ನವ ದೆಹಲಿ: ಅಂತಾರಾಷ್ಟ್ರೀಯ ಮಟ್ಟದ ಕಾಫಿ ಹೌಸ್ ಟಾಟಾ ಸ್ಟಾರ್ಬಕ್ಸ್ (Starbucks) ತನ್ನ ಮಳಿಗೆಗಳ ವಿಸ್ತರಣೆಯನ್ನು ಮಂಗಳವಾರ ಘೋಷಿಸಿದೆ. ಪ್ರಸ್ತುತ ಇರುವ 390 ಕಾಫಿ ಹೌಸ್ನಿಂದ 2028ರ ವೇಳೆಗೆ 1,000 ಮಳಿಗೆಗಳಿಗೆ ವಿಸ್ತರಿಸುವುದಾಗಿ ಹೇಳಿದೆ. ಹೀಗಾಗಿ ಭಾರತದ ನಗರಗಳಲ್ಲಿ ಸ್ಟಾರ್ ಬಕ್ಸ್ ಮಳಿಗೆಗಳ ಸಂಖ್ಯೆ ಹೆಚ್ಚಾಗಲಿದ್ದು ಸುಲಭವಾಗಿ ಈ ಪ್ರತಿಷ್ಠಿತ ಕಾಫಿ ಹೌಸ್ನಲ್ಲಿ ಕಾಫಿ ಕುಡಿಯಬಹುದು. ಟಾಟಾ ಗ್ರೂಪ್ ಮತ್ತು ಜಾಗತಿಕ ಕಾಫಿ ಜಾಲವಾಗಿರುವ ಸ್ಟಾರ್ಬಕ್ಸ್ ನಡುವಿನ ಸಮಾನ ಜಂಟಿ ಉದ್ಯಮ ಇದಾಗಿದ್ದು ,ಪ್ರತಿ ಮೂರು ದಿನಗಳಿಗೊಮ್ಮೆ ಹೊಸ ಮಳಿಗೆ ಆರಂಭಿಸುವ ಯೋಜನೆಯನ್ನು ಹೊಂದಿದೆ. ಈ ಮೂಲಕ ಭಾರತದ 2ನೇ ಹಾಗೂ 3ನೇ ಹಂತದ ನಗರಗಳನ್ನು ಪ್ರವೇಶಿಸಲು ಮುಂದಾಗಿದೆ.
ಭಾರತ 2030ರ ವೇಳೆಗೆ ಜಾಗತಿಕವಾಗಿ 3ನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ. ಹೀಗಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಲು ಸ್ಟಾರ್ಬಕ್ಸ್ ಯೋಜನೆ ರೂಪಿಸಿದೆ. 2028ರ ವೇಳೆಗೆ ಒಟ್ಟಾರೆ ಅಸ್ತಿತ್ವವನ್ನು 1,000 ಮಳಿಗೆಗಳಿಗೆ ಕೊಂಡೊಯ್ಯುವ ಗುರಿಯ ಜತೆಗೆ ಸ್ಟಾರ್ಬಕ್ಸ್ನ ಉದ್ಯೋಗಿಗಳ ಸಂಖ್ಯೆ 8,600ಕ್ಕೆ ದ್ವಿಗುಣಗೊಳ್ಳಲಿದೆ. ಎಲ್ಲ ಹಂತದ ಭಾರತೀಯ ನಗರಗಳು. ವಿಮಾನ ನಿಲ್ದಾಣಗಳು ಮತ್ತು 24 ಗಂಟೆಗಳ ಕಾಲ ತೆರೆದಿಡುವಂಥ ಕಾಫಿ ಹೌಸ್ಗಳನ್ನು ನಿರ್ಮಿಸುವುದು ಸ್ಟಾರ್ ಬಕ್ಸ್ ಉದ್ದೇಶವಾಗಿದೆ.
ಸ್ಟಾರ್ ಬಕ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್ ನರಸಿಂಹನ್ ಈ ವಾರ ಭಾರತಕ್ಕೆ ಭೇಟಿ ನೀಡಿದ ನಂತರ ಈ ಪ್ರಕಟಣೆ ಹೊರಡಿಸಿದ್ದಾರೆ. ಭಾರತದಲ್ಲಿ ಹೆಚ್ಚಾಗುತ್ತಿರುವ ಮಧ್ಯಮ ವರ್ಗದ ಜನರ ಜತೆಗೆ ಕಾಫಿ ಸಂಸ್ಕೃತಿಯನ್ನು ಬೆಳೆಸಲು ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದ್ದಾರೆ. ಕಳೆದ 11 ವರ್ಷಗಳಿಂದ ಭಾರತದಲ್ಲಿ ಅಸ್ತಿತ್ವದಲ್ಲಿರುವ ಕಂಪನಿಯು, ಲಭ್ಯ ಅವಕಾಶಗಳನ್ನು ಸದುಪಯೋಗಪಡಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : National pension scheme : ನ್ಯಾಶನಲ್ ಪೆನ್ಷನ್ ಸ್ಕೀಮ್ ಜನರಿಗೆ ಹೇಗೆ ಇಳಿ ವಯಸ್ಸಿನಲ್ಲಿ ಪಿಂಚಣಿ ಒದಗಿಸುತ್ತದೆ?
ಶೇಕಡಾ 71ರಷ್ಟು ಪ್ರಗತಿ
ವರದಿಯ ಪ್ರಕಾರ 2023 ರ ಹಣಕಾಸು ವರ್ಷದಲ್ಲಿ ಕಂಪನಿಯ ಮಾರಾಟವು ಶೇಕಡಾ 71ರಷ್ಟು ಏರಿಕೆಯಾಗಿ 1,087 ಕೋಟಿ ರೂ.ಗೆ ತಲುಪಿದೆ. ನಾವು ಅಭಿವೃದ್ಧಿಯ ಮುಂದಿನ ಅಧ್ಯಾಯಕ್ಕೆ ಸಾಗುತ್ತಿದ್ದೇವೆ. ನಮ್ಮ ಗ್ರಾಹಕರೊಂದಿಗೆ ಸಂಪರ್ಕ ಹೆಚ್ಚಿಸುತ್ತಿದ್ದೇವೆ. ಜತೆಗೆ ಭಾರತದ ಕಾಫಿ ಸಂಸ್ಕೃತಿಯನ್ನು ವಿಸ್ತರಿಸುತ್ತೇವೆ ಎಂದು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಡಿಸೋಜಾ ಹೇಳಿದ್ದಾರೆ.
ಚಿಲ್ಲರೆ ಉದ್ಯಮಗಳಲ್ಲಿ ವೃತ್ತಿಜೀವನವನ್ನು ಬಯಸುವ ಯುವತಿಯರಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡುವ ಮೂಲಕ ಕಂಪನಿಯು ಭಾರತದಲ್ಲಿ ಮಹಿಳಾ ಸಬಲೀಕರಣ ಮಾಡಲಿದೆ ಎಂದು ಸ್ಟಾರ್ ಬಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.