Site icon Vistara News

Tapas Roy: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತೊರೆದ ಹಿರಿಯ ನಾಯಕ ತಪಸ್​ ರಾಯ್; ಕಾರಣವೇನು?

thapas roy

thapas roy

ಕೋಲ್ಕತ್ತಾ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ (Lok Sabha Election)ಗಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಪಶ್ವಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ (Trinamool Congress) ಆಘಾತವೊಂದು ಎದುರಾಗಿದೆ. ಹಿರಿಯ ನಾಯಕ, ಶಾಸಕ ತಪಸ್​ ರಾಯ್(Tapas Roy)​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾರಣವೇನು?

ನಾಗರಿಕ ಸಂಸ್ಥೆಗಳಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತಪಸ್‌ ರಾಯ್‌ ಸೇರಿ ಹಲವು ನಾಯಕರ ಮನೆ, ಕಚೇರಿಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದರು. ಈ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಬಲಕ್ಕೆ ನಿಂತಿಲ್ಲ. ತಮ್ಮ ಪರವಾಗಿ ಒಂದೇ ಮಾತು ಆಡಿಲ್ಲ, ಇತರ ನಾಯಕರ ಮನೆ ಮೇಲೂ ದಾಳಿ ನಡೆದಿತ್ತು. ಆಗ ಅವರು ಆ ನಾಯಕರ ಪರವಾಗಿ ನಿಂತಿದ್ದರು ಎಂದು ತಪಸ್​ ರಾಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಪಕ್ಷದ ಕಾರ್ಯವೈಖರಿಯಿಂದ ನನಗೆ ನಿಜವಾಗಿಯೂ ನಿರಾಶೆಯಾಗಿದೆ. ಪಕ್ಷ ಮತ್ತು ಸರ್ಕಾರದ ವಿರುದ್ಧ ಕೇಳಿಬಂದ ಅನೇಕ ಭ್ರಷ್ಟಾಚಾರದ ಆರೋಪಗಳಿಂದ ಬೇಸತ್ತಿದ್ದೇನೆ. ಅಲ್ಲದೆ ಸಂದೇಶ್‌ಖಾಲಿ ಹಿಂಸಾಚಾರವನ್ನು ಪಕ್ಷ ಭಾಯಿಸಿದ ರೀತಿಯೂ ನನಗೆ ಸರಿ ಕಂಡಿಲ್ಲʼʼ ಎಂದು ಅವರು ರಾಜೀನಾಮೆಯ ಕಾರಣವನ್ನು ವಿವರಿಸಿದ್ದಾರೆ. ಈ ಹಿಂದೆಯೂ ಅವರು ಸಂದೇಶ್‌ಖಾಲಿ ಪ್ರಕರಣದಲ್ಲಿ ಪಕ್ಷವನ್ನು ಟೀಕಿಸಿದ್ದರು.

ಬಿಜೆಪಿ ಸೇರುತ್ತಾರ?

ಈ ಮಧ್ಯೆ ಟಿಎಂಸಿ ತೊರೆದ ತಪಸ್​ ರಾಯ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಊಹಾಪೋಹ ಹಬ್ಬಿದೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ʼʼಈ ಬಗ್ಗೆ ಏನನ್ನೂ ಹೇಳುವುದಿಲ್ಲʼʼ ಎಂದು ಅವರು ಹಾರಿಕೆಯ ಉತ್ತರ ನೀಡಿದ್ದಾರೆ.

ಏನಿದು ಪ್ರಕರಣ?

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಫೆಬ್ರವರಿ 14ರಿಂದ ಹಿಂಸಾಚಾರ ನಡೆದಿತ್ತು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಕ್ರಮವಾಗಿ ಭೂಸ್ವಾಧೀನ ಮಾಡಿಕೊಂಡ ಆರೋಪದಲ್ಲಿ ತಲೆಮರೆಸಿಕೊಂಡಿರುವ ತೃಣಮೂಲ ಕಾಂಗ್ರೆಸ್  ಶೇಖ್‌ ಶಹಜಹಾನ್‌ನನ್ನು ಬಂಧಿಬೇಕು ಎಂದು ಪ್ರತಿಭಟನೆ ನಡೆದಿತ್ತು. ಇದೇ ಪ್ರದೇಶದಲ್ಲಿರುವ ಶಹಜಹಾನ್ ಮನೆಗೆ ಜನವರಿ 5ರಂದು ಇಡಿ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಶಹಜಹಾನ್‌ ಬೆಂಬಲಿಗರು ಹಾಗೂ ಕೆಲವು ಗ್ರಾಮಸ್ಥರು ಸೇರಿ ದಾಳಿ ನಡೆಸಿದ್ದರು. ಆಗ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು.

ಇದನ್ನೂ ಓದಿ: ED Raid: ಹಗರಣ; ಪಶ್ಚಿಮ ಬಂಗಾಳ ಸಚಿವ, ಶಾಸಕನಿಗೆ ಇ.ಡಿ ಶಾಕ್‌

ಶಹಜಹಾನ್ ತಲೆಮರೆಸಿಕೊಂಡ ಒಂದು ತಿಂಗಳ ನಂತರ, ಫೆಬ್ರವರಿ 8ರಂದು, ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಪೊರಕೆ ಮತ್ತು ಬಡಿಗೆಗಳೊಂದಿಗೆ ಬೀದಿಗಿಳಿದರು. ಆತನ ಇಬ್ಬರು ಸಹಾಯಕರಾದ ಶಿಬಾ ಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಮರುದಿನ, ಪ್ರತಿಭಟನಾಕಾರರು ಹಜ್ರಾಗೆ ಸೇರಿದ ಆಸ್ತಿಗಳ ಮೇಲೆ ದಾಳಿ ಮಾಡಿ ಅವರ ಕೋಳಿ ಫಾರಂಗೆ ಬೆಂಕಿ ಹಚ್ಚಿದರು. ಟಿಎಂಸಿ ನಾಯಕ ಕಬಳಿಸಿರುವ ಜಮೀನಿನಲ್ಲಿ ಕೋಳಿ ಫಾರಂ ಸ್ಥಾಪಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದರು. ಕೊನೆಗೂ ಫೆಬ್ರವರಿ 29ರಂದು ಶೇಖ್ ಶಹಜಹಾನ್‌ನನ್ನು ಬಂಧಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version