ನವ ದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೇನಾ ಯೋಜನೆ ‘ಅಗ್ನಿಪಥ್’ನ್ನು ಟೀಕಿಸುವ ಭರದಲ್ಲಿ ‘ಹೀಗೆ ಅಗ್ನಿವೀರರ ನೇಮಕಾತಿ ಮಾಡುವುದರಿಂದ ದೇಶದಲ್ಲಿ ನಪುಂಸಕ ಪಡೆನಿರ್ಮಾಣವಾಗುತ್ತದೆ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಆರ್ಜೆಡಿ ನಾಯಕ, ಬಿಹಾರದ ಸಹಕಾರ ಸಚಿವ ಸುರೇಂದ್ರ ಪ್ರಸಾದ್ ಯಾದವ್ ಅವರು ಈಗ ತಮ್ಮ ಹೇಳಿಕೆಗೆ ಸಮರ್ಥನೆ ಕೊಟ್ಟಿದ್ದಾರೆ.
‘ನಾನು ಸೇನೆಗೆ ಯಾವ ಕಾರಣಕ್ಕೂ ಅವಮಾನ ಮಾಡುವುದಿಲ್ಲ. ನನ್ನ ತಾತ ಕೂಡ ಸೈನಿಕರಾಗಿ ಕರ್ತವ್ಯ ನಿರ್ವಹಿಸಿ, 1962ರ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ನಾನ್ಯಾಕೆ ಸೇನೆಗೆ ಅಪಮಾನ ಮಾಡಲಿ?’ ಎಂದು ಪ್ರಶ್ನಿಸಿದ್ದಾರೆ. ‘ನರೇಂದ್ರ ಮೋದಿ ಮತ್ತು ಬಿಜೆಪಿಯವರು ಮಾತ್ರ ಹಿಂದುಗಳಾ? ಅಥವಾ ಭಾರತೀಯರಾ? ನಾವೆಲ್ಲ ಹಿಂದೂಗಳಲ್ಲವಾ? ಕೇವಲ ನಾಲ್ಕು ವರ್ಷದ ಅವಧಿಯ ಕೇಂದ್ರ ಸರ್ಕಾರಿ ಕೆಲಸವನ್ನು ನೀವು ಇದುವರೆಗೆ ನೋಡಿದ್ದೀರಾ? ಅಂದಮೇಲೆ ಈ ಅಗ್ನಿಪಥ್ ಯೋಜನೆ ಯಾಕೆ ಬೇಕಿತ್ತು. ನಾನು ಸೇನೆಗೆ ಅವಮಾನ ಮಾಡಿಲ್ಲ, ಮಾಡವುದೂ ಇಲ್ಲ. ಆದರೆ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿದ್ದೇನೆ ಅಷ್ಟೇ’ ಎಂದು ಸುರೇಂದ್ರ ಪ್ರಸಾದ್ ಹೇಳಿದ್ದಾರೆ.
ಏನು ವಿವಾದ ಇದು?
ಗುರುವಾರ ಅಗ್ನಿಪಥ್ ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದ ಆರ್ಜೆಡಿ ನಾಯಕ ಸುರೇಂದ್ರ ಪ್ರಸಾದ್ ‘ಇನ್ನು 8.5 ವರ್ಷ ಎನ್ನುವಷ್ಟರಲ್ಲಿ ಈಗ ಸೇನೆಯಲ್ಲಿ ಇರುವ ಹಲವು ಯೋಧರು ನಿವೃತ್ತರಾಗುತ್ತಾರೆ. ಆದರೆ ಅಷ್ಟರಲ್ಲಿ, ನಾಲ್ಕೂವರೆ ವರ್ಷದ ಅವಧಿಗೆ ನೇಮಕಗೊಳ್ಳುವ ಅಗ್ನಿವೀರರ ತರಬೇತಿ ಮಾತ್ರ ಪೂರ್ಣಗೊಂಡಿರುವುದಿಲ್ಲ. ನಮ್ಮದು ಬಲಿಷ್ಠ ಸೈನ್ಯ ಎಂಬ ಹೆಗ್ಗಳಿಕೆಯಿದೆ. ಆದರೆ ಅಗ್ನಿವೀರರ ನೇಮಕದಿಂದಾಗಿ ನಮ್ಮದು ನಪುಂಸಕ ಸೇನೆಯಾಗಿ ಬದಲಾಗಲಿದೆ. ಇನ್ನು ನಾಲ್ಕೂವರೆ ವರ್ಷಕ್ಕೆ ಕೆಲಸ ಇಲ್ಲದೆ, ವಾಪಸ್ ಮನೆಗೆ ಹೋಗುವ ಯುವಕರನ್ನು ಮದುವೆಯಾಗಲೂ ಯಾವ ಹೆಣ್ಣೂ ಬರುವುದಿಲ್ಲ’ ಎಂದು ಹೇಳಿದ್ದರು.
ಸುರೇಂದ್ರ ಪ್ರಸಾದ್ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇಂಥ ಮಾತುಗಳನ್ನು ಆಡುವುದು ಸೇನೆಗೆ ಅಪಮಾನ ಮಾಡಿದಂತೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಆರ್ಜೆಡಿ ಪಕ್ಷ ಸುರೇಂದ್ರ ಪ್ರಸಾದ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಹೀಗೆ ತೀವ್ರ ಟೀಕೆ-ವ್ಯಂಗ್ಯ ಎದುರಾದ ಬೆನ್ನಲ್ಲೇ ಸಚಿವರು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.