Site icon Vistara News

Tata Motors: 2 ಕಂಪನಿಗಳಾಗಿ ಟಾಟಾ ಮೋಟರ್ಸ್‌ ವಿಂಗಡಣೆ; ಏನಿದಕ್ಕೆ ಕಾರಣ?

TATA MOTORS

Tata Motors to Split Business Into 2 Separate Companies; Board Approves Proposal

ಮುಂಬೈ: ಕಾರುಗಳು ಸೇರಿ ದೇಶದಲ್ಲಿ ವಾಹನ ತಯಾರಿಕೆಗೆ ಹೆಸರು ವಾಸಿಯಾಗಿರುವ, ಟಾಟಾ ಗ್ರೂಪ್‌ನ (Tata Group) ಅಂಗಸಂಸ್ಥೆಯೂ ಆಗಿರುವ ಟಾಟಾ ಮೋಟರ್ಸ್‌ ಲಿಮಿಟೆಡ್‌ ಕಂಪನಿಯು (Tata Motors Limited) ಎರಡು ಕಂಪನಿಗಳಾಗಿ ವಿಂಗಡಣೆಯಾಗಲಿವೆ. ಟಾಟಾ ಮೋಟರ್ಸ್‌ ಕಂಪನಿಯನ್ನು ಎರಡು ಕಂಪನಿಗಳನ್ನಾಗಿ ವಿಂಗಡಿಸುವ ಪ್ರಸ್ತಾಪಕ್ಕೆ ನಿರ್ದೇಶಕರ ಮಂಡಳಿಯು (Board Of Directors) ಅನುಮೋದನೆ ನೀಡಿದೆ. ಶೀಘ್ರದಲ್ಲೇ ಕಂಪನಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಟಾಟಾ ಮೋಟರ್ಸ್‌ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯ ಸಭೆ ನಡೆದಿದೆ. ಟಾಟಾ ಮೋಟರ್ಸ್‌ಅನ್ನು ಎರಡು ವಿಭಾಗಗಳಾಗಿ ವಿಂಗಡಿಸಲು ಮಂಡಳಿ ಸಮ್ಮತಿ ಸೂಚಿಸಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (NCLT) ಅನ್ವಯ ಎರಡು ಕಂಪನಿಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ. ಎರಡು ಹೊಸ ಕಂಪನಿಗಳಲ್ಲಿ ಹೂಡಿಕೆ, ನೋಂದಣಿ, ವಾಹನಗಳ ಉತ್ಪಾದನೆ ಕುರಿತು ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂದು ಕಂಪನಿಯು ಪ್ರಕಟಣೆ ಮೂಲಕ ತಿಳಿಸಿದೆ.

“ಎರಡು ಕಂಪನಿಗಳಾಗಿ ವಿಭಜಿಸಿದ ಬಳಿಕ ಒಂದು ಕಂಪನಿಯನ್ನು ವಾಣಿಜ್ಯಿಕ ವಾಹನಗಳ ತಯಾರಿಕೆ, ಮಾರಾಟಕ್ಕೆ ಮೀಸಲಿರಿಸಿದರೆ, ಮತ್ತೊಂದು ಕಂಪನಿಯನ್ನು ಪ್ಯಾಸೆಂಜರ್‌ ವಾಹನಗಳ ಉತ್ಪಾದನೆ, ಮಾರಾಟಕ್ಕೆ ನಿಗದಿಪಡಿಸಲಾಗುತ್ತದೆ. ಪ್ಯಾಸೆಂಜರ್‌ ವಾಹನಗಳ ತಯಾರಿಕಾ ಕಂಪನಿಯೇ ವಿದ್ಯುತ್‌ಚಾಲಿತ ವಾಹನಗಳು, ಜಾಗ್ವಾರ್‌, ಲ್ಯಾಂಡ್‌ ರೋವರ್‌ ಕಾರುಗಳನ್ನು ಕೂಡ ತಯಾರಿಸಲಿದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ಹೂಡಿಕೆ ಮಾಡಲಾಗುತ್ತದೆ” ಎಂದು ಕಂಪನಿಯ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Tata Nexon : ಮತ್ತೆ 5 ಸ್ಟಾರ್​ ಸೇಫ್ಟಿ ರೇಟಿಂಗ್ ಗಿಟ್ಟಿಸಿಕೊಂಡ ಟಾಟಾ ನೆಕ್ಸಾನ್​

“ಟಾಟಾ ಮೋಟರ್ಸ್‌ ಲಿಮಿಟೆಡ್‌ನಲ್ಲಿ ಉದ್ಯಮಿಗಳು ಹೊಂದಿರುವ ಷೇರುಗಳನ್ನು ಎರಡೂ ಕಂಪನಿಗಳಲ್ಲಿ ಮುಂದುವರಿಸಲಾಗುತ್ತದೆ. 2022ರಿಂದಲೂ ಟಾಟಾ ಮೋಟರ್ಸ್‌ ಕಂಪನಿಯ ವಿಭಜನೆಗೆ ಚಿಂತನೆ ನಡೆದಿತ್ತು. ಒಂದಷ್ಟು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮಂಡಳಿಯು ಪ್ರಸ್ತಾಪಕ್ಕೆ ಅನುಮತಿ ನೀಡಿದೆ. ಷೇರುಗಳ ಹಂಚಿಕೆ, ಹೂಡಿಕೆ, ನಿಬಂಧನೆಗಳಿಗೆ ಒಪ್ಪಿಗೆ ಸೇರಿ ಎಲ್ಲ ಪ್ರಕ್ರಿಯೆ ಮುಗಿದು, ಎರಡು ಕಂಪನಿಗಳಾಗಿ ವಿಂಗಡಣೆಯಾಗಲು ಸುಮಾರು 12-15 ತಿಂಗಳು ಬೇಕಾಗುತ್ತದೆ” ಎಂದು ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version