Site icon Vistara News

Sonia Gandhi: ಸೋನಿಯಾ ಗಾಂಧಿಯನ್ನು ಭಾರತ ಮಾತೆಯಂತೆ ಚಿತ್ರಿಸಿದ ಕಾಂಗ್ರೆಸ್;‌ ಬಿಜೆಪಿ ಆಕ್ರೋಶ

Sonia Gandhi

Telangana Congress replaced posters of Bharat Mata by Sonia Gandhi’s face, BJP Slams

ಹೈದರಾಬಾದ್:‌ ತೆಲಂಗಾಣದಲ್ಲಿ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಸಾಲು ಸಾಲು ರ‍್ಯಾಲಿಗಳು, ಸಮಾವೇಶಗಳ ಮೂಲಕ ಜನರ ಮತ ಸೆಳೆಯಲು ಸಿದ್ಧತೆ ನಡೆಸುತ್ತಿದೆ. ಇದೇ ಕಾರಣಕ್ಕಾಗಿಯೇ ಜನರಿಗೆ ಆರು ‘ಉಚಿತ ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿದೆ. ಇದರ ಬೆನ್ನಲ್ಲೇ, ತೆಲಂಗಾಣದಲ್ಲಿ ಕಾಂಗ್ರೆಸ್‌ ರ‍್ಯಾಲಿಯ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರನ್ನು ಭಾರತ ಮಾತೆಯಂತೆ (Bharat Mata) ಬಿಂಬಿಸಿದ ಹೋರ್ಡಿಂಗ್ಸ್‌ ಅಳವಡಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಹೌದು, ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ಸೆಪ್ಟೆಂಬರ್‌ 17ರಂದು ಪಕ್ಷದ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಬೃಹತ್‌ ಕಟೌಟ್‌ಗಳು, ಹೋರ್ಡಿಂಗ್ಸ್‌ಗಳನ್ನು ಮಾಡಿಸಿದ್ದಾರೆ. ಒಂದು ಕಟೌಟ್‌ನಲ್ಲಿ ಸೋನಿಯಾ ಗಾಂಧಿ ಅವರನ್ನು ಭಾರತ ಮಾತೆಯಂತೆ ಬಿಂಬಿಸಲಾಗಿದೆ. ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್‌ ಸೇರಿ ಹಲವರ ಕಟೌಟ್‌ಗಳ ಮಧ್ಯೆ, ಸೋನಿಯಾ ಗಾಂಧಿ ಅವರ ಹೋರ್ಡಿಂಗ್ಸ್‌ ಇದೆ. ಇದು ಈಗ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ಕೆರಳಿ ಕೆಂಡವಾದ ಬಿಜೆಪಿ

ಸೋನಿಯಾ ಗಾಂಧಿ ಅವರನ್ನು ಭಾರತ ಮಾತೆಯಂತೆ ಬಿಂಬಿಸಿದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಕಾಂಗ್ರೆಸ್‌ ನಾಯಕರು ಮೊದಲು ಇಂದಿರಾ ಎಂದರೆ ಇಂಡಿಯಾ ಎಂದು ಹೋಲಿಕೆ ಮಾಡುತ್ತಿದ್ದರು. ಈಗ ಸೋನಿಯಾ ಗಾಂಧಿ ಅವರನ್ನು ಭಾರತ ಮಾತೆಯಂತೆ ಚಿತ್ರಿಸಲಾಗಿದೆ. ಇದು ಕಾಂಗ್ರೆಸ್‌ನ ಕುಟುಂಬ ರಾಜಕಾರಣ ಹಾಗೂ ಕುಟುಂಬದ ಓಲೈಕೆಯ ಸಂಕೇತವಾಗಿದೆ. ಇಂತಹ ಹೋಲಿಕೆಗಳನ್ನು ಮಾಡುತ್ತಿರುವುದು ನಾಚಿಕೆಗೇಡು” ಎಂದು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಪೋಸ್ಟ್‌ ಮಾಡಿದ್ದಾರೆ.

ಕರ್ನಾಟಕದಲ್ಲಿ ಉಚಿತ ಗ್ಯಾರಂಟಿ ಘೋಷಣೆಗಳು ಯಶಸ್ಸು ಕಂಡ ಹಿನ್ನೆಲೆಯಲ್ಲಿ ತೆಲಂಗಾಣದಲ್ಲೂ ಕಾಂಗ್ರೆಸ್‌ ಆರು ಉಚಿತ ಕೊಡುಗೆಗಳ ಭರವಸೆ ನೀಡಿದೆ. ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಘೋಷಣೆ ಮಾಡಿದೆ. ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಸೇರಿ ಹಲವು ಘೋಷಣೆಗಳನ್ನು ಮಾಡಿದೆ. ಕಾಂಗ್ರೆಸ್‌ ಕಾರ್ಯಕಾರಿ ಸಭೆಯನ್ನೂ ತೆಲಂಗಾಣದಲ್ಲೇ ಆಯೋಜಿಸಿದೆ.

Exit mobile version