Site icon Vistara News

ಸಿಂಗೂರು ಭೂ ವಿವಾದ; ಹೋರಾಟ ಗೆದ್ದ ಟಾಟಾ ಮೋಟರ್ಸ್‌, 766 ಕೋಟಿ ರೂ. ಪರಿಹಾರಕ್ಕೆ ಆದೇಶ!

TATA Motors

Tata Motors wins Singur verdict, to recover Rs 766 crore with interest

ನವದೆಹಲಿ: ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ಮೋಟರ್ಸ್‌ (TATA Motors) ಸಂಸ್ಥೆಯು ನ್ಯಾನೋ ಕಾರು ಉತ್ಪಾದನೆ ಘಟಕ ಸ್ಥಾಪಿಸುವ ಕುರಿತ ಪ್ರಕರಣದಲ್ಲಿ ಸುದೀರ್ಘ ಕಾನೂನು ಹೋರಾಟದ ಬಳಿಕ ಟಾಟಾ ಮೋಟರ್ಸ್‌ಗೆ ಜಯ ಸಿಕ್ಕಿದೆ. ಸಿಂಗೂರು ಘಟಕದಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಬಡ್ಡಿ ಸೇರಿಸಿ ಒಟ್ಟು 766 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆರ್ಬಿಟ್ರಲ್‌ ಟ್ರಿಬ್ಯುನಲ್‌ (Arbitral Tribunal- ಮಧ್ಯಸ್ಥಿಕೆ ನ್ಯಾಯಾಧಿಕರಣ) ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ.

ಟಾಟಾ ಮೋಟರ್ಸ್‌ ಲಿಮಿಟೆಡ್‌ (TML) ಹಾಗೂ ಪಶ್ಚಿಮ ಬಂಗಾಳ ಕೈಗಾರಿಕೆ ಅಭಿವೃದ್ಧಿ ನಿಗಮ ಲಿಮಿಟೆಡ್‌ನ (WBIDC) ವಾದ-ಪ್ರತಿವಾದ ಆಲಿಸಿದ ಮೂವರು ಸದಸ್ಯರ ನ್ಯಾಯಾಧಿಕರಣವು, ಶೇ.11ರಷ್ಟು ಬಡ್ಡಿದರದ ಸಮೇತ ಒಟ್ಟು 766 ಕೋಟಿ ರೂಪಾಯಿಯನ್ನು ಟಾಟಾ ಮೋಟರ್ಸ್‌ಗೆ ಪಶ್ಚಿಮ ಬಂಗಾಳ ಕೈಗಾರಿಕೆ ಅಭಿವೃದ್ಧಿ ನಿಗಮ ಲಿಮಿಟೆಡ್‌ ಪರಿಹಾರವಾಗಿ ನೀಡಬೇಕು ಎಂಬುದಾಗಿ ಆದೇಶಿಸಿತು. ಇದು ರಾಜ್ಯ ಸರ್ಕಾರಕ್ಕೆ ಉಂಟಾದ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ಏನಿದು ಪ್ರಕರಣ?

2006ರಲ್ಲಿ ಟಾಟಾ ಗ್ರೂಪ್‌ ಚೇರ್ಮನ್‌ ರತನ್‌ ಟಾಟಾ ಅವರು ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ನ್ಯಾನೋ ಕಾರುಗಳ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಇದಕ್ಕಾಗಿ ಒಂದು ಸಾವಿರ ಎಕರೆ ಭೂಸ್ವಾಧೀನಕ್ಕೆ ಆಗಿನ ಸಿಪಿಎಂ ಸರ್ಕಾರವೂ ಒಪ್ಪಿಕೊಂಡಿತು. ಆದರೆ, ರೈತರ ಜಮೀನನ್ನು ನ್ಯಾನೋ ಘಟಕಕ್ಕೆ ನೀಡುವುದರ ವಿರುದ್ಧ ರೈತರ ಹೋರಾಟ ಆರಂಭವಾಯಿತು. ಪ್ರತಿಪಕ್ಷದಲಿದ್ದ ಮಮತಾ ಬ್ಯಾನರ್ಜಿ ಅವರೂ ಹೋರಾಟ ಆರಂಭಿಸಿದರು. ಇದರಿಂದಾಗಿ 2008ರಲ್ಲಿ ಸಿಂಗೂರಿನಲ್ಲಿ ಟಾಟಾ ಮೋಟರ್ಸ್‌ ಕೆಲಸ ಸ್ಥಗಿತಗೊಳಿಸಿತು.

ಇದನ್ನೂ ಓದಿ: iPhone: ಭಾರತದಲ್ಲಿ ಟಾಟಾದಿಂದ ಐಫೋನ್ ಉತ್ಪಾದನೆ! ಸುದ್ದಿ ಖಚಿತಪಡಿಸಿದ ಕೇಂದ್ರ

ಅಷ್ಟೇ ಅಲ್ಲ, 2011ರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮಮತಾ ಬ್ಯಾನರ್ಜಿ ಅವರು ಟಾಟಾ ಮೋಟರ್ಸ್‌ಗೆ ನೀಡಿದ್ದ ಭೂಮಿಯನ್ನು ರೈತರಿಗೆ ಹಿಂತಿರುಗಿಸುವ ಕುರಿತು ಸುಗ್ರೀವಾಜ್ಞೆ ಹೊರಡಿಸಿದರು. ಇದನ್ನು ಪ್ರಶ್ನಿಸಿ ಟಾಟಾ ಮೋಟರ್ಸ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 2016ರಲ್ಲಿ ಸುಪ್ರೀಂ ಕೋರ್ಟ್‌, ಟಾಟಾ ಮೋಟರ್ಸ್‌ ಹಾಗೂ ಸರ್ಕಾರದ ನಡುವಿನ ಒಪ್ಪಂದವನ್ನು ರದ್ದುಗೊಳಿಸಿತ್ತು. ಹಾಗೆಯೇ, ರೈತರಿಗೆ ಭೂಮಿ ನೀಡಬೇಕು ಎಂದಿತ್ತು. ಆದರೆ, ಘಟಕ ಸ್ಥಾಪನೆಗೆ ಹೂಡಿದ ಹಣದ ಪರಿಹಾರಕ್ಕಾಗಿ ಟಾಟಾ ಮೋಟರ್ಸ್‌ ಕಂಪನಿಯು ಆರ್ಬಿಟ್ರಲ್‌ ಟ್ರಿಬ್ಯುನಲ್‌ ಮೊರೆ ಹೋಗಿತ್ತು. ಈಗ 2016ರ ಸೆಪ್ಟೆಂಬರ್‌ 1ರಿಂದ ಇದುವರೆಗೆ ಬಡ್ಡಿ ಸಮೇತ ಟಾಟಾ ಮೋಟರ್ಸ್‌ಗೆ ಪರಿಹಾರ ನೀಡುವಂತೆ ನ್ಯಾಯಾಧಿಕರಣ ಆದೇಶಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version