ನವದೆಹಲಿ/ಬೀಜಿಂಗ್: ಕೊರೊನಾ ಬಿಕ್ಕಟ್ಟೇ ಎದುರಾಗಲಿ, ಹಣದುಬ್ಬರದ ಏರಿಕೆ ಕುರಿತು ಟೀಕೆಗಳೇ ವ್ಯಕ್ತವಾಗಲಿ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಜಾಗತಿಕ ವರದಿಗಳು, ಸಮೀಕ್ಷೆಗಳ ಪ್ರಕಾರವೇ ಮೋದಿ ಅವರು ವಿಶ್ವದ ಪ್ರಮುಖ ನಾಯಕರನ್ನು ಹಿಂದಿಕ್ಕಿ, ಜನಪ್ರಿಯತೆಯಲ್ಲಿ ನಂಬರ್ ಒನ್ ಆಗಿದ್ದಾರೆ. ಮೋದಿ ಜನಪ್ರಿಯತೆ ಭಾರತದ ಜಾಲತಾಣಗಳಲ್ಲಿ ಮಾತ್ರವಲ್ಲ, ಚೀನಾದ ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.
ಅದರಲ್ಲೂ, ಭಾರತ ಹಾಗೂ ಚೀನಾದ ಮಧ್ಯೆ ಕಳೆದ ಮೂರ್ನಾಲ್ಕು ವರ್ಷದಿಂದ ಗಡಿ ಬಿಕ್ಕಟ್ಟು ಉಲ್ಬಣವಾಗಿದೆ. ಭಾರತದಲ್ಲಿ ಚೀನಾವನ್ನು ಪಾಕಿಸ್ತಾನದಷ್ಟೇ ವೈರಿ ಎಂದು ಪರಿಗಣಿಸಲಾಗುತ್ತದೆ. ಭಾರತದ ಯೋಧರು ಚೀನಾ ಸೈನಿಕರನ್ನು ಗಡಿಯಲ್ಲಿ ಹಿಮ್ಮೆಟ್ಟಿಸಿದ ವಿಡಿಯೊಗಳು ಲಭ್ಯವಾಗಿದೆ. ಹೀಗಿದ್ದರೂ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಜನಪ್ರಿಯತೆ ಹೆಚ್ಚಿದೆ. ಅದರಲ್ಲೂ, “ಭಾರತದ ಪ್ರಧಾನಿಯನ್ನು ಚೀನಿಯರು “ಮೋದಿ ಲಾವೋಕ್ಸಿಯನ್” ಅಂದರೆ “ಮೋದಿ ಅಮರ” (Modi The Immortal) ಎಂಬ ಅಡ್ಡಹೆಸರಿನಿಂದಲೇ ಕರೆಯುತ್ತಾರೆ” ಎಂದು ಅಮೆರಿಕ ಮೂಲದ ದಿ ಡಿಪ್ಲೋಮ್ಯಾಟ್ ಮ್ಯಾಗಜಿನ್ ವರದಿ ಮಾಡಿದೆ.
ಚೀನಾದ ಸೋಷಿಯಲ್ ಮೀಡಿಯಾಗಳ ವಿಶ್ಲೇಷಕರೂ ಆದ ಪತ್ರಕರ್ತ ಮು ಚುನ್‌ಶಾನ್ ಅವರು ಸಿನಾ ವೆಬೊದಲ್ಲಿ (Sina Weibo) (ಚೀನಾದಲ್ಲಿ ಇದು ಟ್ವಿಟರ್‌ಗೆ ಪರ್ಯಾಯವಾಗಿ ಬಳಸುವ ಜಾಲತಾಣ), “ಭಾರತದ ದೃಷ್ಟಿಯಲ್ಲಿ ಚೀನಾ ಹೇಗಿದೆ?” ಎಂಬ ಲೇಖನವನ್ನು ಬರೆದಿದ್ದಾರೆ. ಇದರಲ್ಲಿ ಅವರು, “ಚೀನಿಯರು ಮೋದಿ ಅವರನ್ನು ಜನಪ್ರಿಯ ನಾಯಕ ಎಂಬುದಾಗಿ ಪರಿಗಣಿಸುತ್ತಾರೆ. ಅವರು ಜಗತ್ತಿನ ಹಲವು ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ದೇಶಗಳ ಮಧ್ಯೆ ಸಮತೋಲನ ಕಾಪಾಡುತ್ತಾರೆ ಎಂಬುದಾಗಿ ನಂಬಿದ್ದಾರೆ” ಎಂದು ಹೇಳಿದ್ದಾರೆ.
ಮೋದಿ ಜನಪ್ರಿಯತೆ ಕುರಿತು ಹಳೆಯ ಸಮೀಕ್ಷೆ
ಸಿನಾ ವೆಬೊ ಸಾಮಾಜಿಕ ಜಾಲತಾಣವನ್ನು 58 ಕೋಟಿಗೂ ಅಧಿಕ ಜನ ಸಕ್ರಿಯವಾಗಿ ಬಳಸುತ್ತಿದ್ದಾರೆ. ಇದರಲ್ಲಿ ಪೋಸ್ಟ್ ಮಾಡಲಾದ ಲೇಖನದಲ್ಲಿ, “ನರೇಂದ್ರ ಮೋದಿ ಅವರನ್ನು ಚೀನಾದ ನಾಗರಿಕರು ಮೋದಿ ಲಾವೋಕ್ಸಿಯನ್ ಎಂಬ ನಿಕ್‌ನೇಮ್‌ನಿಂದ ಕರೆಯುತ್ತಾರೆ. ಮೋದಿ ಲಾವೋಕ್ಸಿಯನ್ ಎಂದರೆ ವಿಶೇಷ ಗುಣಗಳುಳ್ಳ ಅಮರನಾದ ನಾಯಕ ಎಂಬರ್ಥವಿದೆ. ಜಾಗತಿಕ ನಾಯಕರಲ್ಲಿಯೇ ಮೋದಿ ವಿಶೇಷ ಎಂಬುದಾಗಿ ಪರಿಗಣಿಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Narendra Modi: ಒಂದು ದಿನದಲ್ಲಿ ಮೂರು ಜಿಲ್ಲೆಗಳ ಪ್ರವಾಸ; ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ
ಇತ್ತೀಚೆಗೆ ಅಂದರೆ, ಜನವರಿ 26-31ರ ನಡುವೆ ಮಾರ್ನಿಂಗ್ ಕನ್ಸಲ್ಟ್‌ನ ವಿಶ್ವ ನಾಯಕರ ಅಪ್ರೂವಲ್ ರೇಟಿಂಗ್‌ನಲ್ಲಿ (Approval Rating) ಪ್ರಧಾನಿ ಮೋದಿ ಮೊದಲನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಈ ಪಟ್ಟಿ ಒಟ್ಟು 22 ಜಾಗತಿಕ ನಾಯಕರ ಅಪ್ರೂವಲ್ ರೇಟಿಂಗ್ ಹೊಂದಿದೆ. ಪ್ರಧಾನಿ ಮೋದಿ ಅವರು ಒಟ್ಟು ಶೇ.78 ಅಪ್ರೂವಲ್ ರೇಟ್‌ನೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಲೋಪೆಜ್ ಒಬ್ರಡಾರ್ (Lopez Obrador) ಶೇ.68 ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರು ಶೇ.58 ಅಪ್ರೂವಲ್ ರೇಟಿಂಗ್‌ನೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.