Site icon Vistara News

Terror Attack: ಕ್ಯಾಪ್ಟನ್‌ ಹುತಾತ್ಮರಾಗಿರುವ ಬೆನ್ನಲ್ಲೇ ಉಗ್ರನನ್ನು ಹೊಡೆದುರುಳಿಸಿದ ಸೇನೆ; ಮುಂದುವರಿದ ಕಾರ್ಯಾಚರಣೆ

Terror Attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ದೋಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಸೇನಾ ಕಾರ್ಯಾಚರಣೆ ವೇಳೆ ಕ್ಯಾಪ್ಟನ್‌ವೊಬ್ಬರು ಹುತಾತ್ಮರಾಗಿದ್ದಾರೆ. ಇನ್ನು ಗುಂಡಿನ ಚಕಮಕಿ(Terror Attack)ಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದ್ದು, ಮೂವರು ಉಗ್ರರು ಎಸ್ಕೇಪ್‌ ಆಗಿದ್ದಾರೆ. ಘಟನೆಯಲ್ಲಿ ಓರ್ವ ನಾಗರಿಕನೂ ಗಾಯಗೊಂಡಿದ್ದಾನೆ. ಇನ್ನು ಉಗ್ರರ ಪತ್ತೆಗೆ ಸೇನೆ ಭರ್ಜರಿ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ.

ನಾಲ್ವರು ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಭಾರತೀಯ ಸೇನೆಯ ಯೋಧರು ದಾಳಿ ನಡೆಸಿದರು. ಗುಂಡಿನ ಚಕಮಕಿ ವೇಳೆ ಓರ್ವ ಭಯೋತ್ಪಾದಕ ಗಾಯಗೊಂಡಿರುವುದಾಗಿ ಸೇನೆ ಮಾಹಿತಿ ನೀಡಿದೆ. ಉಗ್ರರ ಜತೆಗಿನ ಕಾಳಗದಲ್ಲಿ ಹುತಾತ್ಮರಾದವರು ಭಾರತೀಯ ಸೇನೆಯ ಕ್ಯಾಪ್ಟನ್ ದೀಪಕ್‌ ಸಿಂಗ್‌ ಎಂದು ತಿಳಿದು ಬಂದಿದೆ. . ಶಿವಘರ್ – ಅಸಾರ್ ವಲಯದಲ್ಲಿ ಈ ಕಾರ್ಯಾಚರಣೆ ನಡೆಯಿತು ಎಂದು ಭಾರತೀಯ ಸೇನೆಯ ಮೂಲಗಳು ಮಾಹಿತಿ ನೀಡಿವೆ.

ಅಮೆರಿಕ ಶಸ್ತ್ರಾಸ್ತ್ರ ಪತ್ತೆ

ಎನ್‌ಕೌಂಟರ್‌ ನಡೆದ ಸ್ಥಳದಿಂದ ಅಮೆರಿಕ ನಿರ್ಮಿತ ಎಂ 4 ಅಸಾಲ್ಟ್ ರೈಫಲ್, ವಿವಿಧ ಉಪಕರಣಗಳು ಹಾಗೂ ಲಾಜಿಸ್ಟಿಕ್ಸ್ ಹೊಂದಿರುವ ಮೂರು ರಕ್ತಸಿಕ್ತ ಚೀಲಗಳನ್ನು ವಶಪಡಿಸಿಕೊಳ್ಳುವಲ್ಲಿ ಸೇನೆ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಸಂಜೆ ಭಯೋತ್ಪಾದಕರ ಅಡಗುತಾಣದ ಬಗ್ಗೆ ಸೇನೆಗೆ ಸುಳಿವು ಲಭಿಸಿತ್ತು. ಹೀಗಾಗಿ ರಾತ್ರಿಯೇ ಸ್ವಲ್ಪ ಸಮಯ ಗುಂಡಿನ ಚಕಮಕಿ ನಡೆದಿತ್ತು. ಇಂದು ಬೆಳಿಗ್ಗೆ ಕಾರ್ಯಾಚರಣೆ ಪುನರಾರಂಭಿಸಲಾಯಿತು.

ಜಮ್ಮು ಮತ್ತು ಕಾಶ್ಮೀಶರದಲ್ಲಿ ಇತ್ತೀಚೆಗೆ ಉಗ್ರರ ಚಟುವಟಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಿರಿಯ ಅಧಿಕಾರಿಗಳು, ಪ್ರಮುಖ ನಾಯಕರು ಭಾಗವಹಿಸಿದರು.

ಜಮ್ಮು ಮತ್ತು ಕಾಶ್ಮೀರ ಪೀರ್ ಪಂಜಾಲ್ ರೇಂಜ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಈ ವಲಯದಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳು ಹಾಗೂ ಬೆಟ್ಟ ಗುಡ್ಡಗಳು ಇದ್ದು, ಉಗ್ರರು ತಮ್ಮ ಅಡಗುತಾಣವನ್ನಾಗಿ ಮಾಡಿಕೊಳ್ಳಲು ಅನುಕೂಲವಾಗುವಂತಿದೆ. ಉಗ್ರರನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ಭದ್ರತಾ ಮ್ಯಾಟ್ರಿಕ್ಸ್ ಅನ್ನು ರೂಪಿಸಲಾಗುತ್ತಿದೆ ಎಂದು ಈ ತಿಂಗಳ ಆರಂಭದಲ್ಲಿ ಸರ್ಕಾರ ಹೇಳಿತ್ತು. ಕಳೆದ ತಿಂಗಳು ಕುಪ್ವಾರಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು.

ಜೂನ್‌ 16ರಂದು ಸಭೆ ನಡೆಸಿದ್ದ ಗೃಹ ಸಚಿವ ಅಮಿತ್‌ ಶಾ ಅವರು, “ಜಮ್ಮುವಿನಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ನಿಗ್ರಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. “ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಕಾಶ್ಮೀರದಲ್ಲಿ ನಿಗ್ರಹಿಸಿದಂತೆ ಜಮ್ಮುವಿನಲ್ಲೂ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು. ಗಡಿಗಳನ್ನು ಇನ್ನಷ್ಟು ಭದ್ರಗೊಳಿಸಬೇಕು. ಒಳನುಸುಳುಕೋರರ ಮೇಲೆ ಹದ್ದಿನ ಕಣ್ಣಿಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು” ಎಂದು ಭದ್ರತಾ ಪಡೆಗಳಿಗೆ ಅಮಿತ್‌ ಶಾ ಸೂಚಿಸಿದ್ದರು. ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ ಅವರು ಕೂಡ ಜಮ್ಮು-ಕಾಶ್ಮೀರ ಭದ್ರತೆ ಕುರಿತಂತೆ ಉನ್ನತಮಟ್ಟದ ಸಭೆ ನಡೆಸಿದ್ದರು. ಎಲ್ಲ ಸೈನಿಕರನ್ನು ಗಡಿ ಸೇರಿ ಆಯಕಟ್ಟಿನ ಪ್ರದೇಶಗಳಿಗೆ ನಿಯೋಜಿಸಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: Terrorist Attack: ಕುಪ್ವಾರ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮ: ಪಾಕ್‌ ಉಗ್ರನನ್ನು ಹೊಡೆದುರುಳಿಸಿದ ಸೇನೆ

Exit mobile version