ನವ ದೆಹಲಿ: 1991ರ ಪೂಜಾ ಸ್ಥಳಗಳ ಕಾಯಿದೆ(Places of Worship Act)ಯನ್ನು ಪ್ರಶ್ನಿಸಿ ದಾಖಲಾಗಿರುವ ಎಲ್ಲ ಅರ್ಜಿಗಳನ್ನು ಮೂರು ನ್ಯಾಯಮೂರ್ತಿಗಳ ನ್ಯಾಯಪೀಠವು ಅಕ್ಟೋಬರ್ 11ರಿಂದ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಕಾಯಿದೆಯನ್ನು ಪ್ರಶ್ನಿಸಿರುವ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರ ವಕೀಲರೊಬ್ಬರು ಕಾಶಿ ಮತ್ತು ಮಥುರಾ ನ್ಯಾಯಾಲಯಗಳು ಪೂಜಾ ಸ್ಥಳಗಳ ಕಾಯ್ದೆಯನ್ನು ಅರ್ಥೈಸುವ ತೀರ್ಪುಗಳನ್ನು ನೀಡುತ್ತಿವೆ ಎಂದು ಇದೇ ವೇಳೆ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರಿದ್ದ ಪೀಠವು, ಕಾಶಿ ಮತ್ತು ಮಥುರಾ ನ್ಯಾಯಾಲಯಗಳ ಕಲಾಪಕ್ಕೆ ತಡೆ ನೀಡಲಾಗುವುದಿಲ್ಲ. ಕಲಾಪಗಳು ಅದರ ಪಾಡಿಗೆ ಮುಂದುವರಿಯಲಿದೆ ಎಂದು ತಿಳಿಸಿತು.
ಐದು ಪುಟಗಳ ತಮ್ಮ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸುವಂತೆ ಎಲ್ಲ ಅರ್ಜಿದಾರರಿಗೆ ಕೋರ್ಟ್ ತಿಳಿಸಿತು. ಈ ವಿಷಯದಲ್ಲಿರುವ ಸಮಸ್ಯೆಗಳನ್ನು ಪರಿಗಣಿಸಿ ಮೂವರು ನ್ಯಾಯಮೂರ್ತಿಗಳ ಪೀಠವು ವಿಚಾರಣೆಗೆ ಅರ್ಹವಾಗಿದೆ ಎಂದು ಕೋರ್ಟ್ ಹೇಳಿತು.
ಏತನ್ಮಧ್ಯೆ, ವಾರಾಣಸಿಯ ಈ ಹಿಂದಿನ ರಾಜನ ಪುತ್ರಿ ಮಹಾರಾಜ ಕುಮಾರಿ ಕೃಷ್ಣ ಪ್ರಿಯಾ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿ, ಈ ಪ್ರಕರಣದಲ್ಲಿ ತಮ್ಮ ಮನವಿಯನ್ನು ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. ಕಾಶಿಯ ರಾಜ ಕಾಶಿಯ ಎಲ್ಲಾ ದೇವಾಲಯಗಳ ಮುಖ್ಯ ಪೋಷಕರಾಗಿದ್ದರಿಂದ, ಕಾಶಿ ರಾಜಮನೆತನದ ಪರವಾಗಿ 1991ರ ಪೂಜಾ ಸ್ಥಳಗಳ ಕಾಯಿದೆಯನ್ನು ಪ್ರಶ್ನಿಸಲು ತಮಗೆ ಅಧಿಕಾರವಿದೆ. ಸಂವಿಧಾನದ 25, 26, 29 ಮತ್ತು 32 ನೇ ವಿಧಿಗಳ ಅನುಸಾರ ತಾವು ಅರ್ಜಿ ಸಲ್ಲಿಸುತ್ತಿರುವುದಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | Hijab Row | ಶಾಲೆಗಳಲ್ಲಿ ರುದ್ರಾಕ್ಷಿ, ಶಿಲುಬೆ ಧಾರಣೆ ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಾದ, ನಾಳೆಗೆ ವಿಚಾರಣೆ ಮುಂದೂಡಿಕೆ