ನವ ದೆಹಲಿ: ಸ್ವಘೋಷಿತ ದೇವಮಾನವ, ಕಾಲ್ಪನಿಕ ʼಕೈಲಾಸʼ ರಾಷ್ಟ್ರದ ಸೂತ್ರಧಾರಿ, ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಸಭೆಯೊಂದರಲ್ಲಿ ತನ್ನ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ʼಭಾರತ ತನಗೆ ಕಿರುಕುಳ ನೀಡುತ್ತಿರುವುದಾಗಿ ಅಲ್ಲಿ ಹೇಳಿಕೊಂಡಿದ್ದಾಗಿʼ ತಿಳಿಸಿದ್ದಾನೆ.
ನಿತ್ಯಾನಂದ ತನ್ನ ದ್ವೀಪವನ್ನು ʼಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸʼ ಎಂದು ಕರೆದುಕೊಂಡಿದ್ದಾನೆ. ಈ ದ್ವೀಪಕ್ಕೆ ವಿಶ್ವಸಂಸ್ಥೆ ರಾಷ್ಟ್ರದ ಸ್ಥಾನಮಾನ ನೀಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈತನ ದ್ವೀಪ ಎಲ್ಲಿದೆ ಎಂಬುದೂ ಖಚಿತವಾಗಿಲ್ಲ.
ಅತ್ಯಾಚಾರ ಆರೋಪ ಹೊತ್ತು ಭಾರತ ಬಿಟ್ಟು ಪರಾರಿಯಾಗಿರುವ ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಪ್ರತಿನಿಧಿಯಾಗಿ ಭಾಗವಹಿಸಿರುವ ವಿಜಯಪ್ರಿಯಾ ನಿತ್ಯಾನಂದ ಎಂಬಾಕೆ, ʼʼಹಿಂದೂಧರ್ಮದ ಸುಪ್ರೀಂ ಗುರುವಾಗಿರುವ ನಿತ್ಯಾನಂದ ಭಾರತದಿಂದ ಕಿರುಕುಳ, ಅತ್ಯಾಚಾರ ಆರೋಪ ಅನುಭವಿಸುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕುʼʼ ಎಂದು ವಾದಿಸಿದ್ದಾಳಂತೆ.
2019ರಲ್ಲಿ ಈತ ಭಾರತ ಬಿಟ್ಟು ಪರಾರಿಯಾಗಿದ್ದ. ಅದಕ್ಕೆ ಮುನ್ನ ಇಲ್ಲಿ ಹಲವಾರು ಕಡೆ ಆಶ್ರಮಗಳನ್ನು ನಡೆಸುತ್ತಿದ್ದ ಈತನ ಮೇಲೆ ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಮಕ್ಕಳ ಅಪಹರಣ ಮುಂತಾದ ಪ್ರಕರಣಗಳು ದಾಖಲಾಗಿವೆ. 2010ರಲ್ಲಿ ಕರ್ನಾಟಕದ ಕೋರ್ಟ್ ಈತನಿಗೆ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.
ಫೆ.22ರಂದು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ವಾಣಿಜ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಭೆಯಲ್ಲಿ ಈತನ ಪ್ರತಿನಿಧಿ ಮಾ ವಿಜಯಲಕ್ಷ್ಮಿ ನಿತ್ಯಾನಂದ ಭಾಗವಹಿಸಿದ್ದಾಳೆ. ನಿತ್ಯಾನಂದ ಸ್ಥಾಪಿಸಿರುವ ಕೈಲಾಸ, ಹಿಂದೂಧರ್ಮದ ಪ್ರಪ್ರಥಮ ಸಾರ್ವಭೌಮ ದೇಶವಾಗಿದೆ. ನಿತ್ಯಾನಂದ ಹಿಂದೂ ನಾಗರಿಕತೆ ಹಾಗೂ ಅದರ 10,000 ಸಂಪ್ರದಾಯಗಳ ಸುಪ್ರೀಂ ಗುರುವಾಗಿದ್ದಾರೆ. ಅದರಲ್ಲಿ ಕೃಷಿ ಸಂಸ್ಕೃತಿಯಾದ ಆದಿ ಶಿವ ಸಮುದಾಯವೂ ಸೇರಿದೆʼʼ ಎಂದಿದ್ದಾಳೆ.
ಇದನ್ನೂ ಓದಿ: Swami Nithyananda | ಬ್ರಿಟನ್ ಸಂಸತ್ತಿನಲ್ಲಿ ದೀಪಾವಳಿ ಆಚರಿಸಿದನೇ ನಿತ್ಯಾನಂದ?