ಮುಂಬಯಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮೃದ್ಧಿ ಎಕ್ಸ್‌ಪ್ರೆಸ್‌ವೇ (Samruddhi expressway) ಮೂರನೇ ಹಂತದ ನಿರ್ಮಾಣದ ವೇಳೆ ಗರ್ಡರ್ ಯಂತ್ರವೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ ಕನಿಷ್ಠ 15 ಕಾರ್ಮಿಕರು ಸಾವಿಗೀಡಾಗಿದ್ದಾರೆ.
ಈ ಗರ್ಡರ್ ಯಂತ್ರ ಸೇತುವೆ ನಿರ್ಮಾಣದಲ್ಲಿ ಬಳಸಲಾಗುವ ವಿಶೇಷ ಉದ್ದೇಶದ ಬೃಹತ್ ಮೊಬೈಲ್ ಗ್ಯಾಂಟ್ರಿ ಕ್ರೇನ್ ಆಗಿದೆ. ಕನಿಷ್ಠ 3 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ನಸುಕಿನ ವೇಳೆ ಅಪಘಾತ ಸಂಭವಿಸಿದೆ. ಥಾಣೆಯ ಸರ್ಲಾಂಬೆ ಗ್ರಾಮದ ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಅಪಘಾತ ಸಂಭವಿಸಿದೆ. ಪತ್ತೆಯಾಗಿರುವ ಮೃತದೇಹಗಳ ಹೊರತಾಗಿಯೂ ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಗರ್ಡರ್ ಯಂತ್ರಕ್ಕೆ ಸಂಪರ್ಕ ಕಲ್ಪಿಸುವ ಕ್ರೇನ್ ಮತ್ತು ಸ್ಲ್ಯಾಬ್ 100 ಅಡಿ ಎತ್ತರದಿಂದ ಬಿದ್ದು ಭಾರಿ ಅವಘಡ ಸಂಭವಿಸಿದೆ. ಗಾಯಾಳುಗಳೊಂದಿಗೆ ಮೃತ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪೊಲೀಸ್ ಸಿಬ್ಬಂದಿ, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ಹೆದ್ದಾರಿ ಮತ್ತು ಹೈ-ಸ್ಪೀಡ್ ರೈಲು ಸೇತುವೆ ನಿರ್ಮಾಣ ಯೋಜನೆಗಳಲ್ಲಿ ಪ್ರಿಕಾಸ್ಟ್ ಬಾಕ್ಸ್ ಗಿರ್ಡರ್‌ಗಳನ್ನು ಸ್ಥಾಪಿಸಲು ಈ ಯಂತ್ರವನ್ನು ಬಳಸಲಾಗುತ್ತದೆ. ʼಸಮೃದ್ಧಿ ಮಹಾಮಾರ್ಗ್ʼ ಅಥವಾ ʼಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ʼ ಹೆದ್ದಾರಿ ನಿರ್ಮಾಣ ಹಂತದಲ್ಲಿದ್ದು, ಇದು ಮುಂಬೈ ಮತ್ತು ನಾಗ್ಪುರವನ್ನು ಸಂಪರ್ಕಿಸುವ 701 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ.
ಇದನ್ನೂ ಓದಿ: Haryana Violence: ಹರ್ಯಾಣದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಇಬ್ಬರು ಹೋಮ್‌ಗಾರ್ಡ್ಸ್ ಸಾವು, 7 ಪೊಲೀಸರಿಗೆ ಗಾಯ