ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆ ಹರಿಹರೇಶ್ವರ ಬೀಚ್‌ನಲ್ಲಿ ಅಪಾರ ಪ್ರಮಾಣದ ಎಕೆ-೪೭ ಸೇರಿ ಹಲವು ರೈಫಲ್‌ಗಳು, ಬುಲೆಟ್‌ಗಳು ಇರುವ ಹಡಗೊಂದು (Terror Alert) ಪತ್ತೆಯಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ, ಇದು ಮುಂಬೈನಲ್ಲಿ ೨೬/೧೧ರಂದು ನಡೆದ ದಾಳಿಯ ಮಾದರಿಯಲ್ಲೇ ದಾಳಿ ಮಾಡಲು ರೂಪಿಸಿರುವ ಸಂಚು ಎಂದು ಶಂಕಿಸಲಾಗಿದೆ.
“ಹಡಗಿನಲ್ಲಿ ಎಕೆ-೪೭ ಸೇರಿ ಹಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಸಮುದ್ರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂದು ರಾಯಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಧುಧೆ ಮಾಹಿತಿ ನೀಡಿದ್ದಾರೆ. ಇದು ಆಸ್ಟ್ರೇಲಿಯಾ ನಿರ್ಮಿತ ಹಡಗಾಗಿದ್ದು, ಒಮಾನ್‌ನಿಂದ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ರಾಯಗಢ ಜಿಲ್ಲೆಯ ಹರಿಹರೇಶ್ವರ ಬೀಚ್‌ನಲ್ಲಿರುವ ಕರಾವಳಿ ಭದ್ರತಾ ಪಡೆಗೂ ಈ ಕುರಿತು ಮಾಹಿತಿ ನೀಡಲಾಗಿದೆ. ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಸಿಬ್ಬಂದಿಯೂ ರಾಯಗಢಕ್ಕೆ ತೆರಳಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತಪ್ಪಿದ ಅನಾಹುತ
೨೬/೧೧ರಂದು ಮುಂಬೈ ಮೇಲೆ ದಾಳಿ ನಡೆಸಿದ್ದ ಉಗ್ರರು ಸಾಗರ ಮಾರ್ಗವಾಗಿಯೇ ಮುಂಬೈಗೆ ಆಗಮಿಸಿದ್ದರು. ಹಾಗಾಗಿ, ಬೋಟ್ ಪತ್ತೆಯಾಗಿದ್ದೂ ಇಂತಹದ್ದೇ ಸಂಚಿನ ಭಾಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. “ನಾವು ಉಗ್ರರ ಸಂಚಿನ ಕುರಿತು ಸಹ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಹಡಗು ಒಮಾನ್‌ನಿಂದ ಬಂದಿರುವ ಶಂಕೆ ಇದೆ, ತನಿಖೆ ಬಳಿಕ ನಿಜಾಂಶ ತಿಳಿಯಲಿದೆ” ಎಂದು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ವಿನೀತ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದರಿಂದ ಬೃಹತ್ ಪ್ರಮಾಣದಲ್ಲಿ ನಡೆಯಬೇಕಿದ್ದ ದಾಳಿಯೊಂದು ತಪ್ಪಿದಂತಾಗಿದೆ.
ಇದನ್ನೂ ಓದಿ | ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಸ್ಕೆಚ್, ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರು ಅರೆಸ್ಟ್, ಒಬ್ಬ I love NAMO ಎಂದಿದ್ದ!