Site icon Vistara News

Tejas Fighter Jet: ಭಾರತೀಯ ವಾಯುಪಡೆಯ ತೇಜಸ್​ ಯುದ್ಧ ವಿಮಾನ ಪತನ

tejas

tejas

ನವದೆಹಲಿ: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ವಾಯುಪಡೆಯ ತೇಜಸ್​ ಯುದ್ಧ ವಿಮಾನ (Tejas Fighter Jet) ಮಂಗಳವಾರ ಪತನವಾಗಿದೆ. ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಜೈಸಲ್ಮೇರ್ ಬಳಿ ಪತನಗೊಂಡಿದ್ದು, ಪೈಲಟ್​ಗಳು ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸೇನೆ ಆದೇಶಿಸಿದೆ.

ಘಟನೆ ವಿವರ

ʼಭಾರತ್ ಶಕ್ತಿ 2024ʼ ತರಬೇತಿ ವೇಳೆ ಫೈಟರ್ ಜೆಟ್ ಜೈಸಲ್ಮೇರ್‌ನ ಜವಾಹರ್ ಕಾಲೋನಿ ಬಳಿ ಪತನವಾಗಿತ್ತು. ಮಧ್ಯಾಹ್ನ 2 ಗಂಟೆಗೆ ಫೈಟರ್ ಜೆಟ್ ಪತನವಾಗಿ ಬೆಂಕಿ ಹತ್ತಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೇಗೋ ಇಬ್ಬರೂ ಪೈಲಟ್‌ಗಳು ಫೈಟರ್ ಜೆಟ್‌ನಿಂದ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಈ ವಿಮಾನ ಪತನದ ದೃಶ್ಯ ವೈರಲ್‌ ಆಗಿದೆ.

“ಭಾರತೀಯ ವಾಯುಪಡೆಯ ತೇಜಸ್ ವಿಮಾನವು ಇಂದು ತರಬೇತಿಯ ವೇಳೆ ಜೈಸಲ್ಮೇರ್‌ನಲ್ಲಿ ಅಪಘಾತಕ್ಕೀಡಾಗಿದೆ. ಪೈಲಟ್‌ಗಳು ಪಾರಾಗಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯವನ್ನು ರಚಿಸಲಾಗಿದೆ” ಎಂದು ವಾಯುಪಡೆ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.

23 ವರ್ಷಗಳ ಹಿಂದೆ ಅಂದರೆ 2001ರಲ್ಲಿ ತೇಜಸ್‌ ಯುದ್ಧ ವಿಮಾನ ಮೊದಲ ಬಾರಿ ಹಾರಾಟ ನಡೆಸಿತ್ತು. ಈ ಎರಡು ದಶಕಗಳ ಕಾಲಾವಧಿಯಲ್ಲಿ ತೇಜಸ್‌ ಯುದ್ಧ ವಿಮಾನ ಪತನವಾಗುತ್ತಿರುವುದು ಇದು ಮೊದಲ ಬಾರಿ.

‘ಭಾರತ್ ಶಕ್ತಿ’ ತರಬೇತಿಯ ಭಾಗವಾಗಿ ಆತ್ಮನಿರ್ಭರ ಯೋಜನೆಯ ಆಧಾರದ ಮೇಲೆ ತಯಾರಿಸಲಾದ ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಮೂಲಕ ಭೂಮಿ, ವಾಯು, ಸಮುದ್ರ, ಸೈಬರ್ ಮತ್ತು ಬಾಹ್ಯಾಕಾಶ ಡೊಮೇನ್‌ಗಳಲ್ಲಿನ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸಶಸ್ತ್ರ ಪಡೆಗಳ ಸಮಗ್ರ ಕಾರ್ಯಾಚರಣೆ ಸಾಮರ್ಥ್ಯಗಳನ್ನು ಅನಾವರಣಗೊಳಿಸಲಾಗುತ್ತಿದೆ.

ಟಿ -90 (ಐಎಂ) ಟ್ಯಾಂಕ್‌ಗಳು, ಧನುಷ್ ಮತ್ತು ಸಾರಂಗ್ ಗನ್ ಸಿಸ್ಟಮ್ಸ್, ಆಕಾಶ್ ವೆಪನ್ಸ್ ಸಿಸ್ಟಮ್, ಲಾಜಿಸ್ಟಿಕ್ಸ್ ಡ್ರೋನ್‌, ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್ಎಚ್) ಮತ್ತು ಮಾನವರಹಿತ ವೈಮಾನಿಕ ವಾಹನಗಳು ಸೇರಿದಂತೆ ಪ್ರಮುಖ ಉಪಕರಣಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳು ಇದರಲ್ಲಿ ಭಾಗವಹಿಸಿದ್ದವು. ಈ ವೇಳೆ ದುರದೃಷ್ಟವಶಾತ್‌ ತೇಜಸ್ ವಿಮಾನವು ಪತನವಾಗಿದೆ.

ಇದನ್ನೂ ಓದಿ: ವಿಸ್ತಾರ Explaienr: ಹಲವು ಅಣುಬಾಂಬ್‌ ಏಕಕಾಲಕ್ಕೆ ಕೊಂಡೊಯ್ಯಬಲ್ಲ Agni-V ಕ್ಷಿಪಣಿ! ಏನಿದರ ವಿಶೇಷತೆ?

Exit mobile version