ನವದೆಹಲಿ: ‘ಇಸ್ಲಾಮಿಕ್ ಭಯೋತ್ಪಾದನೆ’, ‘ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ’ ಎಂಬ ಮಾತುಗಳು ಇವೆ. ಇದರ ಮಧ್ಯೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, “ಯಾವುದೇ ಪ್ರತ್ಯೇಕ ಧರ್ಮದೊಂದಿಗೆ ಭಯೋತ್ಪಾದನೆಯನ್ನು ತಳಕು ಹಾಕಲು ಸಾಧ್ಯವಿಲ್ಲ ಹಾಗೂ ಹಾಗೆ ಮಾಡಲೂಬಾರದು” ಎಂದು ಹೇಳಿದ್ದಾರೆ.
ಉಗ್ರವಾದ, ಉಗ್ರರಿಗೆ ಹಣಕಾಸು ನೆರವು ಕುರಿತು ದೆಹಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಉಗ್ರವಾದಕ್ಕಿಂತ ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವುದು ಈಗ ಹೆಚ್ಚು ಅಪಾಯಕಾರಿಯಾಗಿದೆ. ಹಾಗಾಗಿ, ಉಗ್ರವಾದವನ್ನು ತಡೆಯಲು, ಹಣಕಾಸು ನೆರವು ಒದಗಿಸುವುದನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಹತ್ತಾರು ಕ್ರಮ ತೆಗೆದುಕೊಂಡಿದೆ. ಉಗ್ರವಾದವು ಸಮಾಜದ ವಿರೋಧಿಯಾಗಿದೆ. ಹಾಗಂತ, ಉಗ್ರವಾದವನ್ನು ಯಾವುದೇ ಧರ್ಮ, ಸಮುದಾಯ, ದೇಶಗಳ ಜತೆ ತಳಕು ಹಾಕುವುದು ಸರಿಯಲ್ಲ” ಎಂದಿದ್ದಾರೆ.
“ಉಗ್ರರಿಗೆ ಹಣಕಾಸು ನೀಡುವುದು ಯಾವುದೇ ದೇಶಧ ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತದೆ. ಹಾಗಾಗಿ, ಯಾವುದೇ ದೇಶಗಳು ಉಗ್ರವಾದವನ್ನು ಪೋಷಣೆ ಮಾಡಬಾರದು. ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ಒದಗಿಸಬಾರದು. ಬದಲು ಎಲ್ಲ ದೇಶಗಳೂ ಒಗ್ಗೂಡಿ ಉಗ್ರವಾದದ ವಿರುದ್ಧ ಹೋರಾಡಿದರೆ ಮಾತ್ರ ಜಗತ್ತಿನ ಕಂಟಕವನ್ನು ನಿರ್ಮೂಲನೆ ಮಾಡಬಹುದು” ಎಂದು ತಿಳಿಸಿದರು.
ಇದನ್ನೂ ಓದಿ | Pak New Plan | ಲಾಹೋರ್ ಗುರುದ್ವಾರಗಳಲ್ಲಿ ಖಲಿಸ್ತಾನ್ ಉಗ್ರರು, ಭಾರತೀಯ ಭಕ್ತರಿಗೆ ಬ್ರೈನ್ ವಾಷ್?