Site icon Vistara News

ಶಿಕ್ಷಕರ ಕೊರತೆ: ತಮಿಳುನಾಡಿನ 2,381 ಶಾಲೆಗಳಲ್ಲಿದ್ದ ಶಿಶು ವಿಹಾರ ಬಂದ್‌

Education News age calculator for school admission in karnataka

ಚೆನ್ನೈ: ತಮಿಳು ನಾಡಿನಲ್ಲಿ ಮೂರು ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದ ಕಿಂಡರ್ ಗಾರ್ಟನ್ ವಿಭಾಗವನ್ನು ಮುಚ್ಚಲಾಗಿದೆ. 2,381 ಸರ್ಕಾರಿ ಶಾಲೆಗಳ ಶಿಶು ವಿಹಾರ ವಿಭಾಗಗಳು ಬಂದ್‌ ಆಗಿದ್ದು, LKG ಹಾಗೂ UKGಗಳಿಗೆ ನಿಯೋಜಿಸಲಾಗಿದ್ದ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಲಾಗಿದೆ. 2022-23ನೇ ಸಾಲಿನಲ್ಲಿ ಈ ಶಾಲೆಗಳಲ್ಲಿ ಯಾವುದೇ ಪ್ರವೇಶವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಂಟೆಸ್ಸರಿ ಆಧಾರಿತ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಆಯ್ಕೆ ಮಾಡಿದ 43,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರಗಳಲ್ಲಿ ಕಲಿಕೆ ಮುಂದುವರಿಸಬೇಕಾಗಿದೆ.

2019-20‌ನೇ ಸಾಲಿನಲ್ಲಿ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ 2,381 ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ LKG ಮತ್ತು UKG ತರಗತಿಗಳನ್ನು ಪ್ರಾರಂಭಿಸಲಾಗಿತ್ತು ಮತ್ತು ವಿದ್ಯಾರ್ಥಿಗಳಿಗೆ ಕಲಿಸಲು ಹೆಚ್ಚುವರಿ ಶಿಕ್ಷಕರನ್ನು ನೇಮಿಸಿತ್ತು. ಈಗ ಅವರನ್ನು ಪ್ರಧಾನ ಶಾಲೆಗಳಿಗೆ ಸೇರಿಸಲಾಗಿದೆ. “ಕಳೆದ ವರ್ಷ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದೊಡ್ಡ ವಲಸೆಯ ನಂತರ, ಸರ್ಕಾರಿ ಪ್ರಾಥಮಿಕ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸಿತು. 1 ಮತ್ತು 2ನೇ ತರಗತಿಗೆ ಹೆಚ್ಚುವರಿ ಶಿಕ್ಷಕರು ಬೇಕಾಯಿತು. ನಮಗೀಗ 4500 ಶಿಕ್ಷಕರ ಅಗತ್ಯವಿದೆ. ಈಗ ಪೂರ್ವ ಪ್ರಾಥಮಿಕ ಶಾಲೆಗಳಿಂದ 2,381 ಶಿಕ್ಷಕರನ್ನು ವರ್ಗ ಮಾಡಿಕೊಳ್ಳಲಾಗಿದೆ,ʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರು ಚಿಂತನೆಗೆ ಶಿಕ್ಷಣ ತಜ್ಞರ ಆಗ್ರಹ

ಕೆ.ಜಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ವಿಚಾರದ ಬಗ್ಗೆ ಸರಕಾರ ಮರುಚಿಂತನೆ ನಡೆಸಬೇಕು ಎಂದು ಹಲವಾರು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪೂರ್ವ ಪ್ರಾಥಮಿಕ ಹಂತದ ಮಾಂಟೆಸ್ಸರಿ ವ್ಯವಸ್ಥೆಯು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲಗಳ ಸದೃಢ ಪರಿಚಯವನ್ನು ನೀಡುತ್ತದೆ. ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ LKG, UKG ತರಗತಿಗಳನ್ನು ಮರಳಿ ತರಬೇಕು ಎಂದು ಮಾಜಿ ಒಪಕುಲಪತಿ ವಿ ವಸಂತಾ ದೇವಿ ಹೇಳಿದ್ದಾರೆ.

ಇದನ್ನೂ ಓದಿ : world Environment day: ಶಾಲೆಗೇ ಹೋಗದ ಇವರಿಗೆಲ್ಲ ಪರಿಸರ ಪಾಠ ಹೇಳಿಕೊಟ್ಟಿದ್ಯಾರು?

Exit mobile version