Site icon Vistara News

Jammu and Kashmir: ಕಾಶ್ಮೀರದಲ್ಲಿ ಕನಿಷ್ಠಮಟ್ಟಕ್ಕೆ ಇಳಿದ ಭಯೋತ್ಪಾದನೆ, ಡ್ರಗ್ಸ್‌ನದ್ದೇ ದೊಡ್ಡ ಸವಾಲು: ಡಿಜಿಪಿ

Terrorism reduced to minimum in jammu and Kashmir, Says DGP

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಇನ್ನೂ ಉಗ್ರ ಕೃತ್ಯಗಳು (Terrorism) ಸಂಪೂರ್ಣವಾಗಿ ನಿಂತಿಲ್ಲ. ಆದರೆ, ಇದೇ ಮೊದಲ ಬಾರಿಗೆ ಭಯೋತ್ಪಾದನಾ ಕೃತ್ಯಗಳು ದಾಖಲೆಯ ರೀತಿಯಲ್ಲಿ ಕುಸಿತವಾಗಿವೆ. ಭಯೋತ್ಪಾದನೆ ಕೇವಲ ವಿನಾಶವನ್ನು ತರುತ್ತದೆ ಎಂಬುದು ಕಾಶ್ಮೀರದ ಯುವಕರಿಗೆ ಈಗ ಮನವರಿಕೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಹೇಳಿದ್ದಾರೆ(DGP Dilbagh Singh).

ಕಣಿವೆ ರಾಜ್ಯದ ಬಂಡಿಪೋರಾದಲ್ಲಿ ಆಯೋಜಿಸಲಾಗಿದ್ದ ಸಮಾರಂಭದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದಿಲ್ಬಾಗ್ ಸಿಂಗ್ ಅವರು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಇತರ ಭದ್ರತಾ ಪಡೆಗಳ ಸತತ ಪ್ರಯತ್ನದಿಂದಾಗಿ ಭಯೋತ್ಪಾದನೆ ಕಡಿಮೆಯಾಗುತ್ತಿದೆ. ಆದರೆ, ಇದರ ಸಂಪೂರ್ಣ ಶ್ರೇಯ ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಸಲ್ಲಬೇಕು ಎಂದು ಅವರು ಹೇಳಿದ್ದಾರೆ .

ಕಣಿವೆ ರಾಜ್ಯದ ಯುವಕರು ವಿಧ್ವಂಸಕ ಚಟವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ. ಕ್ರೀಡೆ ಹಾಗೂ ವೃತ್ತಿ ಸಂಬಂಧಿ ಚಟುವಟಿಕೆಗಳಲ್ಲಿ ಯುವಕರು ತೊಡಗಿಸಿಕೊಳ್ಳಬೇಕು. ಸುಳ್ಳು ಪ್ರಚಾರಕ್ಕೆ ಬಲಿಯಾಗಿ ಭಯೋತ್ಪಾದನೆಯ ಆಮಿಷಕ್ಕೆ ಒಳಗಾಗುವ ಯುವಕರು ಈಗ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಕ್ರೀಡೆಗಳಲ್ಲಿ ತಮ್ಮ ವೃತ್ತಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಭಯೋತ್ಪಾದನೆಯನ್ನು ಉತ್ತೇಜಿಸಲು ಗಡಿಯಾಚೆಯಿಂದ ನಡೆಸಲಾಗುತ್ತಿರುವ ಸುಳ್ಳು ಕತೆಗಳ ಬಗ್ಗೆ ಯುವಕರು ಮತ್ತು ಜನರು ಅರ್ಥಮಾಡಿಕೊಂಡಿದ್ದಾರೆ. ಕಾಶ್ಮೀರದ ಜನರು ಆ ಕತೆಗಳನ್ನು ತಿರಸ್ಕರಿಸಿದ್ದಾರೆ ಮತ್ತು ಅವರು ಈಗ ಶಾಂತಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಡಿಜಿಪಿ ಹೇಳಿದರು.

ಗುರೇಜ್, ಕುಪ್ವಾರ ಮತ್ತು ಉರಿ ಸೇರಿದಂತೆ ಉತ್ತರ ಕಾಶ್ಮೀರದ ಎಲ್‌ಒಸಿ ಪ್ರದೇಶಗಳಿಂದ ಅಪಾರ ಪ್ರಮಾಣದ ಡ್ರಗ್ಸ್ ಕಳ್ಳಸಾಗಣೆಯಾಗುತ್ತಿರುವುದರಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮುಂದೆ ಮಾದಕ ದ್ರವ್ಯಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಹೀಗಿದ್ದೂ ಪೊಲೀಸರು ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಜನರು ಮಾದಕ ವಸ್ತುಗಳ ಪೂರೈಕೆ ಹಿಂದಿರುವ ಕುತಂತ್ರವನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಡ್ರೋನ್‌ಗಳ ಮೂಲಕ ನಗರದು, ಐಇಡಿಎಸ್, ಆಯುಧಗಳು ಮತ್ತು ಮಾದಕ ದ್ರವ್ಯಗಳನ್ನು ಎಸೆಯುವ ಕೃತ್ಯಗಳನ್ನು ತಡೆಯುವಲ್ಲಿ ಕಾಶ್ಮೀರದ ಪೊಲೀಸ್ ದೊಡ್ಡ ಯಶಸ್ಸು ಕಂಡಿದ್ದಾರೆಂದು ಸಿಂಗ್ ಅವರು ಹೇಳಿದ್ದಾರೆ.

ಮಾರ್ಚ್‌ನಲ್ಲಿ ಕಾಶ್ಮೀರ ಕಣಿವೆಗೆ 1.8 ಲಕ್ಷ ಪ್ರವಾಸಿಗರ ಲಗ್ಗೆ: ದಶಕದ ದಾಖಲೆ

ಉಗ್ರರ ಉಪಟಳದಿಂದ ಕಂಗೆಟ್ಟಿದ್ದ ಕಾಶ್ಮೀರ ಕಣಿವೆಯಲ್ಲಿ ಸದ್ಯ ಶಾಂತಿ ನೆಲೆಸಿದೆ. ಕಳೆದ ಮಾರ್ಚ್‌ ತಿಂಗಳಿನಲ್ಲಿ 1.8 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಇದು 10 ವರ್ಷದಲ್ಲೇ ಇದು ದಾಖಲೆಯಾಗಿದೆ.

ಮುಂದಿನ ಎರಡು ತಿಂಗಳಲ್ಲಿ ದೇಶದ ಬಯಲು ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳವಾಗುವುದರಿಂದ ಕಣಿವೆ ರಾಜ್ಯಕ್ಕೆ ಭೇಟಿ ನೀಡುವವರ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಜೂನ್‌ 30ರಿಂದ 43 ದಿನಗಳ ಕಾಲ ನಡೆಯುವ ಅಮರನಾಥ ವಾರ್ಷಿಕ ಯಾತ್ರೆ ಆರಂಭವಾಗಲಿದ್ದು, ಈ ಸಮಯದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಣಿವೆ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ | ಉಗ್ರ ಕೃತ್ಯಗಳ ಹಿಂದಿರುವ ಶಕ್ತಿಗಳನ್ನು ಮಟ್ಟ ಹಾಕಿ

ಮಾರ್ಚ್‌ ತಿಂಗಳೊಂದರಲ್ಲೇ 1,79,970 ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಇದು ಕಳೆದ 10 ವರ್ಷಗಳಲ್ಲೇ ಅತ್ಯಧಿಕ ದಾಖಲೆಯಾಗಿದೆ. ಮತ್ತಷ್ಟು ಪ್ರವಾಸಿಗರ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

2021ರಲ್ಲಿ 6 ಲಕ್ಷಕ್ಕೂ ಅಧಿಕ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದರೂ ಕೋವಿಡ್-19ರ ಬಳಿಕ ಇಲ್ಲಿಗೆ ಬರುವವರ ಸಂಖ್ಯೆ ಇಳಿಮುಖವಾಯಿತು. 2019ರ ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡಾಗ ಉಂಟಾದ ಬೆಳವಣಿಗೆ ಹಾಗೂ ಕೊರೋನಾ, ಲಾಕ್‌ಡೌನ್‌ನಿಂದ ಕಣಿವೆ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ನಲುಗಿತ್ತು.

Exit mobile version