Site icon Vistara News

Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

Terror attack

ಜಮ್ಮು ಮತ್ತು ಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು (Terror attack) ದಾಳಿ ನಡೆಸಿದ ಘಟನೆಯನ್ನು ನಾವು ಹಲವು ಬಾರಿ ಕೇಳಿದ್ದೇವೆ ಮತ್ತು ಟಿವಿಯಲ್ಲಿ ಕೂಡ ನೋಡುತ್ತಿರುತ್ತೇವೆ. ಅಲ್ಲಿನ ಜನರ ಜೀವನ ಬಹಳ ಶೋಚನೀಯವಾಗಿದೆ. ತಮ್ಮ ಮೇಲೆ ಯಾವಾಗ ಸಂಕಷ್ಟ ಬಂದು ಎರಗುತ್ತದೆಯೋ ಎಂಬ ಜೀವಭಯದಲ್ಲೇ ಅಲ್ಲಿನ ಜನ ಇರುತ್ತಾರೆ. ಇಂಥದೊಂದು ಘಟನೆ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ನಡೆದಿದೆ. ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಮೇಲೆ ಭಯೋತ್ಪಾಕರು ಭಾನುವಾರ ಗುಂಡಿನ ದಾಳಿ ನಡೆಸಿದ್ದು, ಇದರ ಪರಿಣಾಮ ಬಸ್ ಆಳವಾದ ಕಮರಿಗೆ ಬಿದ್ದ ಘಟನೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ನಡೆದಿದೆ. ಈ ವೇಳೆ ಉಗ್ರರ ಗುಂಡೇಟು ಬಿದ್ದರೂ ವಿಚಲಿತನಾಗದೆ ಬಸ್ ನಿಲ್ಲಿಸದೆ ಯಾತ್ರಿಕರ ಪ್ರಾಣ ಉಳಿಸಿ ತನ್ನ ಪ್ರಾಣ ತ್ಯಾಗ ಮಾಡಿರುವುದು ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಶಿವಖೋರಿ ದೇವಸ್ಥಾನದಿಂದ ಪೋನಿ ಪ್ರದೇಶದ ಟೆಯಾರ್ತ್ ಗ್ರಾಮದ ಬಳಿಯ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ತೆರಳುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಹೊಂಚು ಹಾಕಿ ಗುಂಡು ಹಾರಿಸಿದ್ದರು. ಇದರ ಪರಿಣಾಮ ಒಂಬತ್ತು ಜನರು ಸಾವನಪ್ಪಿದ್ದು, 42 ಮಂದಿ ಗಾಯಗೊಂಡಿದ್ದರು. ಗುಂಡೇಟಿನ ನಡುವೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿತ್ತು.

ಈ ಕುರಿತು ಬಸ್ ಕಂಪನಿಯ ಮಾಲೀಕ ರಂಜಿತ್ ಸಿಂಗ್ ಈಗ ವಿವರವಾಗಿ ಮಾತನಾಡಿದ್ದು, “ಸಂಜೆ 5 ಗಂಟೆಗೆ ನಮ್ಮ ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ನಮಗೆ ಕರೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಅದು ಭಯೋತ್ಪಾದಕರ ದಾಳಿ ಎಂದು ತಿಳಿದು ಬಂತು. ಭಯೋತ್ಪಾದಕ ಬಸ್ ಹತ್ತಿ ಪ್ರಯಾಣಿಕರನ್ನು ಕೆಳಗಿಳಿಸುವಂತೆ ಚಾಲಕನಿಗೆ ಹೇಳಿದ. ಆಗ ಆ ವ್ಯಕ್ತಿ ಭಯೋತ್ಪಾದಕ ಎಂದು ತಿಳಿದ ಚಾಲಕ ಪ್ರಯಾಣಿಕರನ್ನು ಇಳಿಸಲು ನಿರಾಕರಿಸಿ ವೇಗವಾಗಿ ಬಸ್ ಓಡಿಸಿದ. ಆಗ ಭಯೋತ್ಪಾದಕ ಚಾಲಕನ ಮೇಲೆ ಗುಂಡಿ ಹಾರಿಸಿದ. ನಂತರ ಕಂಡಕ್ಟರ್ ಸ್ಟೀರಿಂಗ್ ಹಿಡಿದುಕೊಂಡಾಗ ಆತನ ಮೇಲೂ ಗುಂಡು ಹಾರಿಸಲಾಯಿತು. ಇದರಿಂದ ಬಸ್ ಆಯತಪ್ಪಿ ಕಮರಿಗೆ ಬಿತ್ತು. ಚಾಲಕ ಬುದ್ಧಿವಂತಿಕೆ ತೋರಿಸದಿದ್ದರೆ ಬಸ್‌ನಲ್ಲಿದ್ದ ಯಾವ ಪ್ರಯಾಣಿಕರೂ ಬದುಕಿರುತ್ತಿರಲಿಲ್ಲ. ಯಾಕೆಂದರೆ ಅವರು ಬಸ್‌ಗೆ ಬೆಂಕಿ ಹಚ್ಚುವ ಸಾಧ್ಯತೆ ಇತ್ತು. ಚಾಲಕನ ಬುದ್ಧಿವಂತಿಕೆಯಿಂದ 40 ಮಂದಿ ಪ್ರಯಾಣಿಕರ ಪ್ರಾಣ ಉಳಿದಿದೆ” ಎಂದು ಹೇಳಿದರು.

ಈ ದಾಳಿಯ ಹಿಂದೆ ಭಯೋತ್ಪಾದಕರ ಗುಂಪು ಲಷ್ಕರ್-ಎ-ತೊಯ್ಬಾ ಕೈವಾಡವಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ದಾಳಿಯ ಬಗ್ಗೆ ತನಿಖೆ ನಡೆಸಲು ಪೊಲೀಸರು ಹನ್ನೊಂದು ತಂಡಗಳನ್ನು ರಚಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Murder Case: 300 ಕೋಟಿಯ ಆಸ್ತಿಗಾಗಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

ಬಸ್ ತಿರುವಿನಲ್ಲಿ ಬಂದಾಗ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಇದು ರಾಜೌರಿ ಮತ್ತು ಪೂಂಚ್ ದಾಳಿಗಳ ಮಾದರಿಯಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಭಯೋತ್ಪಾದಕರು ನಿಧಾನಗತಿಯಲ್ಲಿ ಬರುವ ವಾಹನಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಾರೆ ಎನ್ನಲಾಗಿದೆ.

Exit mobile version