ಹೈದರಾಬಾದ್: ತೆಲಂಗಾಣದಲ್ಲಿ ಚುನಾವಣೆ (Telangana polls) ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (K Chandrashekar Rao) ಅವರ ಭಾರತ ರಾಷ್ಟ್ರ ಸಮಿತಿ (Bharat Rashtra Samithi) ಪಕ್ಷದ ಸಂಸದನಿಗೆ ಚಾಕುವಿನಿಂದ ಇರಿಯಲಾಗಿದೆ.
ತೆಲಂಗಾಣದ ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಅವರು ಇಂದು ರಾಜ್ಯದ ಸಿದ್ದಿಪೇಟ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಸಂಸದರು ಪಾದ್ರಿಯೊಬ್ಬರ ಮನೆಗೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ.
ಅಪರಿಚಿತ ವ್ಯಕ್ತಿ ಕೈಕುಲುಕುವ ನೆವದಿಂದ ಸಂಸದರ ಬಳಿಗೆ ಹೋದ. ನಂತರ ಇದ್ದಕ್ಕಿದ್ದಂತೆ ಚಾಕುವನ್ನು ಹೊರತೆಗೆದು ಸಂಸದನ ಹೊಟ್ಟೆಗೆ ಇರಿದ. ಕೂಡಲೇ ರ್ಯಾಲಿಯಲ್ಲಿದ್ದ ಬಿಆರ್‌ಎಸ್ ಕಾರ್ಯಕರ್ತರು ದಾಳಿಕೋರನನ್ನು ಹಿಡಿದು ಥಳಿಸಿದ್ದಾರೆ. ದಾಳಿಕೋರನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಸಿದ್ದಿಪೇಟೆ ಪೊಲೀಸ್ ಆಯುಕ್ತ ಎನ್.ಶ್ವೇತಾ ಪಿಟಿಐಗೆ ತಿಳಿಸಿದ್ದಾರೆ.
ಕೋಟಾ ಪ್ರಭಾಕರ ರೆಡ್ಡಿಯವರು ಮೇದಕ್ ಲೋಕಸಭಾ ಕ್ಷೇತ್ರದ ಸಂಸದ. ಇವರ ಹೊಟ್ಟೆಗೆ ಗಾಯವಾಗಿದ್ದು, ಗಜ್ವೇಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಚಾಕುವಿನಿಂದ ಇರಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯದ ಹಿಂದೆ ಒಳಸಂಚು ಇದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Telangana Polls: ಬಿಜೆಪಿ ಅಧಿಕಾರಕ್ಕೆ ಬಂದರೆ ಒಬಿಸಿ ನಾಯಕನಿಗೆ ಸಿಎಂ ಪಟ್ಟ; ಅಮಿತ್ ಶಾ ಘೋಷಣೆ