ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿದ ರಾಜ್ಯ ಎಂಬ ಕೀರ್ತಿಗೆ ತಮಿಳುನಾಡು ಭಾಜನವಾಗಿದೆ. ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI Report) ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಇದೆ. ಕೇಂದ್ರ ಸಾಂಖೀಕ ಮತ್ತು ಕಾರ್ಯಕ್ರಮ ಜಾರಿ ಇಲಾಖೆ ನಡೆಸಿರುವ ವಾರ್ಷಿಕ ಕೈಗಾರಿಕಾ ಸಮೀಕ್ಷೆಯ ದತ್ತಾಂಶಗಳನ್ನು ಉಲ್ಲೇಖಿಸಿ, ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ. ದೇಶದಲ್ಲಿರುವ ಒಟ್ಟು ಕೈಗಾರಿಕೆಗಳ ಪೈಕಿ ನಮ್ಮ ನೆರೆಯ ತಮಿಳುನಾಡಿನಲ್ಲೇ ಶೇ.15ರಷ್ಟಿವೆ! ನಂತರದ ಸ್ಥಾನದಲ್ಲಿ ಗುಜರಾತ್ ರಾಜ್ಯವಿದೆ.
ತಮಿಳುನಾಡಿನಲ್ಲಿ ಒಟ್ಟು 38,837 ಕೈಗಾರಿಕೆಗಳಿದ್ದರೆ, ಗುಜರಾತ್‌ನಲ್ಲಿ 28,479 ಫ್ಯಾಕ್ಟರಿಗಳಿವೆ. ಕಳೆದ ಒಂದು ದಶಕದಲ್ಲಿ ಗುಜರಾತ್ ಕೈಗಾರಿಕೆಗಳಲ್ಲಿ ಶೇ.82ರಷ್ಟು ಏರಿಕೆಯ ಹೊರತಾಗಿಯೂ ತಮಿಳನಾಡು ಪ್ರಾಬಲ್ಯವನ್ನು ಮೆರೆದಿದೆ. ಈ ಅವಧಿಯಲ್ಲಿ ತಮಿಳನಾಡು ಕೈಗಾರಿಕೆಗಳಲ್ಲಿ ಶೇ.45ರಷ್ಟು ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್ ಶೇ.11.5 ಫ್ಯಾಕ್ಟರಿಗಳನ್ನು ಹೊಂದಿದ್ದರೆ, ಮೂರನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಶೇ.10.3(25,610)ರಷ್ಟು ಕೈಗಾರಿಕೆಗಳಿವೆ. ನಂತರದ ಸ್ಥಾನದಲ್ಲಿ ಆಂಧ್ರ ಪ್ರದೇಶ 19,924(ಶೇ.6.8), ಉತ್ತರ ಪ್ರದೇಶ 19,184(ಶೇ.6.5) ಕೈಗಾರಿಕೆಗಳನ್ನು ಹೊಂದಿವೆ.
2029ರ ಹೊತ್ತಿಗೆ ಭಾರತವು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹಾಕಿಕೊಂಡಿದ್ದರೆ, ತಮಿಳುನಾಡು ಇದರ ಪೈಕಿ ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನುಸಾಧಿಸುವ ಹುಮ್ಮಸ್ಸು ತೋರುತ್ತಿದೆ. ಅದರ ಭಾಗವಾಗಿಯೇ, ಮುಂದಿನ 8 ವರ್ಷಗಳಲ್ಲಿ ತಮಿಳುನಾಡು 45 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸುತ್ತಿದೆ. ಆ ಮೂಲಕ ಭಾರತದ ಉತ್ಪಾದನೆಯ ತೊಟ್ಟಿಲು ಎಂಬ ಕೀರ್ತಿಯನ್ನು ಉಳಿಸಿಕೊಳ್ಳಲು ಹೊರಟಿದೆ.
ಇದನ್ನೂ ಓದಿ | Inflation | ಹಣದುಬ್ಬರ ವಿರುದ್ಧದ ಹೋರಾಟ ಸುದೀರ್ಘ ಸಂಭವ : ಆರ್‌ಬಿಐ ವರದಿ