ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಯಾವುದೇ ದೇಶಕ್ಕೆ ಹೋಗಲಿ, ಭಾರತದ ಘನತೆ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಭಾಷೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡುತ್ತಾರೆ. ಅದರಲ್ಲೂ ಇತ್ತೀಚೆಗೆ ಮೋದಿ ಅವರು ಬೇರೆ ದೇಶಗಳಿಗೆ ತೆರಳಿದಾಗ ತಮಿಳುನಾಡಿನ ಭಾಷೆ, ಸಂಸ್ಕೃತಿ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಫ್ರಾನ್ಸ್‌ನಲ್ಲೂ ಅವರು ತಮಿಳು ಭಾಷೆಯ ಕುರಿತು ಮಾತನಾಡಿರುವುದು ಇದಕ್ಕೆ ನಿದರ್ಶನವಾಗಿದೆ.
ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಗುರುವಾರ ರಾತ್ರಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ, ತಮಿಳು ಭಾಷೆಯ ಹಿರಿಮೆ ಎತ್ತಿಹಿಡಿದರು. ನಮಸ್ಕಾರ ಹಾಗೂ ವಣಕ್ಕಮ್ ಎಂದು ಹೇಳುತ್ತಲೇ ಅವರು ಭಾಷಣ ಆರಂಭಿಸಿದರು. “ಭಾರತದಲ್ಲಿ ನೂರಾರು ಭಾಷೆಗಳಿವೆ. ಅದರಲ್ಲೂ, ತಮಿಳು ಅತಿ ಪ್ರಾಚೀನ ಭಾಷೆ ಎನಿಸಿದೆ. ಇದು ಭಾರತದ ವೈವಿಧ್ಯತೆಯಲ್ಲಿ ಏಕತೆ ಎಂಬ ಮಾತಿಗೆ ನಿದರ್ಶನವಾಗಿದೆ” ಎಂದು ಮೋದಿ ಹೇಳಿದರು.
ಫ್ರಾನ್ಸ್‌ನಲ್ಲಿ ಮೋದಿ ಭಾಷಣದ ಝಲಕ್
India- the mother of democracy and model of diversity. pic.twitter.com/WE7c8Lxqvd
— Narendra Modi (@narendramodi) July 13, 2023
“ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದೆ. ನೂರಾರು ಭಾಷೆಗಳಿಗೆ ಭಾರತ ಒಡಲಾಗಿದೆ. ತಮಿಳು ಜಗತ್ತಿನ ಪ್ರಾಚೀನ ಭಾಷೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಇತ್ತೀಚೆಗೆ ವಿಂಬಲ್ಡನ್ ಗೆದ್ದಾಗ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರನ್ನು ಭಾರತದಲ್ಲಿ ತಲೈವಾ (ಬಾಸ್) ಎಂದು ಕರೆಯಲಾಯಿತು. ಇದು ನಮ್ಮ ಭಾಷಾ ವೈವಿಧ್ಯತೆಗೆ ಹಿಡಿದ ಕನ್ನಡಿಯಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: PM Modi UAE Visit: ಯುಎಇ ತಲುಪಿದ ಪ್ರಧಾನಿ; ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ತಿರಂಗಾ, ಮೋದಿ
ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗಲೂ ತಮಿಳು ಭಾಷೆಯನ್ನು ಪ್ರಸ್ತಾಪಿಸಿದ್ದರು. ರೊನಾಲ್ಡ್ ರೇಗನ್ ಬ್ಯುಲ್ಡಿಂಗ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುವ ವೇಳೆ ಅವರು ತಮಿಳು ಭಾಷೆಯನ್ನು ಪ್ರಸ್ತಾಪಿಸಿದ್ದರು. ಅಷ್ಟೇ ಏಕೆ, ನೂತನ ಸಂಸತ್ ಭವನದಲ್ಲಿ ತಮಿಳುನಾಡಿನ ಸೆಂಗೋಲ್‌ಅನ್ನು ಮೋದಿ ಪ್ರತಿಷ್ಠಾಪಿಸಿದ್ದಾರೆ. ಆ ಮೂಲಕ ಅವರು ತಮಿಳುನಾಡು ಪ್ರೇಮ ಮೆರೆದಿದ್ದಾರೆ.