ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ( special status to Jammu and Kashmir) ಕಲ್ಪಿಸುವ ಆರ್ಟಿಕಲ್ 370 ರದ್ಧು (Article 370 Scrap) ಪ್ರಶ್ನಿಸಿ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದವು (Supreme Court). ಈ ಕುರಿತು ವಿಚಾರಣೆ ಪೂರ್ತಿಗೊಳಿಸಿರುವ ಸುಪ್ರೀಂ ಕೋರ್ಟ್ ಡಿಸೆಂಬರ್ 11, ಸೋಮವಾರ ತನ್ನ ಅಂತಿಮ ಪ್ರಕಟಿಸಲಿದೆ(Judgement on Dec 11).
ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 23 ಅರ್ಜಿಗಳನ್ನು ದಾಖಲಾಗಿದ್ದವು. ದೂರಗಾಮಿ ಪರಿಣಾಮಗಳನ್ನು ಬೀರು ಮತ್ತು ಹೆಗ್ಗುರಾತಾಗಬಹುದಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೀರ್ಘ ಸಮಯದಿಂದ ನಡೆಸುತ್ತಾ ಬಂದಿದೆ. 16 ಮ್ಯಾರಥಾನ್ ದಿನಗಳ ವಿಚಾರಣೆಗಳು ಮತ್ತು ಎರಡೂ ಕಡೆಯವರು ಮಂಡಿಸಿದ ವಾದಗಳ ನಂತರ, ನ್ಯಾಯಾಲಯವು ಸೆಪ್ಟೆಂಬರ್ 5 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸೋಮವಾರ ತೀರ್ಪು ಪ್ರಕಟಿಸಲಿದೆ. 370 ನೇ ವಿಧಿಯ ರದ್ದತಿಯನ್ನು ಸಂವಿಧಾನ ಮತ್ತು ಕಾನೂನು ತತ್ವಗಳಿಗೆ ಅನುಗುಣವಾಗಿ ನಡೆಸಲಾಗಿದೆಯೇ ಎಂದು ನಿರ್ಧರಿಸುವ ಅವರ ಈ ತೀರ್ಮಾನವು ಭಾರೀ ಮಹತ್ವವನ್ನು ಪಡೆದುಕೊಳ್ಳಲಿದೆ.
ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣ್ಯಂ, ದುಶ್ಯಂತ್ ದವೆ ಮತ್ತು ರಾಜೀವ್ ಧವನ್ ಸೇರಿದಂತೆ 18 ವಕೀಲರು ಕೇಂದ್ರದ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸಿ ವಾದ ಮಂಡಿಸಿದರೆ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಇತರ ಕಾನೂನು ತಜ್ಞರು ಕೇಂದ್ರವನ್ನು ಪ್ರತಿನಿಧಿಸಿ, ಕೇಂದ್ರದ ನಿರ್ಧಾರವು ಸಂಪೂರ್ಣವಾಗಿ ತಾರ್ಕಿಕ ಮತ್ತು ಸೂಕ್ತವಾಗಿದೆ ಎಂದು ವಾದ ಮಂಡಿಸಿದ್ದರು.
ಆಗಸ್ಟ್ 2ರಿಂದ ದಿನ ನಿತ್ಯ ವಿಚಾರಣೆ ಆಂರಭಿಸಿದ್ದ ಸುಪ್ರೀಂ ಕೋರ್ಟ್
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ (Article 370) ವಿಧಿ ರದ್ದು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 2ರಿಂದ ನಿತ್ಯ ವಿಚಾರಣೆ ನಡೆಸಿತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆಯನ್ನು ಕೈಗೊಂಡಿತ್ತು.
ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ 23 ಅರ್ಜಿಗಳು ಸಲ್ಲಿಕೆಯಾದ ಕಾರಣ ಎಲ್ಲ ಅರ್ಜಿಗಳ ವಿಚಾರಣೆಯನ್ನು ಪ್ರತಿದಿನ ನಡೆಸುವುದಾಗಿ ತಿಳಿಸಿತ್ತು.
ಜಮ್ಮು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಿರ್ಧಾರವನ್ನು ಅಫಿಡವಿಟ್‌ನಲ್ಲಿ ಸರ್ಕಾರ ಸಮರ್ಥಿಸಿಕೊಂಡಿತ್ತು. 370ನೇ ವಿಧಿಯ ರದ್ದತಿಯು ಭಯೋತ್ಪಾದಕರನ್ನು ಮಟ್ಟಹಾಕಲು ಕಾರಣವಾಗಿದೆ; ಕಲ್ಲು ತೂರಾಟ ಮತ್ತು ಬೀದಿ ಹಿಂಸಾಚಾರದ ಘಟನೆಗಳು ಭೂತಕಾಲದ ವಿಷಯವಾಗಿದೆ. ಈ ಪ್ರದೇಶದಲ್ಲಿ ಅಭೂತಪೂರ್ವ ಅಭಿವೃದ್ಧಿ, ಪ್ರಗತಿ, ಭದ್ರತೆ ಮತ್ತು ಸ್ಥಿರತೆಗೆ ಕಾರಣವಾಗಿದೆ ಎಂದು ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.
ಈ ಸುದ್ದಿಯನ್ನೂ ಓದಿ: Article 370: ರಾಷ್ಟ್ರಪತಿಯವರೇ ರಾಜ್ಯದ ಸ್ಥಾನ ನೀಡಬಹುದು; ಕಾಶ್ಮೀರ ವಿಷಯದಲ್ಲಿ ಸುಪ್ರೀಂ ಮಹತ್ವದ ಪ್ರಸ್ತಾಪ