ಲಕ್ನೋ: ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ (Terror Threat) ಪಾಕಿಸ್ತಾನದ ಭಯೋತ್ಪಾದಕ ಸೇರಿದಂತೆ ಮೂವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ನೇಪಾಳ ಗಡಿಯ ಬಳಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂವರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿದ್ದಾರೆ ಮತ್ತು ನಕಲಿ ಭಾರತೀಯ ಗುರುತಿನ ಪುರಾವೆಗಳನ್ನು ಹೊಂದಿದ್ದರು ಎಂದು ಎಟಿಎಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ದೊಡ್ಡ ಪ್ರಮಾಣದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಕೆಲವು ಭಯೋತ್ಪಾದಕರು ಇಂಡೋ-ನೇಪಾಳ ಗಡಿಯ ಮೂಲಕ ಪ್ರವೇಶಿಸಲಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಮೇರೆಗೆ, ಗೋರಖ್ಪುರ ಎಟಿಎಸ್ ಘಟಕದ ತಂಡವನ್ನು ಜಾಗೃತಗೊಳಿಸಲಾಗಿದೆ. ಇಂಡೋ-ನೇಪಾಳ ಗಡಿಯ ಮೂಲಕ ಭಾರತವನ್ನು ಪ್ರವೇಶಿಸುತ್ತಿದ್ದ ಮೂವರು ಆರೋಪಿಗಳನ್ನು ಎಟಿಎಸ್ ಬಂಧಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆರೋಪಿಗಳನ್ನು ಪಾಕಿಸ್ತಾನದ ರಾವಲ್ಪಿಂಡಿ ನಿವಾಸಿ ಮೊಹಮ್ಮದ್ ಅಲ್ತಾಫ್ ಭಟ್, ಇಸ್ಲಾಮಾಬಾದ್ ಮೂಲದ ಸೈಯದ್ ಗಜ್ನಾಫರ್ ಮತ್ತು ಜಮ್ಮು ಮತ್ತು ಕಾಶ್ಮೀರದ ನಿವಾಸಿ ನಾಸಿರ್ ಅಲಿ ಎಂದು ಗುರುತಿಸಲಾಗಿದೆ.
ಗಡಿಯಲ್ಲಿ ಸೆರೆ
ಮಹಾರಾಜ್ಗಂಜ್ ಜಿಲ್ಲೆಯ ಸೋನೌಲಿಯ ಇಂಡೋ-ನೇಪಾಳ ಗಡಿಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್ತಾಫ್ ಭಟ್ ಕಠ್ಮಂಡುವಿನ ಗಜ್ನಾಫರ್ ಜತೆ ಸಂಪರ್ಕಕ್ಕೆ ಬಂದಿದ್ದ. ಆಧಾರ್ ಕಾರ್ಡ್ಗಳು ಸೇರಿದಂತೆ ನಕಲಿ ಭಾರತೀಯ ದಾಖಲೆಗಳನ್ನು ಪಡೆದುಕೊಂಡದ್ದಾರೆ. ನಂತರ ಅವರು ಭಟ್ ಮತ್ತು ಗಜ್ಮಾಫರ್ ಇಂಡೋ-ನೇಪಾಳ ಗಡಿಯ ಮೂಲಕ ಕಾಶ್ಮೀರಕ್ಕೆ ಕರೆತರುವ ಕಾರ್ಯವನ್ನು ಅಲಿ ನಿರ್ವಹಿಸುತ್ತಿದ್ದ ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: S Jaishankar : ಪಾಠ ಹೇಳಲು ಬರಬೇಡಿ; ಭಾರತದ ಚುನಾವಣಾ ವಿಚಾರಕ್ಕೆ ಮೂಗು ತೂರಿಸಿದ ವಿಶ್ವ ಸಂಸ್ಥೆಗೆ ಜೈಶಂಕರ್ ತಿರುಗೇಟು
ಕಾಶ್ಮೀರವನ್ನು ಭಾರತದಿಂದ ಮುಕ್ತಗೊಳಿಸುವ ಉದ್ದೇಶದಿಂದ ಐಎಸ್ಐ ಬೆಂಬಲದೊಂದಿಗೆ ಮುಜಾಫರಾಬಾದ್ನ ಹಿಜ್ಬುಲ್ ಮುಜಾಹಿದ್ದೀನ್ ಶಿಬಿರದಲ್ಲಿ ತರಬೇತಿ ಪಡೆದಿದ್ದೇನೆ ಎಂದು ಮೊಹಮ್ಮದ್ ಅಲ್ತಾಫ್ ಭಟ್ ಎಟಿಎಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಐಎಸ್ಐ ನಿರ್ದೇಶನದ ಮೇರೆಗೆ ಭಟ್ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅವರ ಬಳಿಯಿಂದ ನಕಲಿ ಭಾರತೀಯ ದಾಖಲೆಗಳು, ಪಾಕಿಸ್ತಾನಿ ದಾಖಲೆಗಳು ಮತ್ತು ಪಾಸ್ಪೋರ್ಟ್ಗಳನ್ನು ಎಟಿಎಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), 120 ಬಿ (ಕ್ರಿಮಿನಲ್ ಪಿತೂರಿ), 121 ಎ (ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವುದು ಅಥವಾ ಯುದ್ಧ ಮಾಡಲು ಪ್ರಯತ್ನಿಸುವುದು ಅಥವಾ ಯುದ್ಧ ಮಾಡಲು ಪ್ರಚೋದಿಸುವುದು) ಅಡಿಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.