ಕರಾಚಿ: ಭಾರತದ ಏಜೆನ್ಸಿಗಳಿಗೆ ಮೋಸ್ಟ್ ವಾಂಟೆಡ್ (most wanted terrorist) ಭಯೋತ್ಪಾದಕನಾದ, 2016ರ ಪಠಾಣ್‌ಕೋಟ್ (Pathankot attack) ಉಗ್ರ ದಾಳಿಯ ಮಾಸ್ಟರ್‌ಮೈಂಡ್ ಶಾಹಿದ್ ಲತೀಫ್‌ನನ್ನು (Shahid Latif) ಬುಧವಾರ ಗುಂಡಿಕ್ಕಿ (terrorist killed) ಕೊಲ್ಲಲಾಗಿದೆ. ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಅಪರಿಚಿತರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಶಾಹಿದ್ ಲತೀಫ್ ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆಯಡಿ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದ. ಭಾರತ ಸರ್ಕಾರದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಅವನಿದ್ದ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ (jaish e mohammed – ಜೆಇಎಂ) ಪ್ರಮುಖ ಸದಸ್ಯನಾಗಿದ್ದ. ಭಾರತದಲ್ಲಿ 1994ರ ನವೆಂಬರ್ 12ರಂದು ಅವನನ್ನು ಬಂಧಿಸಲಾಗಿತ್ತು. 16 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದ ಈತ 2010ರಲ್ಲಿ ಬಿಡುಗಡೆಯಾಗಿದ್ದ. ಇವನನ್ನು 2010ರಲ್ಲಿ ವಾಘಾ ಬಾರ್ಡರ್ ಮೂಲಕ ಗಡೀಪಾರು ಮಾಡಲಾಗಿತ್ತು. 1999ರಲ್ಲಿ ನಡೆದ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲಿ ಕೂಡ ಲತೀಫ್ ಆರೋಪಿಯಾಗಿದ್ದ.
ಜನವರಿ 2, 2016ರಂದು ಪಠಾಣ್‌ಕೋಟ್‌ನಲ್ಲಿರುವ ವಾಯುಪಡೆಯ ನೆಲೆ ಮೇಲೆ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದರು. ಸುಮಾರು ನಾಲ್ಕು ದಿನಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಏಳು ಭದ್ರತಾ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದರು. ನಾಲ್ವರು ದಾಳಿಕೋರರನ್ನು ಸೇನಾಯೋಧರು ಕೊಂದಿದ್ದರು. ತನಿಖೆಯಲ್ಲಿ ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪಿಗೆ ಸೇರಿದವರು ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: Terrorists Killed: ಭದ್ರತಾ ಪಡೆಗಳ ಭರ್ಜರಿ ಬೇಟೆ; 4 ಭಯೋತ್ಪಾದಕರ ಹತ್ಯೆ