Site icon Vistara News

Kulgam: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಮತ್ತೊಬ್ಬ ಉಗ್ರನ ಎನ್‌ಕೌಂಟರ್‌, 2 ದಿನದಲ್ಲಿ 3ನೇ ಬಲಿ

Kulgam

Terrorist killed in fresh gunfight with security forces in Jammu Kashmir's Kulgam

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಭಾರತೀಯ ಸೇನೆಯು ಉಗ್ರರನ್ನು ಮಟ್ಟಹಾಕುವ ದಿಸೆಯಲ್ಲಿ ಸತತವಾಗಿ ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಅದರಲ್ಲೂ, ಮೇ 4ರಂದು ಪೂಂಚ್‌ನಲ್ಲಿ (Poonch Terror Attack) ವಾಯುಪಡೆಯ ಬೆಂಗಾವಲು ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಬುಧವಾರ (ಮೇ 8) ಕುಲ್ಗಾಮ್‌ನಲ್ಲಿ (Kulgam) ಮತ್ತೊಬ್ಬ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿಯೇ ಕುಲ್ಗಾಮ್‌ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದಂತಾಗಿದೆ.

ಸೋಮವಾರ (ಮೇ 6) ತಡರಾತ್ರಿಯೇ ಕುಲ್ಗಾಮ್‌ನ ರೆಡ್ವಾಣಿ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಭದ್ರತಾ ಸಿಬ್ಬಂದಿಗೆ ಗುಪ್ತಚರ ಮಾಹಿತಿ ದೊರೆತಿತ್ತು. ಇದರ ಅನ್ವಯ ರಾತ್ರೋರಾತ್ರಿ ಸೈನಿಕರು ಕಾರ್ಯಾಚರಣೆ ಕೈಗೊಂಡು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದರು. ಭಾರತದ ಸೈನಿಕರು ಕಾರ್ಯಾಚರಣೆ ಕೈಗೊಳ್ಳುತ್ತಲೇ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದರು. ಆದರೆ, ಕಾರ್ಯಾಚರಣೆ ವೇಳೆ ಭಾರಿ ಮುನ್ನಡೆ ಸಾಧಿಸಿದ ಯೋಧರು ಒಬ್ಬ ಕಮಾಂಡರ್‌ ಸೇರಿ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದರು. ಈಗ ರೆಡ್ವಾಣಿ ಪ್ರದೇಶದಲ್ಲಿಯೇ ಮೂರನೇ ಉಗ್ರನನ್ನೂ ಹತ್ಯೆಗೈದಿದ್ದಾರೆ.

ಮಂಗಳವಾರ ಹತರಾದ ಇಬ್ಬರು ಉಗ್ರರಲ್ಲಿ ಬಸಿತ್‌ ದರ್‌ ಎಂಬಾತನ ಹತ್ಯೆಯು ಪ್ರಾಮುಖ್ಯತೆ ಪಡೆದಿದೆ. ಈತನು ಲಷ್ಕರೆ ತಯ್ಬಾದ ದಿ ರೆಸಿಸ್ಟನ್ಸ್‌ ಫ್ರಂಟ್‌ (TRF) ಕಮಾಂಡರ್‌ ಆಗಿದ್ದು, ಸೈನಿಕರ ಪಟ್ಟಿಯಲ್ಲಿ ಎ ಗ್ರೇಡ್‌ ಉಗ್ರನಾಗಿದ್ದ. ಈತನ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ, ಪೊಲೀಸರು ಹಾಗೂ ನಾಗರಿಕರ ಹತ್ಯೆ ಸೇರಿ ಈತನ ವಿರುದ್ಧ 18 ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.

ಉಗ್ರರ ಫೋಟೊ ಬಿಡುಗಡೆ

ಜಮ್ಮು-ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಮೇ 4ರಂದು ಭಾರತೀಯ ವಾಯುಪಡೆಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ದಾಳಿ ನಡೆಸಿದ ಉಗ್ರರ ಫೋಟೊಗಳು, ಅವರ ಹೆಸರು ಬಹಿರಂಗವಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಉಗ್ರರ ಫೋಟೊಗಳನ್ನು ಬಿಡುಗಡೆ ಮಾಡಲಾಗಿದ್ದು, ಭಾರತೀಯ ಸೇನೆಯು ಇವರನ್ನು ಹೊಡೆದುರುಳಿಸಲು ಪ್ಲಾನ್‌ ರೂಪಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಾಯುಪಡೆ ವಾಹನಗಳ ಮೇಲೆ ದಾಳಿ ಮಾಡಿದ ಮೂವರನ್ನು ಇಲಿಯಾಸ್‌ (ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ), ಲಷ್ಕರೆ ತಯ್ಬಾ ಕಮಾಂಡರ್‌ ಅಬು ಹಮ್ಜಾ ಹಾಗೂ ಹದೂನ್‌ ಎಂಬುದಾಗಿ ಗುರುತಿಸಲಾಗಿದೆ. ಇಲಿಯಾಸ್‌ನ ಕೋಡ್‌ ನೇಮ್‌ (ಗೌಪ್ಯ ಹೆಸರು) ಫೌಜಿ ಎಂಬುದಾಗಿದೆ ಎಂದು ಕೂಡ ತಿಳಿದುಬಂದಿದೆ. ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಪೀಪಲ್ಸ್‌ ಆ್ಯಂಟಿ-ಫ್ಯಾಸಿಸ್ಟ್‌ ಫ್ರಂಟ್‌ ಎಂಬ ಅಂಗಸಂಸ್ಥೆಯ ಪರವಾಗಿ ಉಗ್ರರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Exit mobile version