ನವದೆಹಲಿ: ಮದುವೆಯಾದ (Marriage) ಬಳಿಕ ಮಗಳನ್ನು (Daughter) ಆಕೆಯ ಗಂಡನ ಮನೆಗೆ ಪೋಷಕರು ಅತ್ಯಂತ ವೈಭವಯುತವಾಗಿ ಹಾಗೂ ಮೆರವಣಿಗೆಯ ಮೂಲಕ ಕಳುಹಿಸಿಕೊಡುವ ಸಂಪ್ರದಾಯ ಹೆಚ್ಚು ಜನಪ್ರಿಯವಾಗಿದೆ. ಆದರೆ, ಗಂಡನಿಂದ ವಿಚ್ಛೇದನ (Divorce) ಪಡೆದುಕೊಂಡ ಬಳಿಕ ಮಗಳನ್ನು ಅದೇ ರೀತಿ ಮೆರವಣಿಗೆಯ (procession) ಮೂಲಕ ವಾಪಸ್ ಮನೆಗೆ ಕರೆಯಿಸಿಕೊಳ್ಳುವುದನ್ನು ಎಲ್ಲಾದರೂ ಕೇಳಿದ್ದೀರಾ? ಓದಿದ್ದೀರಾ? ನೋಡಿದ್ದೀರಾ? ಇಲ್ಲ ಅಲ್ವಾ? ಆದರೆ, ಜಾರ್ಖಂಡನ್‌ನ (Jharkhand) ತಂದೆಯೊಬ್ಬ(Father), ಗಂಡನನ್ನು ಬಿಟ್ಟು ಬಂದ ತನ್ನ ಮಗಳನ್ನು ಮೆರವಣಿಗೆಯ ಮೂಲಕ ಮನೆಗೆ ಕರೆಯಿಸಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(Viral Video). ಗಂಡನ ಮನೆಯಲ್ಲಿ ತನ್ನ ಮಗಳು ಸಾಕ್ಷಿ ಅನುಭವಿಸಿದ ನಿಂದನೆ ಮತ್ತು ಕಿರುಕುಳದ ಆರೋಪಗಳಿಗೆ ಹೃದಯಸ್ಪರ್ಶಿ ಮತ್ತು ಅಸಾಂಪ್ರದಾಯಿಕ ಪ್ರತಿಕ್ರಿಯೆಯಾಗಿ, ಜಾರ್ಖಂಡ್ ಪ್ರೇಮ್ ಗುಪ್ತಾ ಎಂಬ ವ್ಯಕ್ತಿ ಮೆರವಣಿಗೆ, ಸಂಗೀತ ಮತ್ತು ಪಟಾಕಿಗಳೊಂದಿಗೆ ಬರಮಾಡಿಕೊಂಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಭಾರೀ ವೈರಲ್ ಆಗಿದೆ. ಪ್ರೇಮ್ ಗುಪ್ತಾ ಮತ್ತು ಅವರ ಮಗಳು ಸಾಕ್ಷಿ, ನೃತ್ಯ ಮಾಡುವ ಸಂಬಂಧಿಕರು ಮತ್ತು ಸ್ನೇಹಿತರ ಸಂತೋಷದ ಗುಂಪಿನ ನಡುವೆ ತನ್ನ ವೈವಾಹಿಕ ಮನೆಯನ್ನು ತೊರೆದ ಕ್ಷಣವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪ್ರೇಮ್ ಗುಪ್ತಾ ಅವರು, ಜನರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನು ಬಹಳ ಮಹತ್ವಾಕಾಂಕ್ಷೆ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ, ಸಂದರ್ಭಗಳು ತಪ್ಪಾದಾಗ ಅಥವಾ ಮದುವೆಯು ಅಸಮರ್ಥವಾದಾಗ, ನಿಮ್ಮ ಮಗಳನ್ನು ಮನೆಗೆ ಮರಳಿ ಕರೆತರುವುದು ಅಷ್ಟೇ ಮುಖ್ಯವಾಗಿರುತ್ತದೆ. ಹೆಣ್ಣುಮಕ್ಕಳು ನಂಬಲಾಗದಷ್ಟು ಅಮೂಲ್ಯವಾದ ಕಾರಣ ಆಕೆಗೆ ಅರ್ಹವಾದ ಗೌರವ ಮತ್ತು ಘನತೆಯನ್ನು ಒದಗಿಸಬೇಕು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
2022ರ ಏಪ್ರಿಲ್ 28ರಂದು ಸಚಿನ್ ಕುಮಾರ್ ಜತೆ ಸಾಕ್ಷಿ ಗುಪ್ತಾ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ಜಾರ್ಖಂಡ್ ವಿದ್ಯುತ್ ಪ್ರಸರಣ ಕಂಪನಿಯಲ್ಲಿ ಸಚಿನ್ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ರಾಂಚಿಯಲ್ಲಿ ವಾಸವಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಗೂಳಿ ಜತೆ ಜಗಳಕ್ಕೆ ನಿಂತ ಕುಡುಕನ ಪಾಡು ಏನಾಯ್ತು?; ರಿಯಲ್ ‘ಬಾಹುಬಲಿ’ ದೃಶ್ಯ ಇಲ್ಲಿದೆ
ಮದುವೆಯಾದ ಕೆಲವೇ ದಿನಗಳ ಬಳಿಕ ಗಂಡ ಸಚಿನ್ ಮತ್ತು ಅವರ ತಂದೆ ತಾಯಿ ಸಾಕ್ಷಿ ಅವರಿಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ನಿತ್ಯ ನಿಂದಿಸುವುದು ಮಾತ್ರವಲ್ಲದೇ ಮನೆಯಿಂದ ಹೊರ ಹೋಗುವಂತೆ ಪೀಡಿಸಲಾರಂಭಿಸಿದ್ದಾರೆ. ಅಲ್ಲದೇ, ಸಚಿನ್ ಕುಮಾರ್ ಈ ಮೊದಲು ಎರಡು ಮದುವೆಯಾಗಿರುವ ಮಾಹಿತಿಯು ಸಾಕ್ಷಿಗೆ ಗೊತ್ತಾಗಿದೆ. ಈ ವಿಷಯವನ್ನು ಅವರು ನಮಗೆ ತಿಳಿಸಿರಲಿಲ್ಲ ಎಂದು ಸಾಕ್ಷಿ ತಂದೆ ಪ್ರೇಮ್ ಗುಪ್ತಾ ಆರೋಪಿಸಿದ್ದಾರೆ. ಆರಂಭದಲ್ಲಿ ವೈವಾಹಿಕ ಜೀವವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಸಾಕ್ಷಿ ಮಾಡಿದ್ದಾರೆ. ಆದರೆ, ನಿತ್ಯು ಕಿರುಕುಳ ಹೆಚ್ಚಾಗುತ್ತಿದ್ದಂತೆ ಮದುವೆ ತೊರೆಯಲು ನಿರ್ಧಾರ ಮಾಡಿದರು. ಅಂತಿಮವಾಗಿ ಸಾಕ್ಷಿ ತಂದೆ, ತಮ್ಮ ಮಗಳನ್ನು ಮೆರವಣಿಗೆಯ ಮೂಲಕವೇ ತಮ್ಮ ಮನೆಗೆ ವಾಪಸ್ ಕರೆಯಿಸಿಕೊಳ್ಳುವ ಮೂಲಕ ಇಡೀ ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ರವಾನಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.