Site icon Vistara News

Terrorist Attack: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು; ಉಗ್ರನ ದಾಳಿಗೆ ಸರ್ಕಾರಿ ನೌಕರ ಬಲಿ

Terrorist Attack

Terrorist Attack

ಶ್ರೀನಗರ: ಜಮ್ಮು-ಕಾಶ್ಮೀರ (Jammu and Kashmir)ದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮೊಳಗಿದೆ. ಭಯೋತ್ಪಾದಕನ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ (Terrorist Attack). ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಸೋಮವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ಸರ್ಕಾರಿ ನೌಕರ ಮೊಹಮ್ಮದ್ ರಜಾಕ್ ಬಲಿಯಾಗಿದ್ದಾರೆ. ರಾಜೌರಿಯ ಶದ್ರಾ ಶರೀಫ್ ಪ್ರದೇಶದ ಮಸೀದಿಯಿಂದ ಹೊರಬಂದ ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆಯಿತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

40 ವರ್ಷದ ಮೊಹಮ್ಮದ್ ರಜಾಕ್ ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮೃತ ರಝಾಕ್ ಅವರ ಸಹೋದರ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಬಿಹಾರದ ಕಾರ್ಮಿಕನ ಹತ್ಯೆಗೈದ ಉಗ್ರರು

ಕೆಲವು ದಿನಗಳ ಹಿಂದೆಯಷ್ಟೇ ಬಿಹಾರದ ಕಾರ್ಮಿಕರು ಜಮ್ಮ-ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು. ಆ ಘಟನೆ ಇನ್ನೂ ಹಸಿಯಾಗಿರುವಾಗಲೇ ಈ ದಾಳಿ ನಡೆದಿರುವುದು ಆತಂಕ ಮೂಡಿಸಿದೆ. ಏಪ್ರಿಲ್‌ 17ರಂದು ಅನಂತನಾಗ್‌ (Anantnag) ಜಿಲ್ಲೆಯ ಜಬ್ಲಿಪೋರಾ ಗ್ರಾಮದ ಬಳಿ ವಲಸೆ ಕಾರ್ಮಿಕರೊಬ್ಬರನ್ನು (Migrant Worker) ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ (Terrorist Attack) ನಡೆಸಿದ್ದರು. ಗುಂಡಿನ ದಾಳಿಗೆ ಬಿಹಾರ ಮೂಲದ ರಾಜಾ ಶಾಹ್‌ ಎಂಬುವರು ಮೃತಪಟ್ಟಿದ್ದರು.

ಬಿಹಾರ ಮೂಲದ ರಾಜಾ ಶಾಹ್‌ ಅವರು ಕೆಲಸಕ್ಕೆಂದು ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ್ದರು. ಇವರು ಜಬ್ಲಿಪೋರಾ ಗ್ರಾಮದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಉಗ್ರರು ಇವರ ಮೇಲೆ ಗುಂಡಿನ ದಾಳಿ ಮಾಡಿದ್ದು, ಇಡೀ ಕುಟುಂಬವೀಗ ದುಃಖತಪ್ತವಾಗಿದೆ. ರಾಜಾ ಶಾಹ್‌ ಅವರ ಹೊಟ್ಟೆ ಹಾಗೂ ಕುತ್ತಿಗೆಗೆ ಎರಡು ಗುಂಡು ತಗುಲಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದಾಳಿ ಖಂಡಿಸಿದ ಗುಲಾಂ ನಬಿ

ʼʼಬಿಹಾರ ಮೂಲದ ರಾಜಾ ಶಾಹ್‌ ಎಂಬ ವಲಸೆ ಕಾರ್ಮಿಕನ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸುತ್ತೇನೆ. ಗಾಯಗೊಂಡವರು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಕಣಿವೆಯಲ್ಲಿ ಇಂತಹ ಉಗ್ರ ಕೃತ್ಯಗಳು ನಿಲ್ಲಬೇಕು. ಕಾಶ್ಮೀರದ ಜನರಿಗೆ ಶಾಂತಿ ಬೇಕಾಗಿದೆ. ಆದರೆ, ಉಗ್ರರಿಗೆ ಶಾಂತಿ ನೆಲೆಸುವುದು ಬೇಕಾಗಿಲ್ಲ. ಇಂತಹ ಕೃತ್ಯಗಳ ವಿರುದ್ಧ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕಿದೆ” ಎಂದು ಗುಲಾಂ ನಬಿ ಆಜಾದ್‌ ಪೋಸ್ಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದಕರು ವಲಸೆ ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದರು. ಉಗ್ರರ ಗುಂಡಿನ ದಾಳಿಯಲ್ಲಿ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿ ದಿಲ್​ರಂಜಿತ್​ ಸಿಂಗ್ ಎಂಬುವರು ಗಾಯಗೊಂಡಿದ್ದರು. ದಕ್ಷಿಣ ಕಾಶ್ಮೀರ ಜಿಲ್ಲೆಯ ಹೆರ್ಪೊರಾ ಪ್ರದೇಶದಲ್ಲಿ ರಾತ್ರಿ ಗುಂಡಿನ ದಾಳಿ ನಡೆದಿತ್ತು. ಇದಾದ ಬಳಿಕ ಭದ್ರತಾ ಸಿಬ್ಬಂದಿಯು ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಮಿಕರ ರಕ್ಷಣೆ ಮಾಡಿದ್ದರು. ಮೇ 7ರಂದು ಇಲ್ಲಿ ಮತದಾನ ನಡೆಯಲಿದೆ. ಈ ವೇಳೆ ಮತ್ತೆ ಭಯೋತ್ಪಾದಕರ ಹಾವಳಿ ಆರಂಭವಾಗಿದ್ದು ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: Azam Cheema: 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ ಅಜಮ್‌ ಚೀಮಾ ಸಾವು

Exit mobile version