Site icon Vistara News

ವಿಸ್ತಾರ ಸಂಪಾದಕೀಯ: ಹರಿಯಾಣ ಕೋಮುಗಲಭೆ ಹಿಂದಿನ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕು

Communal

ರಾಷ್ಟ್ರ ರಾಜಧಾನಿ ಹೊಸದಿಲ್ಲಿಗೆ ಸಮೀಪದ ಹರಿಯಾಣದ ನುಹ್‌ನಲ್ಲಿ ಕೋಮುಗಲಭೆ ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸಿದೆ. ಇದುವರೆಗೆ ಆರು ಮಂದಿ ಇದಕ್ಕೆ ಬಲಿಯಾಗಿದ್ದಾರೆ. ಬಜರಂಗ ದಳದ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗಲಭೆಯಲ್ಲಿ ಒಂದು ಮಸೀದಿಯನ್ನು ಸುಟ್ಟುಹಾಕಲಾಗಿದ್ದು, ಅಲ್ಲಿದ್ದ ಮೌಲ್ವಿ ಸತ್ತಿದ್ದಾರೆ. ಇದಲ್ಲದೆ ಇಬ್ಬರು ಹೋಮ್ ಗಾರ್ಡ್ಸ್ ಸೇರಿ ನಾಲ್ವರ ಸಾವು ಸಂಭವಿಸಿದೆ. ಅಂಗಡಿ ಮುಂಗಟ್ಟುಗಳು, ಮನೆಗಳನ್ನು ಸುಟ್ಟುಹಾಕಲಾಗಿದೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ವಾಹನಗಳನ್ನು ಸುಟ್ಟುಹಾಕಲಾಗಿದೆ ಅಥವಾ ಜಖಂಗೊಳಿಸಲಾಗಿದೆ. ನುಹ್‌ನಲ್ಲಿ ಹುಟ್ಟಿಕೊಂಡ ಗಲಭೆ ದಿಲ್ಲಿ ಸಮೀಪದ ಗುರುಗ್ರಾಮ, ಫರೀದಾಬಾದ್‌ಗೂ ವ್ಯಾಪಿಸಿದೆ. 116ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇವೆಲ್ಲವೂ ಕಳವಳಕ್ಕೆ ಕಾರಣವಾದ ಅಂಶಗಳಾಗಿವೆ.

ವಿಹಿಂಪ ಹಾಗೂ ಬಜರಂಗದಳ ಸಂಘಟಿಸಿದ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಗಲಭೆ ಹುಟ್ಟು ಹಾಕಿದ್ದಾರೆ. ಮೆರವಣಿಗೆಯ ಮೇಲೆ ಕಲ್ಲು ತೂರಿದವರು ಗಲಭೆಯ ಹುಟ್ಟಿಗೆ ಕಾರಣವಾಗಿರಬಹುದು.

ಸದ್ಯ ಈ ಕೋಮು ಗಲಭೆಯನ್ನು ನಿಯಂತ್ರಿಸುವುದು ಹಾಗೂ ಶಾಂತಿ ಸ್ಥಾಪನೆ ಮೊದಲ ಆದ್ಯತೆಯಾಗಬೇಕು. ಇದನ್ನು ಹರಿಯಾಣ ಹಾಗೂ ದೆಹಲಿಯ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಬೆಂಕಿ ನಂದಿಸುವ ಕೆಲಸ ಮಾಡಬೇಕೇ ಹೊರತು, ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಿದರೆ ಅದು ಇಡೀ ಮನೆಯನ್ನು ಸುಡುತ್ತದೆ. ಸರ್ಕಾರಗಳು ದುಷ್ಕರ್ಮಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಕೋಮು ವಿದ್ವೇಷದ ಸಂದರ್ಭದಲ್ಲಿ ಒಂದೊಂದು ಸಣ್ಣ ಕಿಡಿಯನ್ನೂ ನಿರ್ಲಕ್ಷಿಸಲಾಗದು. ಯಾವುದೇ ಉಡಾಫೆಯ ಒಂದು ಮಾತು, ದುರುದ್ದೇಶದ ಒಂದು ಹೇಳಿಕೆ, ಪ್ರಚೋದನೆಯ ಒಂದು ಕೃತ್ಯ ಕೂಡ ಹಿಂಸೆಯನ್ನು ಭುಗಿಲೆಬ್ಬಿಸಲು ಸಾಕಾಗುತ್ತದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಹೆಚ್ಚಳ ಶ್ಲಾಘನೀಯ

ಹರಿಯಾಣದ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿಕೊಳ್ಳುವ ಒಂದು ಸಣ್ಣ ಕಿಡಿಯೂ ಇಡೀ ದೇಶಕ್ಕೆ ಹಬ್ಬಲು ಸಾಕಾಗುತ್ತದೆ. ಈ ಹಿಂದೆ ಹೀಗೆ ಆದುದನ್ನು ನಾವು ಕಂಡಿದ್ದೇವೆ. ಈ ಹಿಂದೆ ರೈತರ ಪ್ರತಿಭಟನೆಗಳ ಸಂದರ್ಭದಲ್ಲಿ ರಾಜಧಾನಿಯಲ್ಲಿ ಗಲಭೆ ಸೃಷ್ಟಿಸಲು ಯತ್ನಿಸಿದುದನ್ನೂ ನಾವು ನೆನಪಿಸಿಕೊಳ್ಳಬಹುದು. ಇಂಥವರು ಯಾವುದೇ ಕೋಮಿನವರಿರಲಿ, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅಗತ್ಯ. ಇಲ್ಲಿ ಅಲ್ಪಸಂಖ್ಯಾತರೆಂಬ, ಅಥವಾ ಬಹುಸಂಖ್ಯಾತರೆಂಬ ಓಲೈಕೆಯೂ ಸಲ್ಲದು. ಯಾವುದೇ ಪೂರ್ವಗ್ರಹಗಳಿಲ್ಲದೆ ಗಲಭೆಯ ಮೂಲವನ್ನು ಶೋಧಿಸಿ, ಗಲಭೆಕೋರರ ಹೆಡೆಮುರಿ ಕಟ್ಟಿ, ಶಾಂತಿಯನ್ನು ಮರಳಿ ಸ್ಥಾಪಿಸುವ ಕಾರ್ಯ ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತ ಸರ್ಕಾರಗಳಿಂದ ಆಗಬೇಕಿದೆ. ರಾಜಧಾನಿಯೇ ಸುರಕ್ಷಿತವಲ್ಲ ಎಂದ ಮೇಲೆ ಉಳಿದ ಪ್ರದೇಶಗಳ ಬಗ್ಗೆ ಹೇಳುವುದೇನು? ಇಂಥ ಗಲಭೆಗಳು ಅಂತಾರಾಷ್ಟ್ರೀಯ ವಲಯದಲ್ಲಿ ನಮ್ಮ ದೇಶಕ್ಕೆ ಕಪ್ಪು ಚುಕ್ಕಿಗಳಾಗುತ್ತವೆ. ಜಿ20 ದೇಶಗಳ ಸಂಘಟನೆಯ ಅಧ್ಯಕ್ಷೀಯ ಹೊಣೆ ಹೊತ್ತ ದೇಶ ಅವುಗಳ ಮುಂದೆ ತಲೆ ತಗ್ಗಿಸುವಂತಾಗಬಾರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಲು ಶತ್ರು ದೇಶಗಳ ಏಜೆಂಟರು ಸದಾ ಹವಣಿಸುತ್ತಿರುತ್ತಾರೆ. ಮಣಿಪುರದಂತೆ ಹರಿಯಾಣದ ಗಲಭೆಯಲ್ಲೂ ವಿದೇಶಿ ಶಕ್ತಿಗಳ ಕೈವಾಡವನ್ನು ಅಲ್ಲಗಳೆಯಲಾಗದು. ಈ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು.

Exit mobile version