ಕೊಚ್ಚಿ: ವಿವಾದಿತ ಸಿನಿಮಾ ʼದಿ ಕೇರಳ ಸ್ಟೋರಿʼಯ (The Kerala Story) ಪ್ರದರ್ಶನಕ್ಕೆ ಅನುಮತಿ ನೀಡದಂತೆ ಕಾಂಗ್ರೆಸ್ ಶುಕ್ರವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಇದು ಮೇ 5ರಂದು ತೆರೆಗೆ ಬರಲಿದೆ. ʼʼಈ ಸಿನಿಮಾ ಸುಳ್ಳುಗಳಿಂದ ಕೂಡಿದೆ ಮತ್ತು ಮುಸ್ಲಿಂ ಸಮುದಾಯವನ್ನು ಇದರಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿದೆ” ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ರಾಜ್ಯದ 21 ಹಿಂದೂ ಯುವತಿಯರು 2016ರಲ್ಲಿ ನಾಪತ್ತೆಯಾದ ಹಾಗೂ ಸಿರಿಯಾ ಮತ್ತು ಆಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ (Islamic state- ISIS) ಹಿಡಿತದಲ್ಲಿರುವ ಪ್ರದೇಶಗಳಿಗೆ ಸೇರಿಕೊಂಡ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಸಿನಿಮಾ (The Kerala Story) ಚಿತ್ರಿಸಲಾಗಿದೆ.
ಆಡಳಿತಾರೂಢ ಸಿಪಿಐ(ಎಂ)ನ ಯುವ ಘಟಕವಾದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಕೂಡ “ಸಂಘ ಪರಿವಾರವು ರಾಜ್ಯ ಮತ್ತು ಇಡೀ ಸಮುದಾಯವನ್ನು ಅವಮಾನಿಸಲು ಜನಪ್ರಿಯ ಮಾಧ್ಯಮವನ್ನು ಬಳಸುತ್ತಿದೆ” ಎಂದು ಚಿತ್ರದ ವಿರುದ್ಧ ತೀವ್ರವಾಗಿ ಟೀಕಿಸಿದೆ. ಎರಡು ತಿಂಗಳ ಹಿಂದೆ ಇದರ ಟ್ರೇಲರ್‌ಗಳು ಬಿಡುಗಡೆಯಾಗಿ ರಾಜ್ಯದಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದವು. ಈ ಚಲನಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ವಿಪುಲ್ ಶಾ ನಿರ್ಮಿಸಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾದ ಟ್ರೇಲರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಟ್ರೇಲರ್‌ನಲ್ಲಿ ಶಾಲಿನಿ ಉನ್ನಿಕೃಷ್ಣನ್ ಎಂಬ ಹಿಂದೂ ಯುವತಿಯನ್ನು ಫಾತಿಮಾ ಆಗಿ ಮತಾಂತರಗೊಳಿಸಲಾಗುವ ಹಾಗೂ ಇಸ್ಲಾಮಿಕ್ ಉಗ್ರರ ಸಂಘಟನೆಗೆ ಆಕೆಯನ್ನು ಸೇರಿಸಲಾಗುವ ಚಿತ್ರಣವಿದೆ. ಇದಲ್ಲದೆ ಇತರ ಕೆಲವು ವಿಡಿಯೋಗಳನ್ನೂ ಬಿಡಲಾಗಿದ್ದು, ಇದರಲ್ಲಿ ತಾನು ಶಾಲಿನಿ ಉನ್ನಿಕೃಷ್ಣನ್ ಎಂದು ಹೇಳಿಕೊಂಡಿರುವ ಯುವತಿ, ಮತಾಂಧ ಶಕ್ತಿಗಳು ತನ್ನ ಬ್ರೈನ್‌ವಾಶ್ ಮಾಡಿ ಸಿರಿಯಾಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಪರವಾಗಿ ಹೋರಾಡಲು ಕಳಿಸಿವೆ. ತನ್ನಂತೆಯೇ 32,000 ಯುವತಿಯರನ್ನು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾಳೆ. ಇದೀಗ ಈ ಸಿನಿಮಾದ ಟ್ರೇಲರ್ ಆಡಳಿತಾರೂಢ ಯುಡಿಎಫ್‌ಗೆ ಮುಜುಗರ, ಆತಂಕ ಸೃಷ್ಟಿಸಿದೆ.
“ಈ ಸಿನಿಮಾ (The Kerala Story) ಸುಳ್ಳಿನ ಕಂತೆ. 32,000 ಹಿಂದೂ ಯುವತಿಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಅದು ಹೇಳುತ್ತದೆ. ಟ್ರೇಲರ್ ಚಿತ್ರದ ಬಗ್ಗೆ ಸಾಕಷ್ಟು ಸುಳಿವುಗಳನ್ನು ನೀಡಿದೆ. ಇದು ರಾಜ್ಯ ಮತ್ತು ಮುಸ್ಲಿಂ ಸಮುದಾಯದ ಮಾನಹಾನಿ ಮಾಡುವ ಉದ್ದೇಶ ಹೊಂದಿದ್ದು, ಇದರ ಹಿಂದೆ ಸಂಘಪರಿವಾರದ ಕೈವಾಡವಿದೆʼʼ ಎಂದು ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಆಕ್ರೋಶಿಸಿದ್ದಾರೆ. ಇದು ಧಾರ್ಮಿಕ ದ್ವೇಷ ಬಿತ್ತುವ ಕೆಟ್ಟ ಅಜೆಂಡಾ ಹೊಂದಿದೆ. ಆದರೆ ಅಂತಹ ಶಕ್ತಿಗಳನ್ನು ಸೋಲಿಸಲು ಕೇರಳದ ಜನರು ಒಗ್ಗಟ್ಟಾಗಿ ನಿಲ್ಲುತ್ತಾರೆ ಎಂದು ಅವರು ಹೇಳಿದ್ದಾರೆ.
“ಸಂಘ ಪರಿವಾರವು ರಾಜ್ಯವನ್ನು ಧಾರ್ಮಿಕ ಮತಾಂಧರು ಮತ್ತು ದೇಶ ವಿರೋಧಿ ಶಕ್ತಿಗಳ ಕೇಂದ್ರವೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಇದು ಅದರ ಕೋಮು ಧ್ರುವೀಕರಣದ ಕುತಂತ್ರದ ಭಾಗ. ಆದರೆ ಕೇರಳದಲ್ಲಿ ಇದು ಕೆಲಸ ಮಾಡುವುದಿಲ್ಲ. ರಾಜ್ಯವು ಜಾತ್ಯತೀತತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ತೊಟ್ಟಿಲಾಗಿದೆʼʼ ಎಂದು ಡಿವೈಎಫ್‌ಐ ಟೀಕಿಸಿದೆ. ಈ ಹಿಂದೆ ಕಾಂಗ್ರೆಸ್‌ನ ಮಿತ್ರ ಪಕ್ಷವಾದ ಮುಸ್ಲಿಂ ಲೀಗ್, “ಈ ಸಿನಿಮಾ ಇಡೀ ಸಮುದಾಯವನ್ನು ರಾಕ್ಷಸರನ್ನಾಗಿ ಕಾಣಿಸಿದೆ” ಎಂದಿದ್ದು, ಚಿತ್ರದ ವಿರುದ್ಧ ಆಂದೋಲನದ ಬೆದರಿಕೆ ಹಾಕಿತ್ತು.
ಇದನ್ನೂ ಓದಿ: The Kerala Story: ಕೇರಳದಿಂದ ಕಾಣೆಯಾದ 32 ಸಾವಿರ ಹುಡುಗಿಯರ ನೈಜ ಕಥೆ: ʻದಿ ಕೇರಳ ಸ್ಟೋರಿʼ ಟ್ರೈಲರ್ ಔಟ್