Site icon Vistara News

ಮಾರನ್‌ ʼಟಾಯ್ಲೆಟ್‌ ಕ್ಲೀನ್‌ʼ ಹೇಳಿಕೆಗೆ ತೇಜಸ್ವಿ ಯಾದವ್‌ ಖಂಡನೆ, ಇಂಡಿಯಾ ಮೈತ್ರಿಕೂಟದಲ್ಲಿ ಒಡಕು?

tejaswi yadav dayanidhi maran

ಪಟನಾ: ʼಬಿಹಾರದಿಂದ ಬಂದವರು ತಮಿಳುನಾಡಿನಲ್ಲಿ ಟಾಯ್ಲೆಟ್‌ ಕ್ಲೀನ್‌ ಮಾಡುತ್ತಾರೆʼ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ (Dayanidhi Maran) ನೀಡಿರುವ ಹೇಳಿಕೆಯನ್ನು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ (Tejaswi Yadav) ಖಂಡಿಸಿದ್ದಾರೆ. ನಮ್ಮ ಕಾರ್ಮಿಕರು ಇಲ್ಲದಿದ್ದರೆ ಅವಲಂಬಿತ ರಾಜ್ಯಗಳ ಅಭಿವೃದ್ಧಿ ಸ್ಥಗಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರ ಬಗ್ಗೆ ಡಿಎಂಕೆ ಸಂಸದ ದಯಾನಿಧಿ ಮಾರನ್ ನೀಡಿದ್ದ ಹೇಳಿಕೆಯ ವಿಡಿಯೋ ಇದೀಗ ವೈರಲ್‌ ಆಗಿದೆ. ಅದರಲ್ಲಿ ಅವರು ಹಿಂದಿ ಮಾತ್ರ ಅಧ್ಯಯನ ಮಾಡಿದವರ ಉದ್ಯೋಗ ಭವಿಷ್ಯವನ್ನು ಇಂಗ್ಲಿಷ್ ತಿಳಿದಿರುವವರ ಜೊತೆ ಹೋಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಹಾರದಲ್ಲಿ ಹಿಂದಿಯನ್ನು ಮಾತ್ರ ಓದುವವರು ತಮಿಳುನಾಡಿಗೆ ಬಂದು ಟಾಯ್ಲೆಟ್‌ ಕ್ಲೀನ್‌ ಮಾಡುತ್ತಾರೆ ಹಾಗೂ ಮನೆ ನಿರ್ಮಾಣದ ಕಾರ್ಮಿಕರ ಕೆಲಸ ಮಾಡುತ್ತಾರೆ ಎಂದಿದ್ದರು.

“ಇಲ್ಲಿನವರು ಇಂಗ್ಲಿಷ್ ಓದಿದ್ದರಿಂದ ಇಂದು ಐಟಿ ಕಂಪನಿಗಳಲ್ಲಿ ಹೆಚ್ಚಿನ ಸಂಬಳ ಪಡೆಯುತ್ತಾರೆ. ಅಲ್ಲಿನವರು ಹಿಂದಿ ಹಿಂದಿ ಎಂದು ಹೇಳುತ್ತಾರೆ. ಕಟ್ಟಡಗಳನ್ನು ಕಟ್ಟುವವರು ನಿಮಗೆ ಚೆನ್ನಾಗಿ ಗೊತ್ತು. ಬಿಹಾರದಲ್ಲಿ ಹಿಂದಿ ಓದಿ ಬಂದವರು ತಮಿಳುನಾಡಿನಲ್ಲಿ ನಮಗೆ ಮನೆ ಕಟ್ಟುತ್ತಾರೆ, ಗುಡಿಸುತ್ತಾರೆ. ರಸ್ತೆಗಳು ಮತ್ತು ಟಾಯ್ಕೆಟ್‌ ಕ್ಲೀನ್‌ ಮಾಡುತ್ತಾರೆ” ಎಂದು ಮಾರನ್‌ ಹೇಳಿದ್ದರು.

ಸಂಸದ ಮಾರನ್ ಅವರ ವಿವಾದಿತ ಹೇಳಿಕೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಈ ವಿಡಿಯೋ ಹಳೆಯದು ಎಂದು ಡಿಎಂಕೆ ಹೇಳಿದೆ. ಆದರೆ ಈ ವಿಚಾರ ಇಂಡಿಯಾ ಮೈತ್ರಿಕೂಟದ (INDIA bolc) ಪಕ್ಷಗಳ ನಡುವೆ ಭಿನ್ನಮತ ಉಂಟಾಗಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಖಂಡಿಸಿದ ತೇಜಸ್ವಿ ಯಾದವ್, “ಬಿಹಾರದ ಜನರಿಲ್ಲದೆ ಇದ್ದರೆ ಹಲವು ರಾಜ್ಯಗಳ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಡಿಎಂಕೆ ನಾಯಕರು ಯುಪಿ ಮತ್ತು ಬಿಹಾರದ ಜನರ ಬಗ್ಗೆ ಏನಾದರೂ ಹೇಳಿದ್ದರೆ, ಅದು ಖಂಡನೀಯ. ನಾವು ಅದನ್ನು ಒಪ್ಪುವುದಿಲ್ಲ. ಯುಪಿ ಮತ್ತು ಬಿಹಾರದ ಕಾರ್ಮಿಕರಿಗೆ ದೇಶದಾದ್ಯಂತ ಬೇಡಿಕೆಯಿದೆ. ಅವರು ಬೇರೆಡೆ ಹೋಗುವುದನ್ನು ನಿಲ್ಲಿಸಿದರೆ ಆ ರಾಜ್ಯಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅವರ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳುತ್ತವೆ” ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ತಿಳಿಸಿದರು.

ʼಒಂದು ನಿರ್ದಿಷ್ಟ ಸಮುದಾಯದ ಜನರು ಮಾತ್ರ ಯಾಕೆ ಚರಂಡಿ ಸ್ವಚ್ಛಗೊಳಿಸುತ್ತಾರೆ ಎಂದು ಅವರು ಕೇಳಿದ್ದರೆ ಅದಕ್ಕೆ ಅರ್ಥ ಇರುತ್ತಿತ್ತು. ಆದರೆ, ಅವರು ಬಿಹಾರ ಮತ್ತು ಉತ್ತರಪ್ರದೇಶದ ಜನರು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಖಂಡನೀಯ. ಎಲ್ಲ ಪಕ್ಷಗಳ ನಾಯಕರು ಇಂತಹ ಹೇಳಿಕೆಗಳನ್ನು ನೀಡುವುದನ್ನು ವಿರೋಧಿಸಬೇಕು’ ಎಂದು ಯಾದವ್ ಹೇಳಿದ್ದಾರೆ.

ಡಿಎಂಕೆ ಸಂಸದರ ಹೇಳಿಕೆಯ ವಿಡಿಯೊ ಕ್ಲಿಪ್ ವೈರಲ್ ಆಗಿದ್ದು, ಇದನ್ನು ಪಾಟ್ನಾ ಸಾಹಿಬ್‌ನ ಬಿಜೆಪಿ ಲೋಕಸಭಾ ಸಂಸದ, ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಂಚಿಕೊಂಡಿದ್ದರು. ‘ಡಿಎಂಕೆ ನಾಯಕರು ಬಿಹಾರದ ಜನರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದರು. ‘ತಮ್ಮ ಇಂಡಿಯಾ ಮೈತ್ರಿಕೂಟದ ಸದಸ್ಯರಾಗಿರುವ ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ಬಿಹಾರದ ಜನರು ತಮಿಳುನಾಡಿಗೆ ಹೋಗಬೇಕಾಯಿತು’ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಲಾಲು ಪ್ರಸಾದ್ ಕುಟುಂಬದಲ್ಲಿ ಭರ್ಜರಿ ಖುಷಿ; ಹೆಣ್ಣು ಮಗುವಿಗೆ ತಂದೆಯಾದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್​

Exit mobile version