ನವದೆಹಲಿ: ಟಾಟಾ ಗ್ರೂಪ್ ಒಡೆತನದ (Tata Group) ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್ (TCPL) ಕಂಪನಿಯು ಕ್ಯಾಪಿಟಲ್ ಫುಡ್ಸ್ (Capital Foods) ಹಾಗೂ ಆರ್ಗ್ಯಾನಿಕ್ ಇಂಡಿಯಾ (Organic India) ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಡೀಲ್ ಕುದುರಿಸಿದೆ. ಆಹಾರ ಪದಾರ್ಥಗಳನ್ನು ಉತ್ಪಾದಿಸುವ ಕಂಪನಿಯಾದ ಕ್ಯಾಪಿಟಲ್ ಫುಡ್ಸ್ ಕಂಪನಿಯನ್ನು ಸುಮಾರು 5,100 ಕೋಟಿ ರೂ. ಹಾಗೂ ಸಾವಯವ, ಆಯುರ್ವೇದಿಕ್ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ಉತ್ಪಾದಿಸುವ ಆರ್ಗ್ಯಾನಿಕ್ ಇಂಡಿಯಾ ಕಂಪನಿಯನ್ನು 1,900 ಕೋಟಿ ರೂ. ಕೊಟ್ಟು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ (ಜನವರಿ 12) ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಯು ಈ ಎರಡೂ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕುರಿತು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಕ್ಯಾಪಿಟಲ್ ಫುಡ್ಸ್ ಕಂಪನಿಯು ಚಿಂಗ್ಸ್ ಸೀಕ್ರೆಟ್ ಹಾಗೂ ಸ್ಮಿತ್ & ಜೋನ್ಸ್ ಬ್ರ್ಯಾಂಡ್‌ಗಳ ಅಡಿಯಲ್ಲಿ ಆಹಾರ ಉತ್ಪನ್ನಗಳನ್ನು ತಯಾರಿಸುತ್ತದೆ. ಚಿಂಗ್ಸ್ ಸೀಕ್ರೆಟ್ ಬ್ರ್ಯಾಂಡ್ ಅಡಿಯಲ್ಲಿ ಫ್ಲೇವರ್ಡ್ ಇನ್‌ಸ್ಟಂಟ್ ನೂಡಲ್ಸ್, ಹಕ್ಕಾ ನೂಡಲ್ಸ್ ಸೇರಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.
ಮತ್ತೊಂದೆಡೆ, ಸ್ಮಿತ್ & ಜೋನ್ಸ್ ಬ್ರ್ಯಾಂಡ್‌ನ ಅಡಿಯಲ್ಲಿ ಪೆರಿ ಪೆರಿ ಮಸಾಲಾ, ಮಟರ್ ಪನೀರ್ ಮಸಾಲಾ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಶಾಹಿ ಪನೀರ್ ಮಸಾಲಾ ಸೇರಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಈ ಎರಡೂ ಬ್ರ್ಯಾಂಡ್‌ಗಳು ಇರುವ ಕ್ಯಾಪಿಟಲ್ ಫುಡ್ಸ್ ಕಂಪನಿಯ ಶೇ.100ರಷ್ಟು ಷೇರುಗಳನ್ನು ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಆರಂಭದಲ್ಲಿ ಶೇ.75ರಷ್ಟು ಷೇರುಗಳನ್ನು ಖರೀದಿಸಿ, ಮೂರು ವರ್ಷದಲ್ಲಿ ಉಳಿದ ಶೇ.25ರಷ್ಟು ಷೇರುಗಳನ್ನು ಖರೀದಿಸುವುದು ಒಪ್ಪಂದದ ಭಾಗವಾಗಿದೆ.
ಇದನ್ನೂ ಓದಿ: Tata Punch EV: ಟಾಟಾ ಪಂಚ್ ಎಲೆಕ್ಟ್ರಿಕ್ ಕಾರ್ ಲಾಂಚ್, ಏನೆಲ್ಲಾ ವಿಶೇಷತೆಗಳಿವೆ?
ಫ್ಯಾಬ್ ಇಂಡಿಯಾ ಒಡೆತನದ, ಚಹಾ ಪುಡಿ, ಗಿಡಮೂಲಿಕೆ, ಆಯುರ್ವೇದ ಉತ್ಪನ್ನಗಳನ್ನು ಮಾರಾಟ ಮಾಡುವ ಆರ್ಗ್ಯಾನಿಕ್ ಇಂಡಿಯಾ ಕಂಪನಿಯನ್ನು ಕೂಡ 1,900 ಕೋಟಿ ರೂ. ಕೊಟ್ಟು ಖರೀದಿಸಲು ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಯದ್ದೂ ಶೇ.100ರಷ್ಟು ಷೇರುಗಳನ್ನು ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಖರೀದಿಸುವ ಕುರಿತು ಒಪ್ಪಂದ ಮಾಡಿಕೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ