ಹೈದರಾಬಾದ್: ತೆಲಂಗಾಣದಲ್ಲಿ ಚುನಾವಣೆ ಕಾವು ಏರತೊಡಗಿದೆ. ನವೆಂಬರ್ 30ರಂದು ತೆಲಂಗಾಣ ವಿಧಾನಸಭೆ ಚುನಾವಣೆ (Telangana Assembly Election) ನಡೆಯಲಿದೆ. ಇದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಅಖಾಡಕ್ಕೆ ಇಳಿದಿವೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union home minister Amit Shah) ಒಬಿಸಿ ಮುಖ್ಯಮಂತ್ರಿ ಆಯ್ಕೆಯ ದಾಳ ಉರುಳಿಸಿದ್ದಾರೆ (Telangana Polls). ಬಿಜೆಪಿ ಅಧಿಕಾರಕ್ಕೆ ಬಂದರೆ ಒಬಿಸಿ ಅಭ್ಯರ್ಥಿಗೆ ಸಿಎಂ ಪಟ್ಟ ನೀಡುವುದುದಾಗಿ ಘೋಷಿಸಿದ್ದಾರೆ.
ಸೂರ್ಯಪೇಟ್‌ನಲ್ಲಿ ಆಯೋಜಿಸಿದ್ದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಅವರು ಆಡಳಿತರೂಢ ಬಿಆರ್‌ಎಸ್ (BRS) ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ʼʼಒಂಬತ್ತೂವರೆ ವರ್ಷಗಳಿಂದ ಆಡಳಿತರೂಢ ಬಿಆರ್‌ಎಸ್ ಪಕ್ಷ ದಲಿತರು, ಬುಡಕಟ್ಟು ಸಮುದಾಯದವರು ಮತ್ತು ಒಬಿಸಿ ವರ್ಗಗಳನ್ನು ವಂಚಿಸುತ್ತಿದೆ. ಬಡವರ ಮತ್ತು ದುರ್ಬಲ ವರ್ಗಗಳ ವಿರೋಧಿ ಬಿಆರ್‌ಎಸ್ ತನ್ನ ಆಶ್ವಾಸನೆಯನ್ನು ಪೂರೈಸಲು ವಿಫಲವಾಗಿದೆ. ಪ್ರತಿ ದಲಿತ ಕುಟುಂಬಕ್ಕೆ 3 ಎಕರೆ ಭೂಮಿ ಹಂಚುವ ಭರವಸೆ ಇನ್ನೂ ಈಡೇರಿಲ್ಲʼʼ ಎಂದು ಅಮಿತ್ ಶಾ ಟೀಕಿಸಿದರು.
ʼʼ2014ರಲ್ಲಿ ಅಧಿಕಾರಕ್ಕೆ ಬರುವಾಗ ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದರು. ಆದರೆ ತನ್ನ ಭರವಸೆಯನ್ನು ಈಡೇರಿಸಲಿಲ್ಲ. ಈಗ ಅವರು ತಮ್ಮ ಮಗ ಕೆ.ಟಿ.ರಾಮರಾವ್ ಅವರನ್ನು ಉತ್ತರಾಧಿಕಾರಿಯಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅಮಿತ್ ಶಾ ವ್ಯಂಗ್ಯವಾಡಿದರು.
ಒಬಿಸಿ ಮುಖ್ಯಮಂತ್ರಿ
ʼʼಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಪಟ್ಟವನ್ನು ಒಬಿಸಿ ನಾಯಕನಿಗೆ ನೀಡುವುದಾಗಿ ಘೋಷಿಸುತ್ತೇವೆ. ಕೆ.ಚಂದ್ರಶೇಖರ್ ರಾವ್ ಅವರಿಗೆ ಈ ರೀತಿಯ ಘೋಷಣೆ ಮಾಡಲು ಸಾಧ್ಯವೇ? ಅವರು ಒಬಿಸಿ ವರ್ಗಗಳ ಅಭಿವೃದ್ಧಿಗೆ ಯಾವ ಕೆಲಸವನ್ನೂ ಮಾಡಿಲ್ಲʼʼ ಎಂದು ಅಮಿತ್ ಶಾ ದೂರಿದರು.
ಕಾಂಗ್ರೆಸ್, ಬಿಆರ್‌ಎಸ್ ಒಂದೇ ನಾಣ್ಯದ 2 ಮುಖಗಳು
ʼʼಕಾಂಗ್ರೆಸ್ ಮತ್ತು ಬಿಆರ್‌ಎಸ್ ಒಂದೇ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ಬಿಂಬಿಸಲು ಪ್ರಯತ್ನಿಸಿದರೆ ಬಿಆರ್‌ಎಸ್ ಕೆ.ಟಿ.ರಾಮರಾವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಯತ್ನಿಸುತ್ತಿದೆ. ಜನರ ಕಲ್ಯಾಣ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸುವ ಏಕೈಕ ಪಕ್ಷ ಬಿಜೆಪಿ” ಎಂದು ಅವರು ಹೇಳಿದರು. ʼʼಬುಡಕಟ್ಟು ಜನಾಂಗದ ಅಭಿವೃದ್ಧಿಯೇ ಬಿಜೆಪಿಯ ಧ್ಯೇಯ. ಬುಡಕಟ್ಟು ದೇವತೆಗಳಾದ ಸಮ್ಮಕ್ಕ ಮತ್ತು ಸರಳಮ್ಮ ಹೆಸರಿನಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯವನ್ನು ಮಂಜೂರು ಮಾಡಿದ್ದು ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರʼʼ ಎಂದು ಅವರು ತಿಳಿಸಿದರು.
ಕೃಷ್ಣಾ ಜಲ ವಿವಾದ ಪರಿಹರಿಸಲು ಯತ್ನ
ʼʼಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ತೆಲಂಗಾಣಕ್ಕೆ ನ್ಯಾಯ ಒದಗಿಸಲು ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯ ಷರತ್ತುಗಳನ್ನು ನವೀಕರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ತೆಲಂಗಾಣ ರೈತರಿಗೆ ಸಹಾಯ ಮಾಡಲು ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ರಚಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ನಾವು ಪ್ರತಿ ಮನೆಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುತ್ತಿದ್ದೇವೆ” ಎಂದು ಅಮಿತ್ ಶಾ ಪ್ರತಿಪಾದಿಸಿದರು.
ರಾಮ ಮಂದಿರ ಕನಸು ನನಸು
ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸುವ ಮೂಲಕ ಮೋದಿ ಸರ್ಕಾರ ಇತಿಹಾಸವನ್ನು ಸೃಷ್ಟಿಸಿದೆ. ಜನವರಿಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸೂರ್ಯಪೇಟ್ ಜನರನ್ನು ಆಹ್ವಾನಿಸುತ್ತಿದ್ದೇವೆʼʼ ಎಂದು ಶಾ ಹೇಳಿದರು.
ಇದನ್ನೂ ಓದಿ: ಪೋಲಿ ಚಿತ್ರ ನೋಡೋದು, ಲೈಕ್ ಮಾಡೋದು ಅಪರಾಧ ಅಲ್ಲ; ಕೋರ್ಟ್ ಮಹತ್ವದ ಆದೇಶ
ಕೆಸಿಆರ್ ಪ್ರತಿಕ್ರಿಯೆ ಏನು?
ಮೆಹಬೂಬಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಕೆಸಿಆರ್ ತಮ್ಮ ಸರ್ಕಾರವನ್ನು ಸಮರ್ಥಿಸಿದ್ದಾರೆ. ಆದರೆ ಅವರು ಒಬಿಸಿ ಮುಖ್ಯಮಂತ್ರಿಯ ಸವಾಲಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. “ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಗುಜರಾತ್‌ನಲ್ಲಿಯೂ ರೈತರಿಗೆ ದಿನದ 24 ಗಂಟೆ ವಿದ್ಯುತ್ ಸರಬರಾಜು ಇಲ್ಲ. ಆದರೂ ಬಿಜೆಪಿ ರಾಷ್ಟ್ರೀಯ ನಾಯಕರು ಇಲ್ಲಿಗೆ ಬಂದು ನಮ್ಮ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ” ಎಂದು ಕೆಸಿಆರ್ ಆಕ್ರೋಶ ವ್ಯಕ್ತಪಡಿಸಿದರು.
ʼʼಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇರುವಂತೆ ತೆಲಂಗಾಣದಲ್ಲಿ ರಸಗೊಬ್ಬರಗಳ ಕೊರತೆಯಿಲ್ಲ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ ನಂತರ ನೇರವಾಗಿ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿದೆʼʼ ಎಂದು ಕೆಸಿಆರ್ ಹೇಳಿದರು.