್ಲೇಷಣೆಗಳು ಶುರುವಾಗಿವೆ.
ಕಳೆದ ಸೆಪ್ಟೆಂಬರ್‌ನಲ್ಲಿ ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಸರ್ಕಾರವು ಹಿಂದುಳಿದ ವರ್ಗ(OBC), ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮೀಸಲಾತಿ ಹೆಚ್ಚಿಸುವ ವಿಧೇಯಕಕ್ಕೆ ಒಪ್ಪಿಗೆ ನೀಡಿತ್ತು. ಇದರಿಂದಾಗಿ ಜಾರ್ಖಂಡ್‌ನಲ್ಲಿ ಮೀಸಲು ಪ್ರಮಾಣ ಶೇ.77ಕ್ಕೆ ಏರಿಕೆಯಾಗಿದೆ. ಅದೇ ರೀತಿ ಹರ್ಯಾಣದಲ್ಲಿ ಜಾಟ್ ಸಮುದಾಯವು ಮೀಸಲಾತಿಯನ್ನು ಕೇಳುತ್ತಿದೆ. ಅದಕ್ಕಾಗಿ ಅಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವು ಅವರಿಗೆ ಶೇ.10 ಮೀಸಲಾತಿಯನ್ನು ಒಬಿಸಿ ವರ್ಗದಲ್ಲಿ ಕಲ್ಪಿಸಿದೆ. ಈ ನಿರ್ಧಾರವನ್ನು ಪಂಜಾಬ್ ಮತ್ತು ಹರ್ಯಾಣ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಜಾಟ್ ಜತೆಗೇ, ಉಳಿದ ನಾಲ್ಕು ಜಾತಿಗಳಿಗೆ ಮೀಸಲಾತಿ ನೀಡಿದ್ದರಿಂದ ಆ ರಾಜ್ಯದಲ್ಲಿ ಮೀಸಲು ಪ್ರಮಾಣ ಶೇ.57ಕ್ಕೆ ಏರಿಕೆಯಾಗಿದೆ.
ಇದೇ ರೀತಿಯಲ್ಲಿ 2019ರಲ್ಲಿ ರಾಜಸ್ಥಾನ ಸರ್ಕಾರ ಕೂಡ ಹಿಂದುಳಿದ ವರ್ಗಗಳ ಕಾಯ್ದೆಗೆ ತಿದ್ದುಪಡಿ ತಂದು, ಗುಜ್ಜರ್ ಮತ್ತು ಇತರ ನಾಲ್ಕು ಜಾತಿಗಳಿಗೆ ಶೇ.5 ಮೀಸಲಾತಿಯನ್ನು ನೀಡಿತು. ಇದರಿಂದಾಗಿ ರಾಜಸ್ಥಾನದಲ್ಲೂ ಮೀಸಲಾತಿ ಪ್ರಮಾಣವು ಶೇ.54ಕ್ಕೆ ಏರಿಕೆಯಾಗಿದೆ. ರಾಜಸ್ಥಾನದ ಈ ನಿರ್ಧಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಬೇರೆ ರಾಜ್ಯಗಳು ಇದೇ ಹಾದಿ ತುಳಿಯಬಹುದೇ?
ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೇಲ್ವರ್ಗದ ಜಾತಿಗಳು, ಬಲಿಷ್ಠ ಜಾತಿಗಳು ವಿವಿಧ ಕೆಟಗರಿಗಳಲ್ಲಿ ಮೀಸಲಾತಿಗೆ ಸರ್ಕಾರಗಳನ್ನು ಆಗ್ರಹಿಸುತ್ತಿವೆ. ಮಹಾರಾಷ್ಟ್ರದಲ್ಲಿ ಮರಾಠರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಮಿತಿ ಮೀರುತ್ತದೆ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿತ್ತು. ಆದರೆ, ಇದೀಗ ಹೊಸ ಸಮೀಕರಣಕ್ಕೆ ಅವಕಾಶವನ್ನು ಸ್ವತಃ ಸುಪ್ರೀಂ ಕೋರ್ಟ್ ನೀಡಿದೆ. ಹೀಗಾಗಿ, ಇಂದಿರಾ ಸಾಹ್ನಿ ನೀಡಿದ್ದ ತೀರ್ಪು ತನ್ನ ಮಹತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಸಂಸತ್ ಕಾನೂನು ಮಾಡಬೇಕೇ?
ಇಲ್ಲಿ ಇನ್ನೂ ಒಂದು ಸಾಧ್ಯತೆಯನ್ನು ಚಿಂತಿಸಬಹುದು. ಕೇಂದ್ರ ಸರ್ಕಾರವು ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಶೇ.10 EWS ಮೀಸಲಾತಿಯನ್ನು ಕಲ್ಪಿಸಿದೆ. ಹಾಗಾಗಿ, ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಹೆಚ್ಚು ವಿಶ್ಲೇಷಣೆಗೆ ಹೋಗಿರದಂತೆ ಕಾಣುತ್ತಿಲ್ಲ. ಹಾಗಿದ್ದೂ ಇಬ್ಬರು ಜಡ್ಜ್ ಈ ಮೀಸಲಾತಿಯನ್ನು ವಿರೋಧಿಸಿ ತಮ್ಮ ತೀರ್ಪು ನೀಡಿದ್ದಾರೆಂಬುದನ್ನು ಮರೆಯಬಾರದು. ಹಾಗಾಗಿ, ರಾಜ್ಯಗಳು ಕೂಡ ತಮ್ಮ ರಾಜ್ಯದಲ್ಲಿ ಕಲ್ಪಿಸಲಾಗುವ ಮೀಸಲಾತಿಗೆ ಸಂವಿಧಾನಬದ್ಧ ಮಾನ್ಯತೆಯನ್ನು ಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನು ಸೃಷ್ಟಿಸಬಹುದು. ವಿಶೇಷ ರಾಜಕೀಯ ಕಾರಣಕ್ಕಾಗಿ ಕೆಲವೊಮ್ಮೆ ಸಂಸತ್ ಇಂಥ ತಿದ್ದುಪಡಿಗಳನ್ನು ಅಂಗೀಕರಿಸುತ್ತಾ ಹೋದರೆ, ಸಂವಿಧಾನದ ಮೂಲ ಸಂರಚನೆಯೇ ಹೊರಟ ಹೋಗಬಹುದು. ಆಗ ಸಂವಿಧಾನದ ರಕ್ಷಕವಾಗಿರುವ ಸುಪ್ರೀಂ ಕೋರ್ಟ್ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಇದನ್ನೂ ಓದಿ | EWS Quota | ಶೇ.10 ಇಡಬ್ಲ್ಯೂಎಸ್ ಮೀಸಲು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಐವರ ಪೈಕಿ ಇಬ್ಬರು ಜಡ್ಜ್ ಭಿನ್ನ ತೀರ್ಪು!