ಆಗ್ರಾ: ಆಗ್ರಾದ ವಿಶ್ವವಿಖ್ಯಾತ ತಾಜ್‌ಮಹಲ್‌ನಲ್ಲಿ (Taj Mahal) ಮುಸ್ಲಿಂ ಸಮುದಾಯ ನಡೆಸುತ್ತಿರುವ ʼಷಹಜಹಾನನ ಉರೂಸ್ʼ (Shah Jahan’s Urs) ವಿರುದ್ಧ ಹಿಂದೂಪರ ಸಂಘಟನೆಯಾದ ಅಖಿಲ ಭಾರತ ಹಿಂದೂ ಮಹಾಸಭಾ (Akhil Bharat Hindu Mahasabha) ಆಗ್ರಾ ನ್ಯಾಯಾಲಯದಲ್ಲಿ (Agra court) ಮನವಿ ಸಲ್ಲಿಸಿದೆ.
ಭಾರತದ ಅತ್ಯಂತ ಪ್ರಸಿದ್ಧ ಅಂತಾರಾಷ್ಟ್ರೀಯ ಮಟ್ಟದ ಸ್ಮಾರಕವಾಗಿರುವ ತಾಜ್‌ಮಹಲ್‌ನಲ್ಲಿ ಉರೂಸ್ ನಡೆಸುವುದನ್ನು ಆಕ್ಷೇಪಿಸಿ, ನಿಷೇಧಾಜ್ಞೆ ಕೋರಿ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ. ಉರೂಸ್ ಎಂದರೆ ಸಂತರ ದರ್ಗಾದಲ್ಲಿ ನಡೆಯುವ ಸೂಫಿ ಸಂತರ ಮರಣ ವಾರ್ಷಿಕೋತ್ಸವದ ಕಾರ್ಯಕ್ರಮವಾಗಿದೆ.
ತಾಜ್‌ಮಹಲ್ ಯುನೆಸ್ಕೋ (UNESCO) ಪಟ್ಟಿಯಲ್ಲಿರುವ ಸಾರಕವಾಗಿದ್ದು, ಇದನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಮೊಗಲ್ ದೊರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಬೇಗಂ ನೆನಪಿನಲ್ಲಿ 1653ರಲ್ಲಿ ಕಟ್ಟಿಸಿದ ಅಮೃತಶಿಲೆಯ ಈ ಸ್ಮಾರಕಕ್ಕೆ ಪ್ರವೇಶಶುಲ್ಕದ ಸಹಿತ ಪ್ರವೇಶವಿದೆ. ಉರೂಸ್ ಸಮಯದಲ್ಲಿ ಟಿಕೆಟ್ ಇಲ್ಲದೆ ಪ್ರವೇಶ ನೀಡಲಾಗುತ್ತಿದೆ. ಇದನ್ನೂ ಸಂಘಟನೆ ಪ್ರಶ್ನಿಸಿದೆ.
ಆಗ್ರಾ ಕೋರ್ಟ್ ಅರ್ಜಿಯನ್ನು ಸ್ವೀಕರಿಸಿದ್ದು, ಮಾರ್ಚ್ 4ರಂದು ವಿಚಾರಣೆ ನಡೆಸಲಿದೆ. ಈ ವರ್ಷ ತಾಜ್‌ಮಹಲ್‌ನಲ್ಲಿ ಫೆಬ್ರವರಿ 6 ಮತ್ತು ಫೆಬ್ರವರಿ 8ರ ನಡುವೆ ಉರೂಸ್ ನಡೆಯುತ್ತದೆ.
ಅರ್ಜಿಯಲ್ಲಿ ಹೇಳಿದ್ದೇನು?
ಪಾಲಿಕೆ ಜಿಲ್ಲಾಧ್ಯಕ್ಷ ಸೌರಭ ಶರ್ಮಾ ಮನವಿ ಸಲ್ಲಿಸಿದ್ದಾರೆ. ಅವರು ಉರೂಸ್ ಆಚರಿಸುವ ಸಮಿತಿಯ ವಿರುದ್ಧ ಶಾಶ್ವತ ನಿಷೇಧಾಜ್ಞೆಯನ್ನು ಕೋರಿದ್ದಾರೆ. ತಾಜ್ ಮಹಲ್‌ನಲ್ಲಿ ಉರೂಸ್‌ಗೆ ಉಚಿತ ಪ್ರವೇಶವನ್ನು ನೀಡುತ್ತಿರುವುದನ್ನು ಅರ್ಜಿದಾರರು ಆಕ್ಷೇಪಿಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
“ಆಗ್ರಾ ನಗರದ ಇತಿಹಾಸಕಾರ ರಾಜ್ ಕಿಶೋರ್ ರಾಜೆ ಸಲ್ಲಿಸಿದ ಆರ್‌ಟಿಐ ಆಧಾರದಲ್ಲಿ ಅರ್ಜಿ ಸಲ್ಲಿಸಲಾಗಿದೆ. ತಾಜ್ ಮಹಲ್ ಆವರಣದಲ್ಲಿ ಉರೂಸ್ ಆಚರಣೆ ಮತ್ತು ನಮಾಜ್‌ಗೆ ಅನುಮತಿ ನೀಡಿದವರು ಯಾರು ಎಂದು ಆರ್‌ಟಿಐನಲ್ಲಿ ಎಎಸ್‌ಐಗೆ ಕೇಳಲಾಗಿತ್ತು. ಎಎಸ್‌ಐ ನೀಡಿದ ಉತ್ತರದ ಪ್ರಕಾರ ಮೊಘಲರಾಗಲೀ, ಬ್ರಿಟಿಷ್ ಸರ್ಕಾರವಾಗಲೀ ಅಥವಾ ಭಾರತ ಸರ್ಕಾರವಾಗಲೀ ತಾಜ್ ಮಹಲ್‌ನಲ್ಲಿ ಉರೂಸ್ ಆಚರಣೆಗೆ ಅವಕಾಶ ನೀಡಿಲ್ಲ” ಎಂದು ಎಬಿಎಚ್‌ಎಂ ವಕ್ತಾರ ಸಂಜಯ್ ಜಾಟ್ ಹೇಳಿದರು.
“ಆದ್ದರಿಂದ, ಅದರ ಆಧಾರದ ಮೇಲೆ ನಾವು ನಿಷೇಧಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಸೈಯ್ಯದ್ ಇಬ್ರಾಹಿಂ ಜೈದಿ ನೇತೃತ್ವದ ಷಹಜಹಾನ್ ಉರೂಸ್ ಆಚರಣಾ ಸಮಿತಿಯ ಸಂಘಟಕರು ತಾಜ್ ಮಹಲ್‌ನಲ್ಲಿ ಉರೂಸ್ ಆಚರಿಸುವುದನ್ನು ನಿಲ್ಲಿಸಬೇಕು” ಎಂದು ಅವರು ಹೇಳಿದರು.
ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯೊಳಗೆ ಹಿಂದೂ ಸಮುದಾಯದ ಪೂಜೆಗೆ ಅನುಮತಿ ನೀಡಿದ ಎರಡು ದಿನಗಳ ನಂತರ ಈ ಪ್ರಕರಣ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: Gyanvapi Mosque: ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ತಡೆ ನೀಡದ ಹೈಕೋರ್ಟ್; ಮುಸ್ಲಿಮರಿಗೆ ಹಿನ್ನಡೆ