Site icon Vistara News

ಮಹಾರಾಷ್ಟ್ರದಲ್ಲೂ ಟಿಪ್ಪು ವಿವಾದ;‌ ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ

Kolhapur Protest

Tension Grips Maharashtra's Kolhapur Town Over Social Media Posts On Aurangzeb, Tipu Sultan

ಕೊಲ್ಹಾಪುರ: ಕರ್ನಾಟಕದಲ್ಲಿ ಮೈಸೂರು ಅರಸ ಟಿಪ್ಪು ಸುಲ್ತಾನ್‌ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಆಗಾಗ ವಾಗ್ವಾದ, ಆಕ್ರೋಶ, ಟೀಕೆ, ವ್ಯಂಗ್ಯ, ಪ್ರತ್ಯುತ್ತರಗಳು ನಡೆಯುತ್ತಲೇ ಇರುತ್ತವೆ. ಟಿಪ್ಪು ಜಯಂತಿ ವಿಚಾರದಲ್ಲೂ ವಾಗ್ಯುದ್ಧವೇ ನಡೆಯುತ್ತದೆ. ಆದರೆ, ಟಿಪ್ಪು ಸುಲ್ತಾನ್‌ ವಿವಾದವೀಗ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. ಟಿಪ್ಪು ಸುಲ್ತಾನ್‌ ಹಾಗೂ ಔರಂಗಜೇಬ್‌ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇನ್ನು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಟಿಪ್ಪು ಸುಲ್ತಾನ್‌ ಹಾಗೂ ಔರಂಗಜೇಬ್‌ ಅವರನ್ನು ವೈಭವೀಕರಿಸಿ ಪೋಸ್ಟ್‌ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಹಿಂದು ಸಂಘಟನೆಗಳ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು. ಕೊಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ್‌ ಚೌಕ್‌ನಲ್ಲಿ ಪ್ರತಿಭಟನೆ ಆರಂಭಿಸುತ್ತಲೇ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಯಿತು. ಲಾಠಿ ಚಾರ್ಜ್‌ ಹಾಗೂ ಹಿಂದು ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಏನಿದು ಪ್ರಕರಣ?

ಮೈಸೂರು ಅರಸ ಟಿಪ್ಪು ಸುಲ್ತಾನ್‌ ಹಾಗೂ ಮೊಘಲ್‌ ಅರಸ ಔರಂಗಜೇಬ್‌ ಅವರನ್ನು ವೈಭವೀಕರಿಸಿ ಒಂದಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದಾರೆ. ಇದನ್ನು ಹಿಂದು ಸಂಘಟನೆಗಳು ಖಂಡಿಸಿದ್ದು, ಪೋಸ್ಟ್‌ ಹಾಕಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಕೊಲ್ಹಾಪುರ ಬಂದ್‌ಗೆ ಕರೆ ನೀಡಿದ್ದರು. ಅದರಂತೆ ಪ್ರತಿಭಟನೆ ನಡೆಸುವಾಗ ಗಲಾಟೆ ನಡೆದಿದೆ.

ಇದನ್ನೂ ಓದಿ: Textbook Revision: ಹಿಜಾಬ್‌ ಓಕೆ, ಸೂಲಿಬೆಲೆ ಪಠ್ಯಕ್ಕೆ ಕತ್ತರಿ, ಟಿಪ್ಪು ಪಾಠ ಸೇರ್ಪಡೆ: ಸಾಹಿತಿಗಳ ಒತ್ತಾಯ, ಸಿದ್ದರಾಮಯ್ಯ ಏನಂದ್ರು?

ಕಾನೂನು ಕೈಗೆತ್ತಿಕೊಳ್ಳದಂತೆ ಸಿಎಂ ಮನವಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಹಿಂದು ಸಂಘಟನೆಗಳಿಗೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪವೂ ಇದೆ. ಇದಕ್ಕಾಗಿ, ಹಿಂದು ಸಂಘಟನೆಗಳು ಸರ್ಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿವೆ. ಅದರಲ್ಲೂ, ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್‌ ಮಾಡಿದ್ದು, ಇದರಿಂದ ಕಾರ್ಯಕರ್ತರ ಕೋಪ ಹೆಚ್ಚಾಗಿದೆ. ಆಗ ಪ್ರತಿಭಟನೆ ವೇಳೆ ಕಲ್ಲು ತೂರಾಟ ಕೂಡ ನಡೆದಿದೆ. ಪೊಲೀಸರು 21 ಜನರನ್ನು ಬಂಧಿಸಿದ್ದು, ಕೊನೆಗೆ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ.

ಇನ್ನು ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, “ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಬಾರದು” ಎಂದು ಮನವಿ ಮಾಡಿದ್ದಾರೆ. ಸದ್ಯ, ಕೊಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ್‌ ಚೌಕ್‌ನಲ್ಲಿ ಪರಿಸ್ಥಿತಿ ತಹಬಂದಿಗೆ ಬಂದಿದೆ. ಆದರೂ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ತಿಳಿದುಬಂದಿದೆ.

Exit mobile version