Site icon Vistara News

Revanth Reddy: ತೆಲಂಗಾಣದ ಮೊದಲ ಕಾಂಗ್ರೆಸ್ ಸಿಎಂ ರೇವಂತ್‌ ರೆಡ್ಡಿ ಆಸ್ತಿ ಎಷ್ಟು? ಜೈಲಲ್ಲಿ ಇದ್ರಾ?

revanth reddy rahul gandhi priyanka gandhi

ಹೈದರಾಬಾದ್:‌ ತೆಲಂಗಾಣ ಮುಖ್ಯಮಂತ್ರಿಯಾಗಿ (Telangana CM) ಇಂದು ರೇವಂತ್ ರೆಡ್ಡಿ (Revanth Reddy) ಪ್ರಮಾಣ ವಚನ ಸ್ವೀಕರಿಸಲಿದ್ದು, ಆಂಧ್ರಪ್ರದೇಶ ವಿಭಜನೆಯ ನಂತರ 2014ರಲ್ಲಿ ರಚನೆಯಾದ ರಾಜ್ಯದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ.

54ರ ಹರೆಯದ ರೇವಂತ್‌ ರೆಡ್ಡಿ ನೇತೃತ್ವದಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್‌ 119 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆದ್ದುಕೊಂಡು ಬಹುಮತದೊಂದಿಗೆ ಸರ್ಕಾರ ರಚಿಸುತ್ತಿದೆ. ರೇವಂತ್ ರೆಡ್ಡಿ ಕಾಂಗ್ರೆಸ್ ಮೂಲನಿವಾಸಿಯಲ್ಲ. ಅವರು ABVP ಹಿನ್ನೆಲೆ ಹೊಂದಿದವರು. ವಿದ್ಯಾರ್ಥಿ ರಾಜಕೀಯ ಮತ್ತು ನಂತರ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ತೆಲುಗು ದೇಶಂ ಪಕ್ಷದೊಂದಿಗೂ ಚುನಾವಣಾ ರಾಜಕೀಯದಲ್ಲಿದ್ದವರು. ಬಳಿಕ ರೇವಂತ್ ರೆಡ್ಡಿ 2017ರಲ್ಲಿ ಕಾಂಗ್ರೆಸ್ ಸೇರಿದರು. 2021ರಲ್ಲಿ, ಉತ್ತಮ್ ಕುಮಾರ್ ರೆಡ್ಡಿ ನಂತರ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡರು. ಇದೀಗ ತೆಲಂಗಾಣದ ಎರಡನೇ ಮುಖ್ಯಮಂತ್ರಿ ಆಗುತ್ತಿದ್ದಾರೆ.

ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ʼಇಂಡಿಯಾʼ ಕೂಟದ (INDIA bloc) ಮೇಲೆ ದುಗುಡದ ಮೋಡ ಕವಿದಿರುವ ನಡುವೆಯೇ ಅದರ ಹಲವಾರು ನಾಯಕರು ರೇವಂತ್‌ ರೆಡ್ಡಿ ಪದಗ್ರಹಣದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಅವರ ಪ್ರಮಾಣವಚನ ಪ್ರತಿಪಕ್ಷಗಳ ಏಕತೆಗೆ ವೇದಿಕೆಯಾಗಲೂಬಹುದು. ನಿರ್ಗಮಿತ ಸಿಎಂ ಕೆ ಚಂದ್ರಶೇಖರ ರಾವ್ (K Chandrashekhar Rao), ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನೂ ರೇವಂತ್ ರೆಡ್ಡಿ ಆಹ್ವಾನಿಸಿದ್ದಾರೆ.

ರೇವಂತ್‌ ರೆಡ್ಡಿ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳು

1) ರೇವಂತ್ ರೆಡ್ಡಿ 2019ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಲ್ಕಾಜ್‌ಗಿರಿಯಿಂದ ಸಂಸದರಾಗಿ ಆಯ್ಕೆಯಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು 2009 ಮತ್ತು 2014ರಲ್ಲಿ ಟಿಡಿಪಿ ಟಿಕೆಟ್‌ನಲ್ಲಿ ಗೆದ್ದ ತಮ್ಮ ಕೊಡಂಗಲ್ ಕ್ಷೇತ್ರವನ್ನು ಕಳೆದುಕೊಂಡರು. ಟಿಡಿಪಿಗೆ ಸೇರುವ ಮೊದಲು ಅವರು ಸ್ವತಂತ್ರವಾಗಿ ಚುನಾವಣೆಯಲ್ಲಿ ಗೆದ್ದರು.

2) ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಉತ್ತೀರ್ಣರಾದ ರೇವಂತ್ ಅವರು ಚುನಾವಣಾ ಪೂರ್ವದಲ್ಲಿ ಚರ ಮತ್ತು ಸ್ಥಿರ ಎರಡೂ ಸೇರಿದಂತೆ ಸುಮಾರು ₹30 ಕೋಟಿ ಆಸ್ತಿಯನ್ನು ಘೋಷಿಸಿದರು.

3) ರೇವಂತ್ ರೆಡ್ಡಿ 1992ರಲ್ಲಿ ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ ಅವರ ಸೊಸೆ ಗೀತಾ ರೆಡ್ಡಿ ಅವರನ್ನು ವಿವಾಹವಾದರು.

4) ರೇವಂತ್ ರೆಡ್ಡಿ ಕುಟುಂಬಕ್ಕೂ ರಾಜಕೀಯಕ್ಕೂ ಸಂಬಂಧ ಇರಲಿಲ್ಲ. ರಾಜಕೀಯಕ್ಕೆ ಬರುವ ಮುನ್ನ ರೇವಂತ್ ತಮ್ಮ ಕುಟುಂಬದ ಕೃಷಿ ಉದ್ಯಮದಲ್ಲಿದ್ದು, ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತಿದ್ದರು.

5) ರೇವಂತ್ ಅವರು ಕೆ. ಚಂದ್ರಶೇಖರ ರಾವ್ ಅವರ ತೆಲಂಗಾಣ ಚಳವಳಿಯಲ್ಲಿ ಸೇರಿಕೊಂಡರು. 2001ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಚನೆಯಾದಾಗ ಕೆಸಿಆರ್ ಜೊತೆಗಿದ್ದರು. 2006ರಲ್ಲಿ ಅವರು ಟಿಆರ್‌ಎಸ್ ತೊರೆದರು.

6) 2015ರಲ್ಲಿ ಮತಕ್ಕಾಗಿ ಲಂಚ ಪಡೆದ ಹಗರಣದಲ್ಲಿ ಸಿಕ್ಕಿಬಿದ್ದರು. ಅಂದಿನ ಟಿಡಿಪಿ ನಾಯಕ ಎಲ್ವಿಸ್ ಸ್ಟೀಫನ್‌ಸನ್‌ ಜೊತೆಗೆ ₹5 ಕೋಟಿ ಡೀಲ್ ಮಾಡಿಕೊಂಡು ₹50 ಲಕ್ಷ ನೀಡುತ್ತಿರುವ ವಿಡಿಯೋ ಬಹಿರಂಗವಾಯಿತು. ರೇವಂತ್ ರೆಡ್ಡಿಯನ್ನು ಬಂಧಿಸಲಾಯಿತು. ಎಲ್ವಿಸ್ ಆಗ ಆಡಳಿತಾರೂಢ ಟಿಆರ್‌ಎಸ್‌ನ ಆಂಗ್ಲೋ-ಇಂಡಿಯನ್ ಸಮುದಾಯದ ನಾಮನಿರ್ದೇಶಿತ ಶಾಸಕರಾಗಿದ್ದರು.

7) 2015ರಲ್ಲಿ ರೇವಂತ್ ರೆಡ್ಡಿ ಜೈಲಿನಲ್ಲಿದ್ದರು. ಅವರ ಮಗಳು ನಿಮಿಶಾ ರೆಡ್ಡಿ ಮತ್ತು ರೆಡ್ಡಿ ಮೋಟಾರ್ಸ್ ಮಾಲೀಕ ಸತ್ಯನಾರಾಯಣ ರೆಡ್ಡಿ ವಿವಾಹವಾದರು. ಇದು ಅದ್ಧೂರಿ ಮತ್ತು ತಾರಾಖಚಿತವಾಗಿತ್ತು. ರೇವಂತ್ ಮದುವೆಗೆ ಹಾಜರಾಗಲು ಕೆಲವು ಗಂಟೆಗಳ ಜಾಮೀನು ಪಡೆದರು.

8) ಅಂದಿನಿಂದ ರೇವಂತ್ ರೆಡ್ಡಿ ಅವರು ಕೆಸಿಆರ್‌ನ ತೀವ್ರ ದ್ವೇಷಿಯಾದರು. ರೇವಂತ್ ಟಿಡಿಪಿಯಿಂದ ಕಾಂಗ್ರೆಸ್‌ಗೆ ಬಂದ ನಂತರವೂ ಅದು ಮುಂದುವರೆಯಿತು. 2020ರಲ್ಲಿ ಕೆಟಿ ರಾಮರಾವ್ ಅವರ ಫಾರ್ಮ್‌ಹೌಸ್ ಮೇಲೆ ಅಕ್ರಮವಾಗಿ ಡ್ರೋನ್ ಹಾರಿಸಿ ಅದರ ಚಿತ್ರಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಿ ರೇವಂತ್ ಅವರನ್ನು ಮತ್ತೆ ಬಂಧಿಸಲಾಯಿತು.

9) ಕೆಸಿಆರ್ ಆಳ್ವಿಕೆಯಲ್ಲಿ ಹಲವಾರು ಸಂದರ್ಭಗಳಲ್ಲಿ ರೇವಂತ್ ರೆಡ್ಡಿಯನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು, ಯಾವುದೇ ಪ್ರತಿಭಟನೆಗೆ ಸೇರದಂತೆ ನಿಷೇಧಿಸಲಾಯಿತು.

10) ಪಕ್ಷದ ಒಳಗೂ ರೇವಂತ್ ಹೋರಾಟಕ್ಕೆ ಸಾಕಷ್ಟು ವಿರೋಧವಿತ್ತು. ಹಲವಾರು ಸ್ಥಳೀಯ ಮುಖಂಡರು ರೇವಂತ್ ಸ್ವಪ್ರಚಾರ ಮತ್ತು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಉತ್ತಮ್ ರೆಡ್ಡಿ, ಕೋಮಟಿರೆಡ್ಡಿ ಸಹೋದರರು (ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ) ಶ್ರೀಧರ್ ಬಾಬು, ಮಲ್ಲು ಭಟ್ಟಿ ವಿಕ್ರಮಾರ್ಕ ಇವರ ವಿರುದ್ಧ ಬಣದಲ್ಲಿದ್ದಾರೆ.

ಇದನ್ನೂ ಓದಿ: Revanth Reddy | ಕರ್ನಾಟಕದಲ್ಲಿ ಬಿಜೆಪಿಗೆ ಸಹಕರಿಸಲು ಕಾಂಗ್ರೆಸ್‌ ನಾಯಕನಿಗೆ ಸಿಎಂ ಕೆಸಿಆರ್‌ 500 ಕೋಟಿ ರೂ. ಆಫರ್, ಕೈ ನಾಯಕನಿಂದಲೇ ಆರೋಪ

Exit mobile version