ಚೆನ್ನೈ: ತಮಿಳು ಚಿತ್ರರಂಗದ ಪ್ರಮುಖ ನಟಿ ಪಾಲಿನ್ ಜೆಸ್ಸಿಕಾ (Pauline Jessica) ಅವರ ಶವ ಚೆನ್ನೈನ ವಿರುಗಂಬಕ್ಕಮ್ ಮಲ್ಲಿಕಾ ಅವೆನ್ಯೂ ಅಪಾರ್ಟ್‌ಮೆಂಟ್‌ನ ಬಾಡಿಗೆ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಂಧ್ರ ಪ್ರದೇಶ ಮೂಲದ ಪಾಲಿನ್ ಜೆಸ್ಸಿಕಾ ಅವರು ‘ದೀಪಾ’ ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾದ ‘ವೈಧಾ’ ತಮಿಳು ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಹಲವು ತಮಿಳು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಈ ನಟಿ ನಟಿಸಿದ್ದಾರೆ. ಸೆಪ್ಟೆಂಬರ್ 18ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶವದ ಬಳಿಯೇ ಸೂಸೈಡ್ ನೋಟ್ ಕೂಡ ದೊರೆತಿದ್ದು, ವೈಯಕ್ತಿಕ ಸಂಬಂಧ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ಪೊಲೀಸರು ಎಲ್ಲ ದೃಷ್ಟಿಕೋನಗಳಿಂದಲೂ ತನಿಖೆ ಕೈಗೊಂಡಿದ್ದಾರೆ.
ಫ್ಲ್ಯಾಟ್‌ನ ನೆರೆ ಹೊರೆಯವರ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಕೊಯಂಬೇಡು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಶವವನ್ನು ಹತ್ತಿರದ ಕಿಲ್ಪಾಕ್ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ, ಜೆಸ್ಸಿಕಾ ಅವರ ಸಂಬಂಧಿಕರಿಗೆ ಮಾಹಿತಿ ನೀಡಿ, ಶವವನ್ನು ಆಂಧ್ರ ಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ.
ಜನಪ್ರಿಯ ನಟಿಯಾಗಿದ್ದ ದೀಪಾ (ಪಾಲಿನ್ ಜೆಸ್ಸಿಕಾ) ಅವರ ಆತ್ಮಹತ್ಯೆ ಪ್ರಕರಣವನ್ನು ಎಲ್ಲ ನಿಟ್ಟಿನಿಂದಲೂ ತನಿಖೆ ಮಾಡುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲಿನ್ ಮನೆಗೆ ಯಾರಾರು ಬಂದಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ನಟಿ ಪಾಲಿನ್ ಜೆಸ್ಸಿಕಾ ಅವರು ತಮ್ಮ ಅಪಾರ್ಟ್‌ಮೆಂಟ್‌ಗೆ ಆಟೋದಲ್ಲಿ ಬಂದಿದ್ದರು ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಗೊತ್ತಾಗಿದೆ. ಜೆಸ್ಸಿಕಾ ಸಾವು ಆತ್ಮಹತ್ಯೆಯೇ ಅಥವಾ ಯಾರಾದರೂ ಆತ್ಮಹತ್ಯೆಗೆ ಪೇರೇಪಿಸಿದ್ದಾರೆಯೇ ಎಂಬ ಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಮಲಯಾಳಂ ನಟ ಶರತ್‌ಚಂದ್ರ ಆತ್ಮಹತ್ಯೆ