Site icon Vistara News

Terror Attacks in India: ಭಾರತದೊಳಕ್ಕೆ ನುಸುಳಲು ಉಗ್ರರಿಗೆ ಪಾಕಿಸ್ತಾನ ಧನಸಹಾಯ: ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

Terror Attacks in India

Terror Attacks in India

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಇತ್ತೀಚನ ದಿನಗಳಲ್ಲಿ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿದೆ. ದೋಡಾ ಜಿಲ್ಲೆಯಲ್ಲಿ ಜುಲೈ 16ರಂದು ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ (Doda Encounterr) ಓರ್ವ ಅಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ಉನ್ನತ ಮೂಲಗಳು ಭಯೋತ್ಪಾದಕರಿಗೆ ಪಾಕಿಸ್ತಾನ ಒದಗಿಸುವ ಧನಸಹಾಯದ ಬಗ್ಗೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿವೆ. ಇದರಲ್ಲಿ ಗಡಿಯುದ್ದಕ್ಕೂ ಪಾಕಿಸ್ತಾನ ನಿರ್ವಹಿಸುತ್ತಿರುವ ಭಯೋತ್ಪಾದಕ ಶಿಬಿರಗಳ ಪಟ್ಟಿಯೂ ಸೇರಿದೆ (Terror Attacks in India).

ಮೂಲಗಳು ಬಹಿರಂಗಪಡಿಸಿರುವ ಮಾಹಿತಿಯಲ್ಲಿ ಬೆಚ್ಚಿಬೀಳಿಸುವ ಅಂಶಗಳು, ಪಾಕಿ ಪಾಕಿಸ್ತಾನದ ಕುತಂತ್ರಗಳು ಬಹಿರಂಗಗೊಂಡಿವೆ. ಪಾಕಿಸ್ತಾನವು ತರಬೇತಿ ಪಡೆದ ಭಯೋತ್ಪಾದಕರು, ಮಾಜಿ ವಿಶೇಷ ಸೇವಾ ಗುಂಪು (Special Service Group)ಗಳ ಸದಸ್ಯರು ಮತ್ತು ಕೂಲಿ ಸೈನಿಕರನ್ನು ಭಾರತಕ್ಕೆ ಕಳುಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಗುಂಪಿಗೆ ಕನಿಷ್ಠ 1 ಲಕ್ಷ ರೂ. ಒದಗಿಸಲಾಗುತ್ತದೆ. ಜತೆಗೆ ಪಾಕಿಸ್ತಾನವು ಈ ಭಯೋತ್ಪಾದಕರಿಗೆ ಎಂ 4 ರೈಫಲ್‌ಗಳು (M4 rifles) ಮತ್ತು ಚೀನಾದ ಅತ್ಯಾಧುನಿಕ ಗುಂಡು ನಿರೋಧಕ ಕವಚಗಳನ್ನೂ ಪೂರೈಸುತ್ತಿದೆ. ಒಳನುಸುಳುವಿಕೆಯ ಸಮಯದಲ್ಲಿ ಅವರಿಗೆ ಸಹಾಯ ಮಾಡುವ ಮಾರ್ಗದರ್ಶಿಗಳು 10,000 ರೂ.ಗಳಿಂದ 50,000 ರೂ.ವರೆಗೆ ಪಡೆಯುತ್ತಿದ್ದಾರೆ. ಹೆಚ್ಚುವರಿಯಾಗಿ ಭಯೋತ್ಪಾದಕರು ಐಕಾಮ್ ರೇಡಿಯೋ ಸೆಟ್‌ಗಳ ಮೂಲಕ ಸ್ಯಾಮ್‌ಸಂಗ್‌ ಫೋನ್‌ ಮತ್ತು ವೈ ಎಸ್ಎಂಎಸ್ ಅನ್ನು ಬಳಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಮತ್ತೆ ಸಕ್ರಿಯವಾದ ಭಯೋತ್ಪದಕರ ಕ್ಯಾಂಪ್‌

ಪಾಕಿಸ್ತಾನದ ಭಯೋತ್ಪಾದಕರು ಭಾರತಕ್ಕೆ ನುಸುಳಲು ಅಂತಾರಾಷ್ಟ್ರೀಯ ಗಡಿ ಅಥವಾ ಇತರ ಮಾರ್ಗಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮೂಲದ ಪ್ರಕಾರ ಪಾಕಿಸ್ತಾನದಲ್ಲಿ ಭಯೋತ್ಪದಕರ ಕ್ಯಾಂಪ್‌ ಮತ್ತೆ ಸಕ್ರಿಯವಾಗಿದೆ. ಈ ಭಯೋತ್ಪಾದಕರಿಗೆ ಪಾಕಿಸ್ತಾನ ಸೇನೆಯ ಸಹಾಯದಿಂದ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಭಯೋತ್ಪಾದಕರ ಕುಟುಂಬಗಳು ಆರ್ಥಿಕ ಬೆಂಬಲವನ್ನೂ ಒದಗಿಸಲಾಗುತ್ತಿದೆ. ಒಟ್ಟಿನಲ್ಲಿ ಯುವಕರನ್ನು ಭಯೋತ್ಪಾದಕರನ್ನಾಗಿ ಮಾಡಲು ಹಣದ ಆಮೀಷವನ್ನು ಒಡ್ಡಲಾಗುತ್ತಿದೆ ಎನ್ನುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಗಡಿಗಳಲ್ಲಿ ಕಟ್ಟೆಚ್ಚರ

ಪಂಜಾಬ್ ಗಡಿಯನ್ನೂ ಭಯೋತ್ಪಾದಕರು ಭಾರತಕ್ಕೆ ಪ್ರವೇಶಿಸಲು ಬಳಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಸುಮಾರು 20 ಪಾಕಿಸ್ತಾನಿ ಭಯೋತ್ಪಾದಕರು ಪ್ರಸ್ತುತ ಜಮ್ಮು ಪ್ರದೇಶದಲ್ಲಿದ್ದಾರೆ ಮತ್ತು ಸುಮಾರು 20-24 ಜನರು ಕಾಶ್ಮೀರ ಕಣಿವೆಯಲ್ಲಿದ್ದಾರೆ. ಜಮ್ಮುವಿನಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲಾಗಿದೆ ಎಂಬ ಸಂದೇಶವನ್ನು ಕಳುಹಿಸಲು ಪಾಕಿಸ್ತಾನ ಬಯಸಿದೆ ಎಂದು ಮೂಲಗಳು ತಿಳಿಸಿವೆ. ಬಿಎಸ್ಎಫ್ (Border Security Force) ಎಲ್ಲ ಅಂತಾರಾಷ್ಟ್ರೀಯ ಗಡಿಗಳ ಬೇಲಿಗಳು ಮತ್ತು ಸುರಂಗಗಳನ್ನು ಪರಿಶೀಲಿಸುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿದೆ.

ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಜಾಸ್ತಿಯಾಗಿರುವ ಕಾರಣ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಜುಲೈ 6 ಮತ್ತು 7 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಭದ್ರತಾ ಪಡೆಗಳು ಆರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು. 

ಇದನ್ನೂ ಓದಿ: Doda Encounter: ಜಮ್ಮು- ಕಾಶ್ಮೀರದಲ್ಲಿ ಉಗ್ರರ ದಾಳಿ; ಬಿಜೆಪಿಯ ತಪ್ಪು ನೀತಿಯೇ ಕಾರಣ ಎಂದ ರಾಹುಲ್‌ ಗಾಂಧಿ

Exit mobile version