ನವದೆಹಲಿ: ಮಾಹಿತಿ ತಂತ್ರಜ್ಞಾನದ ಸೇವೆಗಳ (IT Service) ದೈತ್ಯ ಕಂಪನಿಯಾದ ಟೆಕ್ ಮಹೀಂದ್ರಾದ ನಿವ್ವಳ ಲಾಭವು 2023-24ನೇ ಹಣಕಾಸು ವರ್ಷದ ಕೊನೆಯ ಅಥವಾ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.40.9ರಷ್ಟು ಕುಸಿದಿದೆ. ಅಂದರೆ ಟೆಕ್ ಮಹೀಂದ್ರಾದ ನಿವ್ವಳ ಲಾಭವು 661 ಕೋಟಿ ರೂ.ಗೆ ಇಳಿಕೆಯಾಗಿದೆ. ಆದರೂ, ಟೆಕ್ ಮಹೀಂದ್ರಾ ಕಂಪನಿಯು 2024-25ನೇ ವಿತ್ತೀಯ ವರ್ಷದಲ್ಲಿ 6 ಸಾವಿರ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ. ಇದರಿಂದಾಗಿ, ಈಗಷ್ಟೇ ಪದವಿ ಮುಗಿಸಿದವರಿಗೆ ಉದ್ಯೋಗ ಸಿಗಲಿದೆ.
“ಟೆಲಿಕಾಮ್, ಕಮ್ಯುನಿಕೇಷನ್ಸ್, ಮೀಡಿಯಾ ಹಾಗೂ ಎಂಟರ್‌ಟೇನ್‌ಮೆಂಟ್ ವಿಭಾಗದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಟೆಕ್ ಮಹೀಂದ್ರಾ ಕಂಪನಿಯ ನಿವ್ವಳ ಲಾಭದ ಪ್ರಮಾಣವು ಕುಸಿದೆ. ಆದರೆ, 2024-25ನೇ ಸಾಲಿನಲ್ಲಿ ಲಾಭದ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆ ಇದೆ” ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಜೋಶಿ ಮಾಹಿತಿ ನೀಡಿದ್ದಾರೆ. ನಾಲ್ಕನೇ ತ್ರೈಮಾಸಿಕದಲ್ಲಿ ಟೆಕ್ ಮಹೀಂದ್ರಾ ನಿವ್ವಳ ಲಾಭದ ಪ್ರಮಾಣವು 709.47 ಕೋಟಿ ರೂ. ಇರಲಿದೆ ಎಂಬುದಾಗಿ ಮನಿಕಂಟ್ರೋಲ್ (Moneycontrol) ಅಂದಾಜಿಸಿತ್ತು.
#Q4FY24 #Q4Results#TechMahindra
— Gobi (@gobi_cv) April 25, 2024
Tech Mahindra's Q4FY24 results revealed a significant 41% drop in net profit to Rs 661 crore and a 6.2% decrease in revenue to Rs 12,871 crore compared to the previous year. Despite these declines, the company announced a dividend of Rs 28 per… https://t.co/mryfnAmSBp
6 ಸಾವಿರ ಫ್ರೆಶರ್‌ಗಳ ನೇಮಕ
“ಉದ್ಯಮದ ವಿಸ್ತರಣೆ, ಟ್ರೆಂಡ್‌ನಲ್ಲಿ ಬದಲಾವಣೆ, ಏಳಿಗೆಯನ್ನು ದೃಷ್ಟಿಯಲ್ಲಿಕೊಂಡು 2024-25ನೇ ಹಣಕಾಸು ವರ್ಷದಲ್ಲಿ 6 ಸಾವಿರ ಫ್ರೆಶರ್‌ಗಳನ್ನು ನೇಮಕ ಮಾಡಲು ಕಂಪನಿ ತೀರ್ಮಾನಿಸಿದೆ. ಪ್ರತಿಯೊಂದು ತ್ರೈಮಾಸಿಕದಲ್ಲೂ 1,500 ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸಾಂಸ್ಥಿಕ ಏಳಿಗೆ, ಕಾರ್ಯಾಚರಣೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಕಂಪನಿಯನ್ನು ಇನ್ನಷ್ಟು ಲಾಭದತ್ತ ಕೊಂಡೊಯ್ಯಲಾಗುವುದು” ಎಂಬುದಾಗಿ ಮಾಹಿತಿ ನೀಡಿದ್ದಾರೆ.
50 ಸಾವಿರ ನೌಕರರಿಗೆ ಎಐ ತರಬೇತಿ
“ಕಂಪನಿಯ 50 ಸಾವಿರ ಉದ್ಯೋಗಿಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ ಕುರಿತು ತರಬೇತಿ ನೀಡಲಾಗುವುದು. ಆಧುನಿಕ ತಂತ್ರಜ್ಞಾನದ ಮೂಲಕ ಉದ್ಯಮವನ್ನು ಏಳಿಗೆಯತ್ತ ಕೊಂಡೊಯ್ಯುವ ದಿಸೆಯಲ್ಲಿ ಈ ಉಪಕ್ರಮ ಅಳವಡಿಸಿಕೊಳ್ಳುತ್ತಿದ್ದೇವೆ” ಎಂದು ತಿಳಿಸಿದ್ದಾರೆ. ಇನ್ನು, ಟೆಕ್ ಟೆಕ್ ಮಹೀಂದ್ರಾ ಕಂಪನಿಯ ವಾರ್ಷಿಕ ಲಾಭವೂ ಶೇ.6.2ರಷ್ಟು ಅಂದರೆ, 12,871 ಕೋಟಿ ರೂ.ಗೆ ಇಳಿಕೆಯಾಗಿದೆ. ಇದರ ಮಧ್ಯೆಯೂ ಉದ್ಯೋಗ ಸೃಷ್ಟಿ ಸೇರಿ ಹಲವು ಯೋಜನೆಗಳಿಗೆ ಟೆಕ್ ಮಹೀಂದ್ರಾ ಚಾಲನೆ ನೀಡುತ್ತಿದೆ.
ಇದನ್ನೂ ಓದಿ: Job News: ಆಪಲ್ ನಿಂದ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ!