Site icon Vistara News

ವಿಸ್ತಾರ ಸಂಪಾದಕೀಯ | ಪ್ರಜೆಯೇ ಪ್ರಭು, ಇದೇ ಗಣರಾಜ್ಯೋತ್ಸವದ ಸಂದೇಶ

Republic Day

ನವ ದೆಹಲಿಯಲ್ಲಿ ನಡೆಯುವ ಈ ವರ್ಷದ ಗಣರಾಜ್ಯೋತ್ಸವ ಪರೇಡ್ (ಜ.26) ವಿಶೇಷವಾಗಿರಲಿದೆ. ಪ್ರತಿಸಲದಂತೆ ಪ್ರಧಾನಮಂತ್ರಿಗಳಿಂದ ಅಮರ್ ಜವಾನ್ ಜ್ಯೋತಿಗೆ ಭೇಟಿ, ರಾಷ್ಟ್ರಪತಿಗಳಿಂದ ರಾಷ್ಟ್ರ ಧ್ವಜಾರೋಹಣದ ಜತೆಗೆ ಕರ್ತವ್ಯ ಪಥದಲ್ಲಿ ನಮ್ಮ ಮೂರೂ ಸೇನೆಗಳಿಂದ ಕಣ್ಮನ ಸೆಳೆಯುವ ಗಣರಾಜ್ಯೋತ್ಸವ ಪರೇಡ್ ನಡೆಯಲಿದೆ. ಈ ಬಾರಿಯ ಮುಖ್ಯ ಅತಿಥಿಯಾಗಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ. ಎಲ್ಲಕ್ಕಿಂತ ಮುಖ್ಯ ಬದಲಾವಣೆ ಎಂದರೆ, ಈ ಮಹತ್ವದ ಕಾರ್ಯಕ್ರಮದ ಎದುರಿನ ಸ್ಥಾನಗಳನ್ನು ಅಲಂಕರಿಸಲಿರುವವರು ರಿಕ್ಷಾವಾಲಾಗಳು, ಶ್ರಮಿಕರು, ಕಾರ್ಮಿಕರು, ತರಕಾರಿ ಮಾರುವವರು, ಬೀದಿ ವ್ಯಾಪಾರಿಗಳು, ಸ್ವಚ್ಛತಾ ಕಾರ್ಮಿಕರು ಮುಂತಾದ ಶ್ರೀಸಾಮಾನ್ಯರು. ವಿಐಪಿಗಳ ಬದಲಿಗೆ ಜನಸಾಮಾನ್ಯರಿಗೆ ಅವಕಾಶ ನೀಡುವ ಈ ಬದಲಾವಣೆ ಒಂದು ಕ್ರಾಂತಿಕಾರಕ, ಸ್ವಾಗತಾರ್ಹ ನಿರ್ಧಾರ.

ʼʼಜನರ ಭಾಗೀದಾರಿಕೆ ಎಂಬುದು ಈ ವರ್ಷದ ಮುಖ್ಯ ವಿಷಯವಾಗಿದ್ದು, ಹೆಚ್ಚಿನ ಕಾರ್ಯಕ್ರಮಗಳನ್ನು ಇದೇ ಆಶಯದಲ್ಲಿ ರೂಪಿಸಿದ್ದೇವೆ” ಎಂದು ರಕ್ಷಣಾ ಕಾರ್ಯದರ್ಶಿ ಹೇಳಿದ್ದಾರೆ. ಇದು ಗಣರಾಜ್ಯೋತ್ಸವದ ಆಶಯಕ್ಕೆ ಪೂರಕವಾಗಿದೆ. ಗಣರಾಜ್ಯ ದಿನ ಎಂಬುದು ಈ ದೇಶದ ಜನತೆ ಸಾರ್ವಭೌಮತ್ವವನ್ನು ಸಾಧಿಸಿದ ಸಂಕೇತ. ಜನವರಿ 26, 1950ರಂದು, ಭಾರತ ಒಕ್ಕೂಟ ತನ್ನ ಸಂವಿಧಾನವನ್ನು ಅಂಗೀಕರಿಸುವುದರೊಂದಿಗೆ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ರಾಷ್ಟ್ರವಾಯಿತು. ಹೀಗೆ ಈ ಐತಿಹಾಸಿಕ ದಿನ ಹುಟ್ಟಿಕೊಂಡಿತು. ಹೀಗಾಗಿ ಈ ದಿನ ರಾಜಕೀಯ ನಾಯಕರಿಗಿಂತಲೂ, ಅಧಿಕಾರಿಗಳಿಗಿಂತಲೂ ಸಾಮಾನ್ಯ ಸಾರ್ವಜನಿಕರಿಗೆ ಹೆಚ್ಚು ಸಂಭ್ರಮಾಚರಣೆಯನ್ನು ನೀಡಬೇಕು. ಸಾಮಾನ್ಯ ಜನತೆ ಗಣರಾಜ್ಯೋತ್ಸವದ ಪ್ರಮುಖ ಅಂಶಗಳಲ್ಲಿ ಭಾಗವಹಿಸಬೇಕು. ಇದನ್ನೇ ಪ್ರಧಾನಮಂತ್ರಿ ಮೋದಿಯವರು ಕೂಡ ಒತ್ತಿ ಹೇಳಿದ್ದಾರೆ. ಸಂವಿಧಾನದ ಪೀಠಿಕೆ (Preamble) ಕೂಡ ʼವಿ ದಿ ಪೀಪಲ್‌…ʼ ಅಂದರೆ ʼಭಾರತದ ಜನತೆಯಾದ ನಾವು..ʼ ಎಂದು ಆರಂಭವಾಗುತ್ತದೆ. ಪ್ರಜಾಪ್ರಭುತ್ವದ ಆಶಯಗಳನ್ನು ಪ್ರತಿಪಾದಿಸಿದ್ದ ಉನ್ನತ ನಾಯಕ ಅಬ್ರಹಾಂ ಲಿಂಕನ್‌ ಕೂಡ ಪ್ರಜಾಪ್ರಭುತ್ವವೆಂದರೆ ʼಜನರಿಂದ, ಜನರಿಗಾಗಿ, ಜನರೇ ಮಾಡಿಕೊಳ್ಳುವ ಆಡಳಿತʼ ಎಂದಿದ್ದರು. ಇವೆಲ್ಲವೂ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಜನತೆಯ ಪ್ರಭುತ್ವವನ್ನೇ ಎತ್ತಿ ಹಿಡಿದಿವೆ. ಹೀಗಾಗಿ ಗಣರಾಜ್ಯ ಆಚರಣೆಯಲ್ಲೂ ಇಂತಹವರೇ ಮುನ್ನೆಲೆಯಲ್ಲಿ ಇರಬೇಕಲ್ಲವೇ?

ಆದ್ದರಿಂದಲೇ, ಅಧಿಕಾರಕೇಂದ್ರಿತವಾಗಿದ್ದ ಗಣರಾಜ್ಯೋತ್ಸವವನ್ನು ಜನಕೇಂದ್ರಿತವಾಗಿಸುವ ಈ ಪ್ರಯತ್ನ ನಿಜಕ್ಕೂ ಸ್ವಾಗತಾರ್ಹವೆನಿಸುತ್ತದೆ. ಈ ಹಿಂದೆಯೂ ಇಂಥ ಕೆಲ ಸಣ್ಣಪುಟ್ಟ ಪ್ರಯತ್ನಗಳು ಆಗಿವೆ. ಕಳೆದ ವರ್ಷವೂ ಸಫಾಯಿ ಕರ್ಮಚಾರಿಗಳು ಮುಂತಾದ ವಲಯಗಳಿಂದ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಆಯ್ದ ರಾಜ್ಯಗಳ ಟ್ಯಾಬ್ಲೋಗಳು, ಕಲಾತಂಡಗಳು ಅಲ್ಲಲ್ಲಿನ ಸಂಸ್ಕೃತಿಯನ್ನು ಈ ದೊಡ್ಡ ವೇದಿಕೆಯ ಮೇಲೆ ಪ್ರದರ್ಶಿಸುವುದು ನಡೆದುಬಂದಿದೆ. ಸಾಹಸ ಮೆರೆದವರಿಗೆ ಶೌರ್ಯ ಪ್ರಶಸ್ತಿಗಳನ್ನು, ಯೋಧರಿಗೆ ವೀರಚಕ್ರ ಪ್ರಶಸ್ತಿಗಳನ್ನು, ನಾಗರಿಕ- ಸಾಂಸ್ಕೃತಿಕ- ಸಾಮಾಜಿಕ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನೂ ನೀಡಿ ಗುರುತಿಸುವುದು ವಾಡಿಕೆಯಾಗಿ ನಡೆದುಬಂದಿದೆ. ಯಾರೂ ಗುರುತಿಸಿರದ ತೆರೆಮರೆಯ ಸಾಧಕರನ್ನು ಇತ್ತೀಚೆಗಿನ ವರ್ಷಗಳಲ್ಲಿ ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡಿರುವುದು ಗಮನಿಸಬಹುದು. ಶ್ರೀಸಾಮಾನ್ಯನಿಗೆ ಹೆಚ್ಚು ಹೆಚ್ಚು ಹತ್ತಿರವಾಗಲು ಪ್ರಧಾನಿ ಮೋದಿ ಅವರು ನಡೆಸುತ್ತಿರುವ ಉಪಕ್ರಮಗಳು ಮನ್‌ ಕಿ ಬಾತ್‌ನಿಂದ ಹಿಡಿದು, ಸ್ವಚ್ಛತಾ ಕಾರ್ಮಿಕರ ಜತೆಗೆ ಸಮಯ ಕಳೆಯುವುದರವರೆಗೆ ಹಬ್ಬಿವೆ. ಈ ಬಾರಿ ʼನಾರಿಶಕ್ತಿʼ ಎಂಬ ಥೀಮ್‌ನಲ್ಲಿ ದೇಶದ ವಿವಿಧೆಡೆಯ 503 ನೃತ್ಯಕಲಾವಿದರು ನಾಟ್ಯಪ್ರದರ್ಶನವನ್ನೂ ನೀಡಲಿರುವುದು ಕೂಡ ಸಂತೋಷದ ಸಂಗತಿ. ಕಳೆದ ವರ್ಷ ಪುರುಷರ ಆರ್ಮಿ ಆರ್ಡ್‌ನೆನ್ಸ್‌ ಕೋರ್‌ ದಳವನ್ನು ಲೆ.ಮನಿಶಾ ವೋಹ್ರಾ ಎಂಬ ಮಹಿಳೆ ಮುನ್ನಡೆಸಿದ್ದರು.

ಕೇಂದ್ರ ಸರ್ಕಾರದ ಮಟ್ಟದಲ್ಲಿ ಇಂಥ ಪ್ರಯತ್ನಗಳು ನಡೆದಾಗ, ರಾಜ್ಯ ಸರ್ಕಾರ ಹಾಗೂ ಅಧಿಕಾರಶಾಹಿಯ ಮಟ್ಟದಲ್ಲೂ ಕಿಂಚಿತ್ತಾದರೂ ಬದಲಾವಣೆ, ಸುಧಾರಣೆ ಆಗಿಯೇ ಆಗುತ್ತದೆ. ಅತಿಸಾಮಾನ್ಯರ ಜತೆ ಬೆರೆಯುವ ಮೂಲಕ ಪ್ರಧಾನಿ ಇತರ ಅಧಿಕಾರಸ್ಥರಿಗೆ ರವಾನಿಸುವ ಸಂದೇಶ ಸಣ್ಣದೇನೂ ಅಲ್ಲ. ಶ್ರೀಸಾಮಾನ್ಯನೇ ಇಲ್ಲಿನ ಆಡಳಿತಗಾರ; ಅವನ ಕೃಪೆಯಿಂದಲೇ ನಮ್ಮ ಅಧಿಕಾರ. ಆತನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಅರಿವು ನಮ್ಮ ಜನಪ್ರತಿನಿಧಿಗಳಲ್ಲೂ, ಅಧಿಕಾರಿಗಳಲ್ಲೂ ಮೊದಲಾಗಿ ಮೂಡಬೇಕು. ಅದಕ್ಕೆ ಇಂಥ ಉಪಕ್ರಮಗಳೇ ನಾಂದಿಯಾಗುತ್ತವೆ. ಇದು ಇನ್ನೂ ವ್ಯಾಪಕವಾಗಬೇಕು, ಮುಂದುವರಿಯಬೇಕು. ಆಗ ಇಂಥ ಪ್ರಯತ್ನಗಳು ಸಾರ್ಥಕವಾಗುತ್ತವೆ.

ಇದನ್ನೂ ಓದಿ | Republic Day Tableau 2023 | ಗಣರಾಜ್ಯೋತ್ಸವಕ್ಕೆ ಟ್ಯಾಬ್ಲೋ ಆಯ್ಕೆ ಪ್ರಕ್ರಿಯೆ ಹೇಗೆ, ಮಾನದಂಡಗಳೇನು?

Exit mobile version