ಬೆಂಗಳೂರು: ಚಂದ್ರನ ಮೇಲೆ ಚಂದ್ರಯಾನ- 3 ರೋವರ್ ಇಳಿಸುವ ಮೂಲಕ ಭರ್ಜರಿ ಯಶಸ್ಸು ಕಂಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೀಗ ಸೂರ್ಯನ ಮೇಲಿನ ಅಧ್ಯಯನಕ್ಕಾಗಿ ಸಿದ್ಧಪಡಿಸಿರುವ ಆದಿತ್ಯ ಎಲ್1 ಮಿಷನ್ ಕೂಡ ಸಾಂಗವಾಗಿ ಉಡಾವಣೆಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ಕ್ಷಣದ ವಿಡಿಯೊಗಳು ಹಾಗೂ ನೇರ ಪ್ರಸಾರದ ಮಾಹಿತಿಗಳು ನಾನಾ ವೇದಿಕೆಗಳಲ್ಲಿ ಪ್ರಸಾರವಾಗಿರುವ ಹೊರತಾಗಿಯೂ ಉಡಾವಣೆ ಕಾರ್ಯವ ಯಶಸ್ವಿಯಾಗಿ ನಡೆದಿರುವ ಮೊದಲ ನಾಲ್ಕು ಚಿತ್ರಗಳನ್ನು ಇಸ್ರೊ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.
ವಿಶಾಖಪಟ್ಟಣದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೂರ್ಯಯಾನದ ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್‌ಎಲ್‌ವಿ ಸಿ57 ರಾಕೆಟ್ ಗಗನಕ್ಕೆ ಚಿಮುತ್ತಿರುವ ದೃಶ್ಯಗಳನ್ನು ಇಸ್ರೊ ತಮ್ಮ ಕ್ಯಾಮೆರಾಗಳ ಮೂಲಕ ಸೆರೆ ಹಿಡಿದು ಸೋಶೀಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದೆ. ಬೆಂಕಿ ಹಾಗೂ ಹೊಗೆಯನ್ನು ಉಗುಳಿಕೊಂಡು ರಾಕೆಟ್ ಮೇಲಕ್ಕೆ ಹಾರುವ ಚಿತ್ರಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಸಿಕ್ಕಿವೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಿಷನ್ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್ ನಭಕ್ಕೆ ಹಾರಿದೆ. ಚಂದ್ರನ ಅಂಗಳಕ್ಕೆ ಇಳಿದು ಚಂದ್ರಯಾನ 3 ನೌಕೆಯು ಅಧ್ಯಯನ ನಡೆಸಿದಂತೆ ಆದಿತ್ಯ ಎಲ್ 1 ಮಿಷನ್ ಸೂರ್ಯನ ಅಂಗಳಕ್ಕೆ ಇಳಿಯುವುದಿಲ್ಲ ಹಾಗೂ ಸೂರ್ಯನಿಗೆ ತುಂಬ ಹತ್ತಿರದಲ್ಲಿ ಅಧ್ಯಯನ ನಡೆಸುವುದಿಲ್ಲ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್ 1 ಮಿಷನ್ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.
ಆದಿತ್ಯ ಮಿಷನ್ ಉದ್ದೇಶ
ಆದಿತ್ಯ ಎಲ್ 1 ಮಿಷನ್ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಇದು ಅಧ್ಯಯನ ಮಾಡಲಿದೆ. ಅಂದರೆ, ಚಂದ್ರನಿಗಿಂತ ನಾಲ್ಕು ಪಟ್ಟು ಹೆಚ್ಚು ದೂರದಲ್ಲಿ ಮಿಷನ್ ಕಾರ್ಯನಿರ್ವಹಿಸಲಿದೆ.
ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ.
ಇದನ್ನೂ ಓದಿ : ವಿಸ್ತಾರ Explainer: ಆದಿತ್ಯ L1 ಅಲ್ಲಿಗೆ ತಲುಪೋದು ಯಾವಾಗ? ಮಿಷನ್ ಬಗ್ಗೆ ನಿಮಗೀ 12 ಸಂಗತಿಗಳು ತಿಳಿದಿರಲಿ!
ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್‌ನಲ್ಲಿ (L Point) ಆದಿತ್ಯ ಎಲ್ 1 ಮಿಷನ್‌ನ ಉಪಗ್ರಹವು ಅಧ್ಯಯನ ನಡೆಸಲಿದೆ. ಈ ಲ್ಯಾಗ್ರೇಂಜ್ ಪಾಯಿಂಟ್ ತಲುಪಲು ಉಪಗ್ರಹಕ್ಕೆ 4 ತಿಂಗಳು ಬೇಕಾಗುತ್ತದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.