Site icon Vistara News

ಕಾಶ್ಮೀರದಲ್ಲಿ ಉಗ್ರರಿಗೆ ಚೀನಾ ಕುಮ್ಮಕ್ಕು; ಸೈನಿಕರ ಮೇಲೆ ದಾಳಿಗೆ ಚೀನಾ ಶಸ್ತ್ರಾಸ್ತ್ರಗಳ ಬಳಕೆ!

Terrorists In Jammu Kashmir

Terrorists using China-made weapons to attack Army in Jammu and Kashmir: Say Sources

ಶ್ರೀನಗರ: ಲಡಾಕ್‌ ಗಡಿಯಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿ ಕೆಲ ವರ್ಷಗಳಿಂದ ಗಡಿ ಸಂಘರ್ಷಕ್ಕೆ ಇಳಿದಿರುವ ಚೀನಾಗೆ ಭಾರತದ ಯೋಧರು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಇಷ್ಟಾದರೂ ಗಡಿಯಲ್ಲಿ ಉದ್ಧಟತನ ಮುಂದುವರಿಸಿರುವ ಚೀನಾದ ಮತ್ತೊಂದು ಕುತಂತ್ರವೀಗ ಬಯಲಾಗಿದೆ. ಜಮ್ಮು-ಕಾಶ್ಮೀರದಲ್ಲಿ (Jammu Kashmir) ಭಾರತದ ಸೈನಿಕರ ಮೇಲೆ ಉಗ್ರರು ನಡೆಸುತ್ತಿರುವ ದಾಳಿಯ ಹಿಂದೆ ಚೀನಾದ ಕೈವಾಡವಿದೆ. ಚೀನಾದ ಶಸ್ತ್ರಾಸ್ತ್ರಗಳನ್ನೇ (China Made Weapons) ಬಳಸಿ ಉಗ್ರರು ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಪಾಕಿಸ್ತಾನವು ಆರ್ಥಿಕವಾಗಿ ದಿವಾಳಿಯಾಗಿರುವ ಕಾರಣ ಉಗ್ರರಿಗೆ ಸರಿಯಾಗಿ ಹಣಕಾಸು ನೆರವು ಸಿಗುತ್ತಿಲ್ಲ. ಜಮ್ಮು-ಕಾಶ್ಮೀರದಲ್ಲೂ ಪ್ರತ್ಯೇಕವಾದಿಗಳ ಹೆಡೆಮುರಿ ಕಟ್ಟಿದ ಕಾರಣ ಉಗ್ರರು ಶಸ್ತ್ರಾಸ್ತ್ರ ಖರೀದಿಸಲು ಆಗುತ್ತಿಲ್ಲ. ಮತ್ತೊಂದೆಡೆ, ಭಾರತದ ವಿರುದ್ಧ ಹಲ್ಲು ಮಸಿಯುವ, ಸುಖಾಸುಮ್ಮನೆ ಕ್ಯಾತೆ ತೆಗೆಯುವ ಚೀನಾ ಈಗ ಪಾಕಿಸ್ತಾನಿ ಉಗ್ರರ ಮೂಲಕ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಲಷ್ಕರೆ ತಯ್ಬಾ, ಜೈಶೆ ಮೊಹಮ್ಮದ್‌ ಸೇರಿ ಹಲವು ಉಗ್ರ ಸಂಘಟನೆಗಳಿಗೆ ಚೀನಾ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ಬಂದೂಕು, ಬಾಡಿಸೂಟ್‌ ಕ್ಯಾಮೆರಾಗಳು, ಕಮ್ಯುನಿಕೇಶನ್‌ ಡಿವೈಸ್‌ಗಳು ಸೇರಿ ಹಲವು ಉಪಕರಣಗಳನ್ನು ಜಮ್ಮು-ಕಾಶ್ಮೀರದಲ್ಲಿರುವ ಉಗ್ರರು ಇತ್ತೀಚೆಗೆ ಬಳಸುತ್ತಿದ್ದಾರೆ. ಚೀನಾದಿಂದ ನೆರವು ಪಡೆಯುವ ಉಗ್ರರು ಕಣಿವೆಯಲ್ಲಿ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಇತ್ತೀಚಿನ ದಾಳಿಗಳ ವೇಳೆ ಉಗ್ರರು ಚೀನಾ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ.

ಡಿಸೆಂಬರ್‌ 21ರಂದು ಜಮ್ಮು-ಕಾಶ್ಮೀರದ ರಾಜೌರಿ ಸೆಕ್ಟರ್‌ನ ಥಾನಮಂಡಿ ಪ್ರದೇಶದಲ್ಲಿ ಎರಡು ಸೇನಾ ವಾಹನಗಳ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದೇ ವೇಳೆ ಮೂವರು ಯೋಧರು ಗಾಯಗೊಂಡಿದ್ದರು. ಇನ್ನು ನವೆಂಬರ್‌ನಲ್ಲೂ ರಾಜೌರಿಯ ಕಲಾಕೋಟೆಯಲ್ಲಿ ಭಾರತೀಯ ಸೇನೆ ಮತ್ತು ಅದರ ವಿಶೇಷ ಪಡೆಗಳು ನಡೆಸಿದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಹುತಾತ್ಮರಾಗಿದ್ದರು.

100ಕ್ಕೂ ಅಧಿಕ ಉಗ್ರರು ಸಕ್ರಿಯ

ಜಮ್ಮು-ಕಾಶ್ಮೀರದಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ 30ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದು, 204 ಉಗ್ರರನ್ನು ಬಂಧಿಸಿದರೂ ಇನ್ನೂ 111 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್‌ ಮಾಡುವುದು ಸೇನೆಯ ಗುರಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version