ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿಯೇ ಅಡುಗೆ ಅನಿಲ ಸಿಲಿಂಡರ್ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವ ಮೂಲಕ ಜನರ ಹೊರೆ ಕಡಿಮೆ ಮಾಡಿರುವ ಕೇಂದ್ರ ಸರ್ಕಾರವೀಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGA) ಕಾರ್ಮಿಕರ ದಿನಗೂಲಿಯನ್ನು (MGNREGA Wages) ಹೆಚ್ಚಿಸಿದೆ. ಕರ್ನಾಟಕ (Karnataka) ಸೇರಿ ದೇಶಾದ್ಯಂತ ನರೇಗಾ ಯೋಜನೆಯ ದಿನಗೂಲಿಯನ್ನು ಕೇಂದ್ರ ಸರ್ಕಾರವು (Central Government) ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕದಲ್ಲಿ 33 ರೂ. ಹೆಚ್ಚಳ
ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕರ್ನಾಟಕದಲ್ಲಿ 33 ರೂ. ದಿನಗೂಲಿಯನ್ನು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು 349 ರೂ.ಗೆ ಏರಿಕೆಯಾಗಿದೆ. 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು 33 ರೂ. ದಿನಗೂಲಿಯನ್ನು ಹೆಚ್ಚಳ ಮಾಡಿದ್ದು, 2024ರ ಏಪ್ರಿಲ್ 1ರಿಂದ ಹೊಸ ದಿನಗೂಲಿಯು ಜಾರಿಗೆ ಬರಲಿದೆ. ಇದರಿಂದ ಕರ್ನಾಟಕದಲ್ಲಿ ಲಕ್ಷಾಂತರ ನರೇಗಾ ಕಾರ್ಮಿಕರಿಗೆ ಅನುಕೂಲವಾಗಲಿದೆ.
The Centre notifies the latest revision in MGNREGA wages pic.twitter.com/gcq2mrFWn7
— ANI (@ANI) March 28, 2024
ಕರ್ನಾಟಕದಲ್ಲಿ ಕೇಂದ್ರ ಸರ್ಕಾರವು 2023-24ನೇ ಸಾಲಿನಲ್ಲಿ ನರೇಗಾ ದಿನಗೂಲಿಯನ್ನು ಕೇವಲ 7 ರೂ. ಹೆಚ್ಚಿಸಿತ್ತು. ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು 316 ರೂ. ಆಗಿತ್ತು. 2022-23ನೇ ಸಾಲಿನಲ್ಲಿ 309 ರೂ. ದಿನಗೂಲಿ ನಿಗದಿಪಡಿಸಲಾಗಿತ್ತು. ಕರ್ನಾಟಕದಲ್ಲಿ ನರೇಗಾ ಕಾರ್ಮಿಕರಿಗೆ ದಿನಗೂಲಿ ಬಾಕಿ ಉಳಿದಿದ್ದು, ಕೇಂದ್ರ ಸರ್ಕಾರವು 702 ಕೋಟಿ ರೂ. ಬಾಕಿ ಉಳಿದಿದೆ ಎಂದು ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ದಿನಗೂಲಿಯನ್ನು ಪರಿಷ್ಕರಣೆ ಮಾಡಿದೆ.
ಇದನ್ನೂ ಓದಿ: Child Care Center: ನರೇಗಾ ಕೂಲಿಕಾರರ ಮಕ್ಕಳಿಗಾಗಿ ಸುಸಜ್ಜಿತ ಶಿಶುಪಾಲನಾ ಕೇಂದ್ರ
ಕೇಂದ್ರ ಸರ್ಕಾರವು 2024-25ನೇ ಸಾಲಿನಲ್ಲಿ ಕರ್ನಾಟಕ ಸೇರಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನರೇಗಾ ದಿನಗೂಲಿಯನ್ನು ಏರಿಕೆ ಮಾಡಿದೆ. ದೇಶದಲ್ಲಿಯೇ ಅತಿ ಹೆಚ್ಚು ದಿನಗೂಲಿ ನಿಗದಿಪಡಿಸಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಅರುಣಾಚಲ ಪ್ರದೇಶ, ಬಿಹಾರ, ಅಸ್ಸಾಂ, ಜಮ್ಮು-ಕಾಶ್ಮೀರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಮಹಾರಾಷ್ಟ್ರ, ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ನರೇಗಾ ದಿನಗೂಲಿಯು 300 ರೂ.ಗಿಂತ ಕಡಿಮೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ