Site icon Vistara News

ಮುಂದುವರಿದ ಗುದ್ದಾಟ; ರಾಜ್ಯಪಾಲರು ಕಾರಣವಿಲ್ಲದೆ ಹಿಂತಿರುಗಿಸಿದ 10 ವಿಧೇಯಕ ಮತ್ತೆ ಅಂಗೀಕರಿಸಿದ ಸ್ಟಾಲಿನ್‌ ಸರ್ಕಾರ

MK Stalin

ಚೆನ್ನೈ: ರಾಜ್ಯ ಸರ್ಕಾರ- ರಾಜ್ಯಪಾಲರ ನಡುವಿನ ಸಂಘರ್ಷದಲ್ಲಿ ತಮಿಳುನಾಡು (Tamil Nadu government) ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ರಾಜ್ಯಪಾಲರಿಂದ ಯಾವುದೇ ಕಾರಣವಿಲ್ಲದೆ ಮರಳಿ ಬಂದ 10 ವಿಧೇಯಕಗಳನ್ನು ತಮಿಳುನಾಡು ವಿಧಾನಸಭೆ ಅವಿರೋಧವಾಗಿ ಅಂಗೀಕರಿಸಿದ್ದು, ಮರಳಿ ರಾಜ್ಯಪಾಲರಲ್ಲಿಗೆ ಕಳಿಸಲು ಮುಂದಾಗಿದೆ.

ಈ ಹಿಂದೆ ಈ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಿ ರಾಜ್ಯಪಾಲ ಆರ್‌.ಎನ್ ರವಿ (RN Ravi) ಅವರಿಗೆ ಕಳಿಸಲಾಗಿತ್ತು. ಆದರೆ ಅವರು ಅವುಗಳನ್ನು ಯಾವುದೇ ಕಾರಣ ನೀಡದೆ ವಾಪಸ್ ಕಳುಹಿಸಿದ್ದರು. ಇವುಗಳನ್ನು ಮತ್ತೆ ಪುನಶ್ಚೇತನಗೊಳಿಸಲಾಗಿದೆ. ಇದರೊಂದಿಗೆ ರಾಜ್ಯಪಾಲರೊಂದಿಗಿನ ತಿಕ್ಕಾಟದಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

2020 ಮತ್ತು 2023ರಲ್ಲಿ ತಲಾ 2 ಮಸೂದೆಗಳನ್ನು ಸದನವು ಅಂಗೀಕರಿಸಿದ್ದರೆ, ಇತರ ಆರು ಮಸೂದೆಗಳನ್ನು ಕಳೆದ ವರ್ಷ ಅಂಗೀಕರಿಸಲಾಯಿತು. ರಾಜ್ಯ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನು ಕುಲಪತಿಗಳ ಸ್ಥಾನಕ್ಕೆ ಏರಿಸುವ ಮೂಲಕ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಗುರಿಯನ್ನು ಈ ವಿಧೇಯಕಗಳು ಹೊಂದಿವೆ.

ರಾಜ್ಯಪಾಲ ರವಿ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸಿದ ಸ್ಟಾಲಿನ್, ಯಾವುದೇ ಕಾರಣವಿಲ್ಲದೆ ವಿಧೇಯಕಗಳಿಗೆ ಒಪ್ಪಿಗೆ ತಡೆಹಿಡಿಯುವುದು ಸ್ವೀಕಾರಾರ್ಹವಲ್ಲ ಎಂದರು. ʼʼರಾಜ್ಯಪಾಲರು ತಮ್ಮ ವೈಯಕ್ತಿಕ ಹಿತಾಸಕ್ತಿ ಮತ್ತು ಇಗೋ ಕಾರಣದಿಂದ ಬಿಲ್‌ಗಳನ್ನು ಹಿಂದಿರುಗಿಸಿದ್ದಾರೆ. ಒಪ್ಪಿಗೆ ನೀಡದಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನವಿರೋಧಿ. ಮತ್ತೆ ವಿಧಾನಸಭೆಯಲ್ಲಿ ಮಸೂದೆಗಳನ್ನು ಅಂಗೀಕರಿಸಿ ಅವರಿಗೆ ಕಳುಹಿಸಿದರೆ ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳನ್ನು ರಾಜ್ಯಪಾಲರ ಮೂಲಕ ಕೇಂದ್ರದಿಂದ ಹತ್ತಿಕ್ಕಲಾಗುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಡಿಎಂಕೆ ಸರ್ಕಾರ ಮತ್ತು ತಮಿಳುನಾಡು ರಾಜ್ಯಪಾಲರ ನಡುವೆ ವಾಗ್ವಾದ ನಡೆದಿದೆ. ಜನವರಿ 4ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲ ರವಿ ಅವರು ತಮ್ಮ ಹೇಳಿಕೆಯಿಂದ ರಾಜ್ಯದ ಹೆಸರಿನ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದರು. “ಇಲ್ಲಿ ತಮಿಳುನಾಡಿನಲ್ಲಿ ವಿಭಿನ್ನ ರೀತಿಯ ನಿರೂಪಣೆಯನ್ನು ರಚಿಸಲಾಗಿದೆ. ಇಡೀ ದೇಶಕ್ಕೆ ಅನ್ವಯಿಸುವುದು ಯಾವುದು ಇದೆಯೋ ಅದನ್ನು ತಮಿಳುನಾಡು ನಿರಾಕರಿಸುತ್ತದೆ. ಇದು ಅಭ್ಯಾಸವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸುಳ್ಳು ಮತ್ತು ಕಾಲ್ಪನಿಕ ಇತಿಹಾಸವನ್ನು ರಚಿಸಲಾಗಿದೆ. ಸತ್ಯವು ಮೇಲುಗೈ ಸಾಧಿಸಬೇಕು. ತಮಿಳಗಂ ಅದನ್ನು ಕರೆಯಲು ಹೆಚ್ಚು ಸೂಕ್ತವಾದ ಪದವಾಗಿದೆ” ಎಂದಿದ್ದರು.

ನವೆಂಬರ್ 10ರಂದು ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ರಾಜ್ಯಪಾಲರ ವಿಳಂಬದ ಬಗ್ಗೆ “ಗಂಭೀರ ಕಳವಳ” ವ್ಯಕ್ತಪಡಿಸಿತ್ತು. ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯಲ್ಲಿ, ʼʼತಮಿಳುನಾಡು ರಾಜ್ಯಪಾಲರು ಸಾಂವಿಧಾನಿಕ ಆದೇಶವನ್ನು ಅನುಸರಿಸಲು ನಿಷ್ಕ್ರಿಯತೆ, ಲೋಪ, ವಿಳಂಬ ಮತ್ತು ವಿಫಲತೆ ತೋರಿಸಿದ್ದಾರೆ. ರಾಜ್ಯ ಶಾಸಕಾಂಗವು ಅವರ ಸಹಿಗಾಗಿ ರವಾನಿಸಿದ ಕಡತಗಳು, ಸರ್ಕಾರಿ ಆದೇಶಗಳು ಮತ್ತು ನೀತಿಗಳನ್ನು ಪರಿಗಣಿಸದಿರುವುದು ಅಸಾಂವಿಧಾನಿಕ, ಕಾನೂನುಬಾಹಿರ, ಅಸಮಂಜಸʼʼ ಎಂದಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ 10 ವಿಧೇಯಕ ಹಿಂದಿರುಗಿಸಿದ ತಮಿಳು ನಾಡು ರಾಜ್ಯಪಾಲ!

Exit mobile version