ದೆಹಲಿ: ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾಕರು ಭಾನುವಾರ ಗುಂಡಿನ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಮತ್ತಷ್ಟು ಹೃದಯಸ್ಪರ್ಶಿ ಕತೆಗಳು ಹೊರ ಬರುತ್ತಿವೆ. ಉಗ್ರರು ಗುಂಡಿನ ದಾಳಿ ನಡೆಸಿದ ಬಳಿಕ ಬಸ್ ಕಮರಿಗೆ ಉರುಳಿತ್ತು. ಗುಂಡೇಟು ಮತ್ತು ಅಪಘಾತದಿಂದಾಗಿ 9 ಮಂದಿ ಹಿಂದೂ ಪ್ರಯಾಣಿಕರು ಬಲಿಯಾಗಿದ್ದರು.
ಸೌರವ್ ಗುಪ್ತಾ (21 ವರ್ಷ) ಉಗ್ರರ ಗುಂಡಿಗೆ ಬಲಿಯಾದವರಲ್ಲಿ ಒಬ್ಬರು. ಸೌರವ್ ಕಿಟಕಿಯ ಸೀಟಿನಲ್ಲಿ ಚಾಲಕನ ಹಿಂದೆಯೇ ಕುಳಿತಿದ್ದ. ಗುಂಡಿನ ಸದ್ದು ಕೇಳಿ ಹಾರಿಸಿದರೂ ಹೆದರದ ಸೌರವ್ ದಾಳಿಯ ಬಗ್ಗೆ ಇತರರಿಗೆ ತಿಳಿಸಲು ಎದ್ದು ನಿಂತಾಗ ಆತನ ಕತ್ತಿನ ಭಾಗಕ್ಕೆ ಗುಂಡು ಬಿದ್ದಿತ್ತು. ಆಗ ಅವರು ಜೀವ ತೆತ್ತಿದ್ದರು. ಗಂಡ ಕಣ್ಣೆದುರೇ ಬಲಿಯಾಗಿದ್ದನ್ನು ಕಂಡು ಪತ್ನಿ ಆಘಾತಗೊಂಡಿದ್ದರು.
ಸೌರವ್ ಗುಪ್ತಾ ಅವರು ಪತ್ನಿ ಶಿವಾನಿ ಗುಪ್ತಾ ಜೊತೆ ವೈಷ್ಣೋದೇವಿ ದೇಗುಲ ತೀರ್ಥಯಾತ್ರೆಗಾಗಿ ಜಮ್ಮುವಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ಸೌರವ್ ಪತ್ನಿ ಸುರಕ್ಷಿತವಾಗಿ ಪಾರಾಗಿದ್ದಾಳೆ. ಆದರೆ ಬಸ್ಸು ಕಮರಿಗೆ ಬಿದ್ದ ಕಾರಣ ಶಿವಾನಿ ಗುಪ್ತಾ ಅವರ ಕಾಲುಗಳು ಮತ್ತು ಮುಖಕ್ಕೆ ಗಂಭೀರವಾದ ಪೆಟ್ಟಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಶಿವಾನಿ ಕಣ್ಮುಂದೆಯೇ ಪತಿ ಗುಂಡಿಗೆ ಬಲಿಯಾಗಿದ್ದಾರೆ. ಆಕೆ, ಪತಿ ಪ್ರಾಣ ಬಿಡುವುದನ್ನು ತನ್ನ ಕಣ್ಣುಗಳಿಂದ ನೋಡಿ ಶಾಕ್ ಆಗಿದ್ದಾಳೆ. ಈ ದಂಪತಿಗೆ ಮದುವೆಯಾಗಿ 2 ವರ್ಷಗಳಾಗಿವೆಯಂತೆ. ಆದರೂ ಇನ್ನೂ ಮಕ್ಕಳಾಗದ ಕಾರಣ ಮಗುವಿಗಾಗಿ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೆ ಭೇಟಿ ನೀಡಲು ಬಂದಿದ್ದರು ಎಂಬುದಾಗಿ ತಿಳಿದುಬಂದಿದೆ.
ಸೌರವ್ 3 ವರ್ಷದ ಮಗುವಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಿದ್ದಾನೆ. ಈಗ ಆತ ತನ್ನ ಹೆಂಡತಿ ಹಾಗೂ ಕಾಲೇಜಿನಲ್ಲಿ ಓದುತ್ತಿರುವ ಸಹೋದರ ಮತ್ತು ತಂದೆಯನ್ನು ಅಗಲಿದ್ದಾನೆ. ಸೌರವ್ ಮತ್ತು ಆತನ ತಂದೆ ರಫ್ತು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಸೌರವ್ ದೇಹವನ್ನು ಅವರ ತಂದೆ ಕುಲದೀಪ್ ಗುಪ್ತಾ ಮತ್ತು ಇತರ ಕುಟುಂಬ ಸದಸ್ಯರು ದೆಹಲಿಗೆ ಸಾಗಿಸಿ, ಈಶಾನ್ಯ ದೆಹಲಿಯ ಮಂಡೋಲಿಯಲ್ಲಿರುವ ಮನೆಯ ಬಳಿ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: Fraud case: ಡಾಕ್ಟರ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಹೋಗಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ನಟ!
ಈ ದಾಳಿಯಲ್ಲಿ ಒಟ್ಟು ಒಂಬತ್ತು ಜನರು ಸಾವನಪ್ಪಿದ್ದು, 42 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಭಯೋತ್ಪಾದಕರ ಗುಂಪು ಲಷ್ಕರ್-ಎ-ತೊಯ್ಬಾ ಕೈವಾಡವಿದೆ ಎಂದು ನಂಬಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ದಾಳಿಯ ಬಗ್ಗೆ ತನಿಖೆ ನಡೆಸಲು ಪೊಲೀಸರು 11 ತಂಡಗಳನ್ನು ರಚಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.