ಸೋನಾಲಿ ಫೋಗಟ್ (Sonali Phogat) ಸಾವಿನ ಬಳಿಕ ಅವರ ಕುರಿತು ಹೊರ ಬರುತ್ತಿರುವ ಮಾಹಿತಿಗಳು ಸಖತ್ ಇಂಟರೆಸ್ಟಿಂಗ್ ಆಗಿವೆ. ಬಡತನ ಕುಟುಂಬದ ಬ್ಯಾಕ್‌ಗ್ರೌಂಡ್ ಹಿನ್ನೆಲೆಯಿಂದ ಬಂದು, ಟಿವಿಯಿಲ್ಲಿ ನಿರೂಪಕಿಯಾಗಿ, ನಟಿಯಾಗಿ, ಟಿಕ್‌ಟಾಕ್ ಸ್ಟಾರ್ ಆಗಿ, ಬಿಗ್‌ಬಾಸ್ ಸ್ಪರ್ಧಿಯಾಗಿ, ರಾಜಗಕಾರಣಿಯಾಗಿ, ಸದಾ ವಿವಾದಗಳನ್ನು ಮೈಮೇಲೆಳೆದುಕೊಳ್ಳುತ್ತಿದ್ದ ಈ ಮಹಿಳೆ, ಬದುಕನ್ನು ಬಹಳ ಎಂಜಾಯ್ ಮಾಡುತ್ತಿದ್ದರು! ಅವರ ಜೀವನಶೈಲಿ, ಬಿಂದಾಸ್ ಲೈಫು ಸಾಕ್ಷ್ಯ ಒದಗಿಸುತ್ತದೆ!
ಆಗಸ್ಟ್ 22ರಂದು ತಮ್ಮ ಕಚೇರಿ ಸಹಾಯಕರೊಂದಿಗೆ ಗೋವಾಕ್ಕೆ ತೆರಳಿದ್ದರು ಸೋನಾಲಿ ಫೋಗಟ್. ಸಹಾಯಕ ಹೆಸರಲ್ಲೇ ರೂಮ್ ಪಡೆದುಕೊಂಡಿದ್ದರು. ಕರ್ಲೀಸ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿಯಲ್ಲಿದ್ದಾಗ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ನಾರ್ಥ್ ಗೋವಾ ಸೇಂಟ್ ಆ್ಯಂಟನಿ ಹಾಸ್ಪಿಟಲ್‌ಗೆ ದಾಖಲಿಸಲಾಗಿತ್ತಾದರೂ, ಅವರು ಸಾವಿಗೀಡಾಗಿದ್ದರು. ಮೊದಲಿಗೆ ಗೋವಾ ಪೊಲೀಸರು ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಭಾವಿಸಿದ್ದರು. ಆದರೆ, ಸೋನಾಲಿ ಕುಟುಂಬಸ್ಥರು ಸೋನಾಲಿ ಕೊಲೆಯಾಗಿದೆ ಎಂದು ಆರೋಪಿಸಿದ ಬಳಿಕ, ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು.
ಪೋಸ್ಟ್‌ಮಾರ್ಟಮ್ ರಿಪೋರ್ಟ್ ಬಂದ ಮೇಲೆ ಗೋವಾ ಪೊಲೀಸರು, ಸೋನಾಲಿ ಫೋಗಟ್‌ನ ಇಬ್ಬರು ಸಹಾಯಕರನ್ನು ಬಂಧಿಸಿದ್ದಾರೆ. ಫೋಗಟ್‌ಗೆ ಎಂಡಿಎಂಎ ಡ್ರಗ್ಸ್ ಅನ್ನು ಒತ್ತಾಯವಾಗಿ ಕುಡಿಸಲಾಗಿತ್ತು, ಅದರಿಂದಲೇ ಮರಣವಾಗಿದೆ ಎಂದು ಹೇಳಲಾಗುತ್ತಿದೆ. ತನಿಖೆ ಮುಂದುವರಿದಂತೆ ಈ ಕೊಲೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳು ಹೊರ ಬೀಳಬಹುದು.
ಸಾಯುವ ಮೊದಲು ಪೋಸ್ಟ್
ಸೋನಾಲಿ ಆಗಸ್ಟ್ 22ರ ರಾತ್ರಿ 9.25ರ ಹೊತ್ತಿಗೆ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋ ಬದಲಿಸಿದ್ದರು. ಹಾಗೇ, ಇನ್ಸ್ಟಾಗ್ರಾಂನಲ್ಲೂ ಕೂಡ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋಕ್ಕೆ ಅನೇಕರು ಕಮೆಂಟ್ಸ್ ಮಾಡಿದ್ದಾರೆ.
ದೂರದರ್ಶನದಲ್ಲಿ ನಿರೂಪಕಿ
ಸೋನಾಲಿ ಅವರು 1979ರ ಸೆಪ್ಟೆಂಬರ್ 21ರಂದು, ಹಿಸ್ಸಾರ್‌ನ ಭೂಥಾನ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ತಂದೆ ಕೃಷಿಕ. ತಾಯಿ ಗೃಹಿಣಿ. ಮೂವರು ಸಹೋದರಿಯರು, ಒಬ್ಬ ಸಹೋದರ. ಹರ್ಯಾಣದ ಫತೇಹಾಬಾದ್‌ನ ಪಯೋನಿಯರ್ ಕಾನ್ವೆಂಟ್ ಸ್ಕೂಲ್‌ನಲ್ಲಿಆರಂಭಿಕ ಶಿಕ್ಷಣ. ಹರ್ಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಬಿಎ ಪದವಿ ಗಳಿಕೆ. ಯಾರೇ ಆಗಲಿ ಒಂದು ಸಾರಿ ಕತ್ತೆತ್ತಿ ನೋಡುವಂಥ ಚೆಲುವೆ. ಅಷ್ಟೇ ಚಂದ ಮಾತುಗಾರ್ತಿ. ಇದರಿಂದಾಗಿಯೇ ಟಿವಿ ಕೈ ಬೀಸಿ ಕರೆಯಿತು. 2006ರಲ್ಲಿ ಹಿಸ್ಸಾರ್ ದೂರದರ್ಶನದಲ್ಲಿ ನಿರೂಪಕಿಯಾದರು. ಅಲ್ಲಿಂದ ಮತ್ತೆ ಹಿಂದಿರುಗಿ ನೋಡಲಿಲ್ಲ.
ಕಿರುತೆರೆಯಲ್ಲೂ ನಟನೆ
2016ರಲ್ಲಿ ‘ಏಕ್ ಮಾ ಜೋ ಲಾಖೋಂ ಕೆ ಲಿಯೇ ಬನಿ ಅಮ್ಮ’ ಧಾರಾವಹಿ ಮೂಲಕ ಕಿರುತೆರೆಗೂ ಎಂಟ್ರಿ. ಕಿರುತೆರೆಯಲ್ಲಿ ನಿಧಾನವಾಗಿ ಜನಪ್ರಿಯತೆ ಸಿಗುತ್ತಿದ್ದಂತೆ ಸಿನಿಮಾಗಳಲ್ಲೂ ಆಫರ್. ‘ಛೋರಿಯಂ ಛೋರೋಂ ಐಸಾ ಕಾಮ್ ನಹಿ ಹೋತಿ’ ಎಂಬ ಹರಿಯಾಣ್ವಿ ಸಿನಿಮಾದಲ್ಲಿ ನಟನೆ. ಪಂಜಾಬಿ ಮತ್ತು ಹರಿಯಾಣ್ವಿ ಭಾಷೆಯ ಅನೇಕ ಸಿನಿಮಾಗಳಲ್ಲಿ ಅಭಿನಯ. ತೀರಾ ಇತ್ತೀಚೆಗೆ ‘ದ ಸ್ಟೋರಿ ಆಫ್ ಬದ್ಮಾಶ್‌ಗಢ’ ವೆಬ್‌ಸಿರೀಸ್‌ನಲ್ಲಿ ನಟಿಸಿದ್ದರು. ಈ ವೆಬ್‌ಸಿರೀಸ್ 2019ರಲ್ಲಿ ಪ್ರಸಾರವಾಗಿತ್ತು. ನಟರಾದ ಜಿಮ್ಮಿ ಶೆಹರ್ಗಿಲ್, ರವಿ ಕಿಶನ್ ಜತೆಯೂ ಸೋನಾಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಗಂಡನ ಸಾವೂ ನಿಗೂಢ
ಈಗ ನಿಗೂಢವಾಗಿ ಕೊಲೆಯಾಗಿರುವ ಸೋನಾಲಿ ಫೋಗಟ್ ಅವರ ಗಂಡ ಕೂಡ ಅದೇ ರೀತಿಯಲ್ಲಿ ಸಾವಿಗೀಡಾಗಿದ್ದರು. 2016ರ ಡಿಸೆಂಬರ್‌ನಲ್ಲಿ ಸೋನಾಲಿ ಗಂಡ ಸಂಜಯ್ ಫೋಗಟ್ ನಿಗೂಢವಾಗಿ ತಮ್ಮ ಫಾರ್ಮ್‌ಹೌಸ್‌ನಲ್ಲಿ ಮೃತರಾದರು. ಆ ಬಗ್ಗೆ ಅನೇಕ ಅನುಮಾನಗಳಿವೆ, ಕತೆಗಳಿವೆ. ಇವರಿಗೆ ಯಶೋಧರಾ ಎಂಬ ಪುತ್ರಿ ಇದ್ದಾರೆ.
ವಿವಾದಗಳ ರಾಣಿ ಸೋನಾಲಿ
ಮನುಷ್ಯನಿಗೆ ಸಣ್ಣ ವಯಸ್ಸಿಗೆ ಯೋಗ್ಯತೆ ಮೀರಿದ, ಅನುಭವ ಮೀರಿದ ಖ್ಯಾತಿ ದಕ್ಕಿಬಿಟ್ಟರೆ ಅಂಥ ವ್ಯಕ್ತಿಯ ಎಣಿಕೆಗೆ ಮಿತಿ ಇರುವುದಿಲ್ಲ. ಇಡೀ ಜಗತ್ತು ತನ್ನನ್ನು ಆರಾಧಿಸುತ್ತಿದೆ ಎಂದ ಭಾವಿಸುತ್ತಾರೆ. ಇದಕ್ಕೆ ಸೋನಾಲಿ ಫೋಗಟ್ ಕೂಡ ಹೊರತಲ್ಲ. ಬಡತನದ ಕುಟುಂಬದ ಹಿನ್ನೆಲೆ ಇದ್ದರೂ ಚಿಕ್ಕ ವಯಸ್ಸಿಗೇ ದಕ್ಕಿದ ಖ್ಯಾತಿ ಅವರನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿತ್ತು. ಜತೆಗೇ, ತಾವಾಗಿಯೇ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದರು.
2020ರ ಜೂನ್ ತಿಂಗಳಲ್ಲಿ ಸೋನಾಲಿ ಫೋಗಟ್, ಹಿಸ್ಸಾರ್‌ನ ಬಾಲ್ಸಮಂಡ್ ಮಾರ್ಕೆಟ್ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಅವರಿಗೆ, ಹರ್ಯಾಣ ಪೊಲೀಸರ ಎದುರೇ ತಮ್ಮ ಚಪ್ಪಲಿಯಿಂದ ಥಳಿಸಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ”ನಿಮ್ಮಂಥವರಿಂದ ಬೈಯಿಸಿಕೊಳ್ಳಲು ನಾನು ಕೆಲಸ ಮಾಡಬೇಕಾ, ನನಗೂ ಗೌರವಯುತ ಜೀವನದ ಹಕ್ಕಿಲ್ಲವೇ?” ಎಂದು ಪ್ರಶ್ನಿಸಿದ ಆ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಮತ್ತೊಂದು ಘಟನೆಯಲ್ಲಿ ಸರ್ಕಾರಿ ಸಿಬ್ಬಂದಿಗೆ ಪೊಲೀಸರ ಸಮ್ಮುಖದಲ್ಲಿ ಹೊಡೆದಿದ್ದರು. ಆ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.
ಪಾಕಿಸ್ತಾನಕ್ಕೆ ಹೋಗಿ ಎಂದಿದ್ದರು
2019ರ ಚುನಾವಣಾ ಪ್ರಚಾರದ ವೇಳೆ ಹರಾಕಿರಿ ಮಾಡಿಕೊಂಡಿದ್ದರು. ಪ್ರಚಾರದ ಸಮಯದಲ್ಲಿ ಕೆಲವರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಲಿಲ್ಲ ಎಂದು ಅವರ ವಿರುದ್ಧ ಹರಿಹಾಯ್ದಿದ್ದರು. ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಯಾರು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲವೋ ಅವರ ವೋಟ್‌ಗೂ ಯಾವ ಬೆಲೆ ಇರುವುದಿಲ್ಲ ಎಂದು ಹೇಳುವ ಮೂಲಕ ವಿವಾದ ಮಾಡಿಕೊಂಡಿದ್ದರು ಸೋನಾಲಿ ಫೋಗಟ್.
ಬಿಷ್ಣೋಯಿ ವಿರುದ್ಧ ಸೋಲು
ದೂರದರ್ಶನದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿರುವಾಗಲೇ ರಾಜಕೀಯಕ್ಕೂ ಅಡಿಯಿಟ್ಟರು ಸೋನಾಲಿ. 2008ರಲ್ಲಿ ಬಿಜೆಪಿ ಸೇರಿದರು. ಬಹಳ ಬೇಗವೇ ಪಕ್ಷದೊಳಗೆ ಉನ್ನತ ಸ್ಥಾನವನ್ನು ಪಡೆದುಕೊಳ್ಳಲು ಯಶಸ್ವಿಯಾದರು. ಬಿಜೆಪಿಯ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯಾಗಿದ್ದರು. ಬಹುಶಃ ಅವರಿಗಿದ್ದ ಸ್ಟಾರ್ ವಾಲ್ಯೂ ಇದಕ್ಕೆ ಕಾರಣವಾಗಿರಬಹುದು. 2019ರ ವಿಧಾನಸಭೆ ಚುನಾವಣೆ ವೇಳೆ, ಅದಮಪುರ್ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ನ ಕುಲ್ದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿ ಸೋತರು. ಈಗ ಅದೇ ಬಿಷ್ಣೋಯಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ! ಜಾರ್ಖಂಡ್, ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳಲ್ಲಿ ಬಿಜೆಪಿ ಪರವಾಗಿ ಸೋನಾಲಿ ಕೆಲಸ ಮಾಡಿದ್ದಾರೆ. ಹರ್ಯಾಣ, ದಿಲ್ಲಿ ಮತ್ತು ಚಂಡೀಗಢನ ಬುಡಕಟ್ಟು ವಿಭಾಗಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.
ಟಿಕ್‌ಟಾಕ್ ಸ್ಟಾರ್, ಬಿಗ್‌ಬಾಸ್ ಕಂಟೆಸ್ಟಂಟ್!
ಹಿಸಾರ್ ದೂರದರ್ಶನದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿರುವಾಗಲೇ ಬಿಜೆಪಿ ಸೇರಿ ರಾಜಕಾರಣಿಯೂ ಆದರು. ಆ ಬಳಿಕ ನಟನೆಗೆ ಹೊರಳಿ, ಅಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಬರೆದರು. ಈ ಮಧ್ಯೆ, ಟಿಕ್‌ಟಾಕ್‌ನಲ್ಲೂ ಕೈಯಾಡಿಸಿ, ಸಾಕಷ್ಟು ಜನಪ್ರಿಯವಾದರು. ತಮ್ಮ ವಿಡಿಯೋಗಳ ಮೂಲಕ ಸಾಕಷ್ಟು ಫಾಲೋವರ್ಸ್ ಹೊಂದಿದ್ದರು. ಒಳ್ಳೆಯ ಹಾಗೂ ಕೆಟ್ಟ ಕಾರಣಕ್ಕೆ ಪ್ರಸಿದ್ದಿಯಾಗಿದ್ದ ಸೋನಾಲಿ ಸಹಜವಾಗಿಯೇ, 2020ರ ಬಿಗ್‌ಬಾಸ್‌ಗೂ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಪ್ರವೇಶಪಡೆದುಕೊಂಡರು. ಇಲ್ಲೂ ಇರುವಷ್ಟು ಕಾಲ ರಂಜಿಸಿ ಸೋನಾಲಿ, ತಮ್ಮ ಬದುಕಿನ ಕೆಲವೊಂದಿಷ್ಟು ರಹಸ್ಯಗಳನ್ನು ಜನರ ಮುಂದಿಟ್ಟರು.
ಫೋಗಟ್ ಹತ್ತಿರವಾಗಿದ್ದ ಆ ವ್ಯಕ್ತಿ ಯಾರು?
2021ರ ಜನವರಿಯಲ್ಲಿ ನಡೆದಿದ್ದ ಹಿಂದಿ ಬಿಗ್‌ಬಾಸ್ 14ನೇ ಸೀಸನ್ನಲ್ಲಿ ಇವರು ಪಾಲ್ಗೊಂಡಿದ್ದರು. ಅಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಹೇಳಿಕೊಂಡಿದ್ದರು. ‘ನನ್ನ ಪತಿ ಮೃತಪಟ್ಟ ಮೇಲೆ, ನಾನು ಒಬ್ಬಂಟಿಯಾಗಿದ್ದೆ. ಆದರೆ ನನ್ನ ಜೀವನದಲ್ಲಿ ಒಬ್ಬಾತ ಬಂದ. ಅವನಿಂದಾಗಿ ನನ್ನಲ್ಲಿ ಅನೇಕ ಬದಲಾವಣೆಗಳು ಆದವು. ಆದರೆ ಕೆಲವು ಕಾರಣಗಳಿಂದಾಗಿ ನಮ್ಮಿಬ್ಬರ ಸಂಬಂಧ ಮುಂದುವರಿಯಲಿಲ್ಲ’ ಎಂದು ತಿಳಿಸಿದ್ದರು. ಹಾಗೇ, ಅದೇ ಸೀಸನ್ನಲ್ಲಿ ಸ್ಪರ್ಧಿಯಾಗಿದ್ದ ಅಲಿ ಗೋನಿ ಮೇಲೆ ತನಗೆ ಲವ್ ಆಗಿದೆ ಎಂದು ಬಹಿರಂಗವಾಗಿಯೂ ಹೇಳಿಕೊಂಡಿದ್ದರು.
ಹಾರ್ಟ್ ಅಟ್ಯಾಕ್‌ನಿಂದ ಕೊಲೆಯವರೆಗೆ!
ಆಗಸ್ಟ್ 22ರಂದ ಸೋನಾಲಿ ಫೋಗಟ್ ಸಾವಿಗೀಡಾದಾಗ ಪೊಲೀಸರು ಸಹಿತ ಎಲ್ಲರೂ ಹೃದಯಾಘಾತವೇ ಕಾರಣ ಎಂದು ಭಾವಿಸಿದ್ದರು. ಆದರೆ, ಸೋನಾಲಿ ಸಹೋದರ ಕೊಲೆ ಎಂದು ಆರೋಪಿಸುತ್ತಿದ್ದಂತೆ ಅನುಮಾನಗಳು ಶುರುವಾದವು. ಪೋಸ್ಟ್ ಮಾರ್ಟ್ಂ ರಿಪೋರ್ಟ್ ಬಂದ ಮೇಲೆ, ಅದು ಖಚಿತವಾಗುವ ಸಾಧ್ಯತೆ ಸೃಷ್ಟಿಯಾದವು. ಯಾಕೆಂದರೆ, ಸೋನಾಲಿ ದೇಹದ ಮೇಲೆ ಗಾಯದ ಗುರುತುಗಳು, ದೇಹದೊಳಗೇ ಡ್ರಗ್ಸ್ ಸೇರಿದ್ದು ಪತ್ತೆಯಾಯಿತು. ಇಷ್ಟಾಗುತ್ತಿದ್ದಂತೆ ಗೋವಾ ಪೊಲೀಸರು ಸೋನಾಲಿಯ ಇಬ್ಬರು ಸಹಾಯಕರನ್ನು ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಸೋನಾಲಿಗೆ ಡ್ರಗ್ಸ್ ಒತ್ತಾಯವಾಗಿ ನೀಡಿದ್ದನ್ನು ಒಪ್ಪಿಕೊಂಡಿದ್ದಾನೆ. ಬಹುಶಃ ತನಿಖೆ ಮುಂದುವರಿದಂತೆ ಕೊಲೆಯ ಹಿಂದಿನ ಕಾರಣ ಬಹಿರಂಗವಾಗಬಹುದು.
ಇದನ್ನೂ ಓದಿ | ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು; ಡ್ರಗ್ ಪೆಡ್ಲರ್, ಕ್ಲಬ್ ಮಾಲೀಕನ ಬಂಧನ