ಹೈದರಾಬಾದ್ : ಅವರು ಒಂದು ಕಾಲದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (Akhila Bharatha Vidyarthi Parishat) ಅಗ್ರ ನಾಯಕ. ಅದೇ ನಾಯಕ ಇಂದು ತೆಲಂಗಾಣ ರಾಜ್ಯದಲ್ಲಿ (Telangana Elections 2023) ಕಾಂಗ್ರೆಸ್‌ನ್ನು ವಿಜಯದತ್ತ (Congress win) ಮುನ್ನುಗ್ಗಿಸಿ ಮುಖ್ಯಮಂತ್ರಿ ಪಟ್ಟದತ್ತ (Chief Minister post) ಸಾಗುತ್ತಿದ್ದಾರೆ. ಅವರೇ ಅನುಮೂಲ ರೇವಂತ್ ರೆಡ್ಡಿ (Revant Reddy).
ಹೌದು, ಆರೆಸ್ಸೆಸ್ ಮೂಲದ ಸಂಸ್ಥೆಯ ಮೂಲಕ ರಾಜಕೀಯ ಜೀವನವನ್ನು ಆರಂಭ ಮಾಡಿ, ಬಳಿಕ ಸ್ವತಂತ್ರವಾಗಿ ತಮ್ಮ ಚರಿಷ್ಮಾ ಬೆಳೆಸಿಕೊಂಡು ತೆಲುಗು ದೇಶಂ ಪಾರ್ಟಿಯಲ್ಲೂ ತಮ್ಮ ಕರಾಮತ್ತು ತೋರಿಸಿ ಈಗ ಕಾಂಗ್ರೆಸ್‌ನ ತೆಲಂಗಾಣ ರಾಜ್ಯಾಧ್ಯಕ್ಷರಾಗಿರುವ ರೇವಂತ ರೆಡ್ಡಿ ತಮ್ಮ 54ನೇ ವಯಸ್ಸಿನಲ್ಲೇ ಹಲವು ವಿಕ್ರಮಗಳನ್ನು ಸಾಧಿಸಿದವರು.
ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿಯನ್ನು ಮುಳುಗಿಸಿ ಕಾಂಗ್ರೆಸ್ ಧ್ವಜ ಹಾರಿಸಿದ ರೇವಂತ್ ರೆಡ್ಡಿ ಅವರು, ಕಾಮರೆಡ್ಡಿ ಕ್ಷೇತ್ರದಲ್ಲಿ ಕೆ. ಚಂದ್ರಶೇಖರ ರಾವ್ ಅವರನ್ನು ಸೋಲಿಸಿದ ಸಾಧನೆಯನ್ನೂ ಮಾಡಿದ್ದಾರೆ.
ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದ ಅವರು, ಈಗ ಮಲ್ಕಜ್‌ಗಿರಿ ಲೋಕಸಭಾ ಕ್ಷೇತ್ರದ ಸಂಸದರು. 2017ರಲ್ಲಿ ಕಾಂಗ್ರೆಸ್ ಸೇರಿದ್ದ ಅವರು 2021ರ ಜುಲೈ ತಿಂಗಳಲ್ಲಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲಿಂದ ಬಳಿಕ ಕಾಂಗ್ರೆಸ್ ನ್ನು ತಳಮಟ್ಟದಿಂದ ಮೇಲೆತ್ತಿ ಈಗ ಬಿಆರ್‌ಎಸ್ ಸೋಲಿಗೆ ಕಾರಣವಾಗಿದ್ದಾರೆ. ಅವರು ಅಧ್ಯಕ್ಷರಾದ ದಿನದಿಂದಲೇ ಬೀದಿ ಹೋರಾಟಗಳ ಮೂಲಕ ಸಂಘಟನೆಯನ್ನು ಬಲಗೊಳಿಸಲು ಆರಂಭಿಸಿದ್ದರು.
ಪಕ್ಷದೊಳಗೇ ಅವರಿಗೆ ವಿರೋಧವಿತ್ತು
ನಿಜವೆಂದರೆ, ರೇವಂತ್ ರೆಡ್ಡಿಗೆ ಪಕ್ಷದೊಳಗೆ ಎಲ್ಲವೂ ಸುಲಲಿತವಾಗಿರಲಿಲ್ಲ. ಬೇರೆ ಪಕ್ಷದಿಂದ ಬಂದವರು ಎಂಬ ಕಾರಣಕ್ಕಾಗಿ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡುವುದಕ್ಕೆ ವಿರೋಧವಿತ್ತು. ಆದರೆ, ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ರೇವಂತ್ ರೆಡ್ಡಿ ಕರ್ನಾಟಕದ ಕಾಂಗ್ರೆಸ್ ನಾಯಕರಿಂದ ಸ್ಫೂರ್ತಿ ಪಡೆದು ದೊಡ್ಡ ನಾಯಕರಾಗಿ ಬೆಳೆದರು. ಪಕ್ಷದ ರಾಷ್ಟ್ರೀಯ ನಾಯಕರ ಜತೆಗೆ ಕಾಣಿಸಿಕೊಂಡರು. ದೊಡ್ಡ ಮಟ್ಟದ ರ‍್ಯಾಲಿಗಳನ್ನು ನಡೆಸಿದರು. ಅವರು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು.
ರೇವಂತ್ ರೆಡ್ಡಿ ರಾಜಕೀಯ ಬದುಕಿನ ಹಾದಿ
- ರೇವಂತ್ ರೆಡ್ಡಿ ಅವರು ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ನಾಯಕನಾಗಿ ಬೆಳೆದಿದ್ದರು.
- 20೦6ರಲ್ಲಿ ಮಿಡ್ಜಿ ಮಂಡಲ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
- 2007ರಲ್ಲಿ ರೇವಂತ್ ರೆಡ್ಡಿ ಅವರು ಪಕ್ಷೇತರ ಸ್ಪರ್ಧಿಯಾಗಿ ನಿಂತು ವಿಧಾನ ಪರಿಷತ್ ಪ್ರವೇಶ ಮಾಡಿದರು.
- ಬಳಿಕ ತೆಲುಗು ದೇಶಂ ನಾಯಕ ಚಂದ್ರ ಬಾಬು ನಾಯ್ಡು ಅವರು ರೇವಂತ್ ಅವರನ್ನು ಸೆಳೆದುಕೊಂಡರು.
- 2009ರ ವಿಧಾನಸಭಾ ಚುನಾವಣೆಯಲ್ಲಿ ಕೋಡಂಗಲ್ ವಿಧಾನ ಸಭಾ ಕ್ಷೇತ್ರದಲ್ಲಿ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅವರು ಸೋಲಿಸಿದ್ದು ಐದು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಗುರುನಾಥ ರೆಡ್ಡಿ ಅವರನ್ನು.
- 2014ರ ಆಂಧ್ರ ಲೋಕಸಭಾ ಚುನಾವಣೆಯಲ್ಲಿ ಅದೇ ಕೋಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಮುಂದೆ ತೆಲುಗು ದೇಶಂನ ಸದನ ನಾಯಕರೇ ಆದರು.
- ಮುಂದೆ ರೇವಂತ್ ಅವರು ಕಾಂಗ್ರೆಸ್ ಜತೆ ಒಡನಾಟ ಮಾಡುವುದನ್ನು ಗಮನಿಸಿದ ತೆಲುಗು ದೇಶಂ ಪಕ್ಷ ಅವರನ್ನು ವಿಧಾನಸಭೆಯ ಪ್ರತಿ ಪಕ್ಷ ನಾಯಕನ ಸ್ಥಾನದಿಂದ ಕಿತ್ತು ಹಾಕಿತು. ಅವರು 2017ರ ಅಕ್ಟೋಬರ್ 31ರಂದು ಅವರು ಕಾಂಗ್ರೆಸ್ ಸೇರಿದರು.
- 2018ರಲ್ಲಿ ಅವರು ಮತ್ತೆ ಕೋಡಂಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಟಿಆರ್‌ಎಸ್ ಎದುರು ಸೋಲು ಕಂಡರು.
- 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ರೇವಂತ್ ಈಗ ಲೋಕಸಭಾ ಸದಸ್ಯರೂ ಹೌದು. ಈ ಬಾರಿಯ ಚುನಾವಣೆಯಲ್ಲಿ ಕೋಡಂಗಲ್ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ವಿರುದ್ಧವೇ ಕಾಮರೆಡ್ಡಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಇದನ್ನೂ ಓದಿ : Telangana Election Results: ತೆಲಂಗಾಣದಲ್ಲೂ ಕಾಂಗ್ರೆಸ್‌ಗೆ ‘ಗ್ಯಾರಂಟಿ’ ವರದಾನ; ಗೆಲುವಿನ ಸೋಪಾನ
ಇವರ ಪತ್ನಿ ಯಾರು ಗೊತ್ತಾ?
ರೇವಂತ್ ರೆಡ್ಡಿ ಅವರು ಹುಟ್ಟಿದ್ದು ಮೆಹಬೂಬ್ ನಗರದ ಕೋದಂಡರೆಡ್ಡಿ ಪಳ್ಳಿಯಲ್ಲಿ. 1969ರ ನವೆಂಬರ್ 8ರಂದು. ಬಿೆ ಪದವೀಧರರಾಗಿರುವ ಅವರು, ಕಲಿತಿದ್ದು ಒಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ. ಇವರ ಪತ್ನಿ ಗೀತಾ ಅವರು ಜೈಪಾಲ್ ರೆಡ್ಡಿ ಅವರ ಸೊಸೆ. ಅವರಿಗೆ ಒಬ್ಬ ಮಗಳಿದ್ದಾಳೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: http://vistaranews.com/tag/assembly-election-2023