Site icon Vistara News

Teachers Day: ತತ್ವಜ್ಞಾನಿ, ಗುರುಗಳ ಗುರು ರಾಧಾಕೃಷ್ಣನ್

teachers day dr sarvepalli radhakrishnan

:: ಡಾ. ಡಿ.ಸಿ. ರಾಮಚಂದ್ರ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ |
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

ಇದು ವೇದದ ಸಾಲು. ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ದಾಸವಾಣಿ. ʼಹಡೆದವರ ನೆನೆಸುತ್ತಾ ಜಗದ ದಾರಿ ತೋರುವವ ಗುರು ಬೇಕವ್ವʼ ಜನಪದ. ಅರಿವೇ ಗುರು ಲೋಕೋಕ್ತಿ.

ಹೀಗೆ ಗುರುವಿನ ಗುಣಗಾನ ಎಲ್ಲಾ ಕಾಲದಲ್ಲಿಯೂ ಎಲ್ಲಾ ಸಾಹಿತ್ಯದಲ್ಲಿಯೂ ಮೇರು ಪರ್ವತವಾಗಿ ಹೊರಹೊಮ್ಮಿದೆ. ಆದರೆ ತನ್ನ ಹುಟ್ಟುಹಬ್ಬವನ್ನು ಶಿಕ್ಷಕರಿಗೆ ಮೀಸಲಿಟ್ಟ (Teachers Day) ಮಹನೀಯ ಮಹಾ ತತ್ವಜ್ಞಾನಿ ಡಾ.ಸರ್ವಪಲ್ಲಿ ರಾಧಾಕೃಷ್ಣರ (dr. sarvepalli radhakrishnan) ಗುರುಹೃದಯ ವಿಶಾಲ.

ಮಕ್ಕಳ ನೆಚ್ಚಿನ ಹಬ್ಬಗಳಲ್ಲಿ ಟೀಚರ್ಸ್ ಡೇ ಕೂಡಾ ಒಂದು. ಹೌದು ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿದೆ. ಅಮ್ಮ ಅಪ್ಪನ ನಂತರ ಮಕ್ಕಳು ಹೆಚ್ಚು ಹಚ್ಚಿಕೊಳ್ಳುವುದು ತಮ್ಮ ಟೀಚರ್‌ಗಳನ್ನು. ಬೇಕಾದ್ರೆ ನೀವೇ ಚೆಕ್ ಮಾಡಿಕೊಳ್ಳಿ. ಮಕ್ಕಳ ಬಳಿ ಹೋಗಿ ಮುಂದೆ ನೀವು ಏನು ಆಗ್ತೀರಾ ಎಂದು ಕೇಳಿ ಥಟ್ಟನೆ ಹೇಳುವುದು ಟೀಚರ್ ಎಂದು. ಮತ್ತೆ ತಡವರಿಸಿ ಅಪ್ಪ ಅಮ್ಮ ಹೇಳಿ ಕೊಟ್ಟ ಹಾಗೆ, ಇಲ್ಲ ಡಾಕ್ಟರ್, ಇಂಜಿನೀಯರ್ ಅಂತಾರೆ. ಟೀಚರ್ಸ್ ಮಕ್ಕಳ ಜೀವನದಲ್ಲಿ ವಿಶೇಷವಾಗಿ ಪ್ರಭಾವ ಬೀರಿರುತ್ತಾರೆ. ಹಾಗಾಗಿ ಟೀಚರ್ಸ್ ಡೇಯಂದು ಮಕ್ಕಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಏನಾದ್ರೂ ಸಪ್ರೈಸ್ ಗಿಫ್ಟ್ ನೀಡಿ ಶುಭ ಹಾರೈಸುತ್ತಾರೆ.

ಡಾ.ರಾಧಾಕೃಷ್ಣನ್ ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರು. ʼಡಾ. ಸರ್ವಪಲ್ಲಿ ರಾಧಾಕೃಷ್ಣನ್’ 1962ರಲ್ಲಿ ಭಾರತದ ರಾಷ್ಟ್ರಪತಿಯಾದ ಸಂದರ್ಭದಲ್ಲಿ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತ್ತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ “ಸೆಪ್ಟೆಂಬರ್ 5″ನ್ನು ʼಶಿಕ್ಷಕರ ದಿನ’ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಮೈಸೂರಲ್ಲಿ ಅಧ್ಯಯನ

ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದುಕೊಂಡು ಹೋಗಿ ಭಾವಪೂರ್ಣ ವಿದಾಯ ಹೇಳಿದ್ದು ವಿಶೇಷ.

ಬಾಲ್ಯ ಜೀವನ

ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ‘ತಿರುತ್ತಣಿ’ ಎಂಬಲ್ಲಿ ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ‘ರಾಧಾಕೃಷ್ಣನ್’ ಎನ್ನುವುದು ಅವರ ತಂದೆ-ತಾಯಿ ಇಟ್ಟ ಹೆಸರು.

ವಿದ್ಯಾರ್ಥಿ ಜೀವನ

ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟಪಡುವ ಸಂದರ್ಭದಲ್ಲಿ ರಾಧಾಕೃಷ್ಣನ್‌ಗೆ ಓದಬೇಕೆನ್ನುವ ಅಪಾರ ಹಂಬಲ ! ಸ್ಕಾಲರ್‌ಶಿಪ್ ಹಣದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‍ನಲ್ಲಿ ‘ತತ್ವಜ್ಞಾನ’ ವಿಷಯದ ಮೇಲೆ ಬಿ.ಎ ಮತ್ತು ಎಂ.ಎ. ಪದವಿಗಳನ್ನು ಪಡೆದುಕೊಂಡರು.

ಶಿಕ್ಷಕ ವೃತ್ತಿ

ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ ‘ದಿ ಎಥಿಕ್ಸ್ ಆಫ್ ವೇದಾಂತ’ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ ‘ಹಲವು ಬಗೆಯ ಸಿದ್ಧಾಂತಗಳು’, ‘ವೇದಾಂತ ವಿಚಾರಗಳು’ ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.

ಸಮಾಜ ಸುಧಾರಕರ ಹಾದಿ

ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು.

1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.

1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು 1948ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‍ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ಅಂತಿಮ ದಿನಗಳು

ತಮ್ಮ ರಾಷ್ಟ್ರಪತಿ ಹುದ್ದೆಯ ಅಧಿಕಾರಾವಧಿ ಮುಗಿದ ನಂತರ 1967ರಲ್ಲಿ ತಮ್ಮ ನಿವೃತ್ತಿ ಜೀವನವನ್ನು ಮದ್ರಾಸಿನ ಮೈಲಾಪುರದಲ್ಲಿರುವ ತಮ್ಮ ಅಧಿಕೃತ ನಿವಾಸ ‘ಗಿರಿಜಾ’ದಲ್ಲಿ ಕಳೆದ ರಾಧಾಕೃಷ್ಣನ್, 1975ರ ಏಪ್ರಿಲ್ 17ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು.

ಇದನ್ನೂ ಓದಿ: ಸ್ಮರಣೆ: ಬಾಹ್ಯಾಕಾಶ ಸಂಶೋಧನೆಯ ತ್ರಿವಿಕ್ರಮ ಡಾ.ವಿಕ್ರಮ್ ಸಾರಾಭಾಯಿ

Exit mobile version