ನವದೆಹಲಿ: ಚಂದ್ರಯಾನ-3 ಮಿಷನ್‌ನ (Chandrayaan 3 Mission) ಲಾಂಚ್ ಪ್ಯಾಡ್ (Launchpad) ನಿರ್ಮಾಣದಲ್ಲಿ ಕೆಲಸ ಮಾಡಿದ್ದ ಎಚ್ಇಸಿಯ ಎಂಜಿನಿಯರ್ ದೀಪಕ್ ಕುಮಾರ್ ಉಪ್ರಾರಿಯಾ ಅವರೀಗ ರಾಂಚಿಯ (Ranchi) ಬೀದಿಯಲ್ಲಿ ಇಡ್ಲಿ ಮಾರಾಟ (Selling Idlis) ಮಾಡುತ್ತಿದ್ದಾರೆ! ಹೌದು, ಇದು ನಿಜ. ಈ ಕುರಿತು ಬಿಬಿಸಿ ವರದಿ ಮಾಡಿದ್ದು, ರಾಂಚಿಯ ಧರ್ವಾ ಪ್ರದೇಶದಲ್ಲಿರುವ ಹಳೆ ವಿಧಾಸಭೆ ಕಟ್ಟಡ ಎದುರು ಇಡ್ಲಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಚಂದ್ರಯಾನ-3 ಮಿಷನ್‌ಗಾಗಿ ಫೋಲ್ಡಿಂಗ್ ಪ್ಲಾಟ್‌ಫಾರ್ಮ್ ಮತ್ತು ಸ್ಲೈಡಿಂಗ್ ಡೋರ್ ಅನ್ನು ತಯಾರಿಸಿದ HEC (Heavy Engineering Corporation Limited) ಕಂಪನಿಯು 18 ತಿಂಗಳಿಂದಂ ತನ್ನ ಉದ್ಯೋಗಿಗಳಿಗೆ ಸಂಬಳವನ್ನು (Salary) ಪಾವತಿಸಿಲ್ಲ. ಪರಿಣಾಮ ಉಪ್ರಾರಿಯಾ ತಂತ್ರಜ್ಞ ಈಗ ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಎಚ್ಇಸಿ ಕಂಪನಿಯು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ!
ಚಂದ್ರಯಾನ-3 ಯಶಸ್ಸಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ಶ್ಲಾಘಿಸಿದ್ದರು. ಅದೇ ಸಮಯದಲ್ಲಿ ಎಚ್‌ಇಸಿ ಕಂಪನಿ ತಮಗೆ 18 ತಿಂಗಳಿಂದ ಸಂಬಳ ನೀಡಿಲ್ಲ ಎಂದು ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದು ಕೂಡ ಸುದ್ದಿಯಾಗಿತ್ತು. ಬಿಬಿಸಿಯ ಪ್ರಕಾರ, ಎಚ್‌ಇಸಿ ಕಂಪನಿಯು ಸುಮಾರು 28000 ಉದ್ಯೋಗಿಗಳಿಗೆ ಕಳೆದ 18 ತಿಂಗಳಿಂದ ವೇತನವನ್ನೇ ನೀಡಿಲ್ಲ. ಆ ಪೈಕಿ ಉಪ್ರಾರಿಯಾ ಕೂಡ ಒಬ್ಬರಾಗಿದ್ದಾರೆ.
ಬಿಬಿಸಿಯೊಂದಿಗೆ ಮಾತನಾಡಿದ ಉಪ್ರಾರಿಯಾ ಅವರು, ವೆಚ್ಚಗಳನ್ನು ಪೂರೈಸುವುದಕ್ಕಾಗಿ ಅವರು ಕಳೆದ ಕೆಲವು ದಿನಗಳಿಂದ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಕಚೇರಿ ಮತ್ತು ಅಂಗಡಿಗಳನ್ನು ಒಟ್ಟೊಟ್ಟಿಗೆ ನಿಭಾಯಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಉಪ್ರಾರಿಯಾ ಅವರು ಬೆಳಗ್ಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಾರೆ. ಬಳಿಕ ಆಫೀಸ್‌ಗೆ ತೆರಳುತ್ತಾರೆ. ಕಚೇರಿ ಮುಗಿಸಿಕೊಂಡು ಸಂಜೆ ಬಂದು ಮತ್ತೆ ಇಡ್ಲಿ ಮಾರಾಟ ಮಾಡಿ ಮನೆಗೆ ಹೋಗುತ್ತಾರೆ.
ಈ ಸುದ್ದಿಯನ್ನೂ ಓದಿ: Chandrayaan 1: ಚಂದ್ರನ ಮೇಲೆ ನೀರಿನ ರಚನೆಗೆ ಚಂದ್ರಯಾನ 1 ಹೊಸ ಕೊಡುಗೆ!
18 ತಿಂಗಳಿಂದ ವೇತನ ನೀಡದ್ದಕ್ಕಾಗಿ ಮನೆಯನ್ನು ಸಂಭಾಳಿಸಲು ಈವರೆಗೆ 4 ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಕ್ರೆಡಿಟ್ ಕಾರ್ಡ್ ಮೇಲೆ ಸುಮಾರು 2 ಲಕ್ಷ ರೂ.ವರೆಗೂ ಸಾಲವಿದೆ. ಡಿಫಾಲ್ಟರ್ ಆಗಿದ್ದೇನೆ. ಸಂಬಂಧಿಕರಿಂದ ಸಾಲ ಪಡೆದಿದ್ದೇನೆ. ನನ್ನ ಹೆಂಡತಿಯ ಆಭರಣಗಳನ್ನೂ ಗಿರವಿ ಇಟ್ಟಿದ್ದೇನೆ. ಅಂತಿಮವಾಗಿ ಈಗ ಇಡ್ಲಿ ಮಾರಾಟ ಮಾಡುತ್ತಿದ್ದೇನೆ ಎಂದು ಉಪ್ರಾರಿಯಾ ಅವರು ಬಿಬಿಸಿಗೆ ತಿಳಿಸಿದ್ದಾರೆ. ನಿತ್ಯ 300 ರೂ.ನಿಂದ 400 ರೂ.ವರೆಗೂ ದುಡಿಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.