ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಮಂಗಳವಾರ ಇಬ್ಬರು ಕಾರ್ಮಿಕರನ್ನು ಭಯೋತ್ಪಾದಕರು ಗ್ರೆನೇಡ್ ದಾಳಿ ಮಾಡಿ ಹತ್ಯೆಗೈದಿದ್ದರು. ಇವರಿಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದರು. ಆ ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರರಲ್ಲಿ ಓರ್ವನನ್ನು ಜಮ್ಮು-ಕಾಶ್ಮಿರ ಪೊಲೀಸರು ಹೊಡೆದುರುಳಿಸಿದ್ದಾರೆ.
ಉತ್ತರ ಪ್ರದೇಶದ ಕನೌಜ್ ಮೂಲದ ಕಾರ್ಮಿಕರಾದ ಮೋನಿಶ್ ಕುಮಾರ್ ಮತ್ತು ರಾಮ್ ಸಾಗರ್ ಎಂಬುವರನ್ನು ಶೋಪಿಯಾನ್ ಜಿಲ್ಲೆಯ ಹರ್ಮೇನ್ ಹಳ್ಳಿಯಲ್ಲಿ ಉಗ್ರರು ಕೊಂದು ಹಾಕಿದ್ದರು. ಹರ್ಮೇನ್ ಹಳ್ಳಿಯಲ್ಲಿ ಇವರ ಶೆಡ್ ಇರುವ ಸ್ಥಳದಲ್ಲೇ ಗ್ರೆನೇಡ್ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಮೋನಿಶ್ ಕುಮಾರ್ ಮತ್ತು ರಾಮ್ ಸಾಗರ್ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇವರಿಬ್ಬರ ಹತ್ಯೆಯಾದ ಕೆಲವೇ ಹೊತ್ತಲ್ಲಿ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಬಂಧಿಸಿದ್ದಾಗಿ ಜಮ್ಮು-ಕಾಶ್ಮೀರ ಪೊಲೀಸರು ಹೇಳಿದ್ದರು. ಹಾಗೇ, ಇನ್ನೂ ಕೆಲವರು ಇದ್ದು, ಅವರಿಗಾಗಿ ಹುಡುಕುತ್ತಿದ್ದೇವೆ ಎಂದೂ ತಿಳಿಸಿದ್ದರು.
ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ ಹೆಚ್ಚುತ್ತಲೇ ಇದೆ. ಈ ಇಬ್ಬರು ವಲಸೆ ಕಾರ್ಮಿಕರ ಹತ್ಯೆಗೂ ಒಂದು ದಿನ ಮುಂಚೆ ಶೋಪಿಯಾನ್ನಲ್ಲಿ ಕಾಶ್ಮೀರಿ ಪಂಡಿತ ಪೋರಣ್ ಕ್ರಿಶನ್ ಭಟ್ ಎಂಬಾತನನ್ನು ಉಗ್ರರು ಕೊಂದಿದ್ದಾರೆ. ಹಾಗೇ, ಸೆ.2ರಂದು ಪುಲ್ವಾಮಾದಲ್ಲಿ, ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕ ಮುನೀರ್ ಉಲ್ ಇಸ್ಲಾಮ್ ಎಂಬಾತನನ್ನು ಕೊಂದಿದ್ದರು.
ಇದನ್ನೂ ಓದಿ: Terror Attack | ಶೋಪಿಯಾನ್ನಲ್ಲಿ ನಿಲ್ಲದ ಉಗ್ರರ ದಾಳಿ; ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಬಲಿ