ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಮನೆ ಮನೆ ಪ್ರಚಾರ ಶುರುವಾಗಿದೆ. ಇದರ ಬೆನ್ನಲ್ಲೇ, “ಇದು ಚುನಾವಣೆ ಪ್ರಕ್ರಿಯೆ. ತುಂಬ ಪವಿತ್ರವಾಗಿರಬೇಕು. ಯಾರಿಗೂ ಕೂಡ ಅವರ ನಿರೀಕ್ಷೆಯಂತೆ, ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಭಾವನೆ ಬರಕೂಡದು” ಎಂಬುದಾಗಿ ಚುನಾವಣೆ ಆಯೋಗಕ್ಕೆ ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ. ಇವಿಎಂ ಹಾಗೂ ವಿವಿಪ್ಯಾಟ್‌ಗಳ ಸಂಪೂರ್ಣ (EVM-VVPAT Verification) ತಾಳೆ ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೀಗೆ ಸ್ಪಷ್ಟಪಡಿಸಿದೆ.
ಇವಿಎಂ-ವಿವಿಪ್ಯಾಟ್‌ಗಳ ತಾಳೆ ಕೋರಿ ಅರ್ಜಿ ಸಲ್ಲಿಸಿದವರ ಪರ ವಕೀಲ ನಿಜಾಂ ಪಾಶಾ ವಾದ ಮಂಡಿಸಿದರು. “ಇವಿಎಂ ಹಾಗೂ ವಿವಿಪ್ಯಾಟ್‌ಗಳ ಶೇ.100ರಷ್ಟು ತಾಳೆ ಮಾಡಬೇಕು. ಅಷ್ಟೇ ಅಲ್ಲ, ಮತದಾನ ಮಾಡಿದ ಬಳಿಕ ಮತದಾರನು ವಿವಿಪ್ಯಾಟ್ ಸ್ಲಿಪ್‌ಅನ್ನು ಬ್ಯಾಲೆಟ್ ಬಾಕ್ಸ್‌ನಲ್ಲಿ ಠೇವಣಿ ಮಾಡುವಂತೆ ಆದೇಶಿಸಬೇಕು” ಎಂಬುದಾಗಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, “ಈ ಪ್ರಕ್ರಿಯೆ ಅನುಸರಿಸಿದರೆ ಮತದಾರನ ಗೌಪ್ಯತೆಗೆ ಧಕ್ಕೆ ಬರುವುದಿಲ್ಲವೇ” ಎಂದು ಪ್ರಶ್ನಿಸಿತು. ಆಗ ಪಾಶಾ, “ಮತದಾರನ ಖಾಸಗಿತನವು ಮತದಾರನ ಹಕ್ಕುಗಳನ್ನು ಕಸಿಯುವಂತಿರಬಾರದು” ಎಂದರು. ಬಳಿಕ ಇವಿಎಂ ಹಾಗೂ ವಿವಿಪ್ಯಾಟ್‌ಗಳ ತಾಳೆ ಪ್ರಕ್ರಿಯೆ ಕುರಿತು ವಿವರಣೆ ನೀಡಬೇಕು ಎಂದು ನ್ಯಾಯಾಲಯವು ಪ್ರಕ್ರಿಯೆ ಆಯೋಗಕ್ಕೆ ಸೂಚಿಸಿತು.
ಚುನಾವಣೆ ಆಯೋಗದ ವಾದವೇನು?
“ಇವಿಎಂಗಳಿಗೂ, ವಿವಿಪ್ಯಾಟ್‌ಗೂ ತಾಳೆಯಾಗುತ್ತದೆ. ಒಮ್ಮೆಯೂ ಏರುಪೇರಾಗಿಲ್ಲ” ಎಂದು ಚುನಾವಣೆ ಆಯೋಗವು ತಿಳಿಸಿತು. ಆಗ ನ್ಯಾಯಾಲಯವು, “ಡೇಟಾ ವಿಶ್ಲೇಷಣೆ ಮಾಡೋಣ. ವೈಯಕ್ತಿಕ ಪೂರ್ವಗ್ರಹಗಳಿಂದ ಅಲ್ಲ. ಇದುವರೆಗೆ ಏರುಪೇರು ಆಗೇ ಇಲ್ಲ ಎಂದಾದರೆ, ಡೇಟಾ ಮಾಹಿತಿ ನೀಡಲಿ” ಎಂದು ಸ್ಪಷ್ಟಪಡಿಸಿತು. ಹಾಗೆಯೇ, “5 ಸಾವಿರದಿಂದ 7,500 ಪೇಪರ್ ಸ್ಲಿಪ್‌ಗಳ ಜತೆ ತಾಳೆ ಮಾಡಬೇಕು ಎಂದಿದೆ. ಇದಕ್ಕಾಗಿ 5 ಗಂಟೆ ಏಕೆ ಬೇಕು” ಎಂದು ಕೋರ್ಟ್ ಪ್ರಶ್ನಿಸಿತು. “ಸಣ್ಣ ಸ್ಲಿಪ್‌ಗಳು ಇರುತ್ತವೆ. ಒಂದಕ್ಕೊಂದು ಅಂಟಿಕೊಂಡಿರುತ್ತವೆ” ಎಂದು ಆಯೋಗವು ಸ್ಪಷ್ಟನೆ ನೀಡಿತ. “ಸ್ಲಿಪ್‌ಗಳ ಬದಲು ಬಾರ್‌ಕೋಡ್‌ಗಳನ್ನು ಬಳಸಬಹುದೇ” ಎಂಬುದಾಗಿ ಕೋರ್ಟ್ ಪ್ರಶ್ನಿಸಿತು. ಆಗ ಚುನಾವಣೆ ಆಯೋಗವು, “ಈ ಚುನಾವಣೆಯಲ್ಲಿ ಸಾಧ್ಯವಿಲ್ಲ” ಎಂದು ತಿಳಿಸಿತು. “ಭವಿಷ್ಯದಲ್ಲಾದರೂ ಮಾಡಬಹುದಲ್ಲ” ಎಂಬುದಾಗಿ ಕೋರ್ಟ್ ಹೇಳಿತು.
Official: 41629 VVPAT machines are there. Not a single mismatch
— Live Law (@LiveLawIndia) April 18, 2024
J Khanna: Let's go by data, not personal prejudices. If there has never been any mismatch, it speaks for itself#EVM #LokSabhaElections2024
ಚುನಾವಣೆ ಮತಯಂತ್ರಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸೇರಿ ಹಲವು ನಾಯಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. “ಇವಿಎಂಗಳನ್ನು ತಿರುಚದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 180 ಸೀಟುಗಳನ್ನು ಕೂಡ ಬರುವುದಿಲ್ಲ” ಎಂಬುದಾಗಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. ಇದರ ಬೆನ್ನಲ್ಲೇ, ಇವಿಎಂ ಹಾಗೂ ವಿವಿಪ್ಯಾಟ್‌ಗಳ ತಾಳೆ ಕುರಿತು ವಿವರಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿರುವುದು ಪ್ರಾಮುಖ್ಯತೆ ಪಡೆದಿದೆ.
ಇವಿಎಂ-ವಿವಿಪ್ಯಾಟ್ ತಾಳೆ ಹೇಗೆ?
ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಮತಯಂತ್ರಗಳ ಜತೆಗೆ ವಿವಿಪ್ಯಾಟ್‌ಗಳನ್ನೂ (ವೋಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಯಲ್) ಇರಿಸುತ್ತದೆ. ಮತಎಣಿಕೆ ಮಾಡುವಾಗ ಇವಿಎಂನಲ್ಲಿ ದಾಖಲಾದ ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ತಾಳೆ ಮಾಡುತ್ತದೆ. ಈಗ ಪ್ರತಿ ಕ್ಷೇತ್ರದಲ್ಲೂ ಐದು ಇವಿಎಂಗಳನ್ನು ಆಯ್ಕೆ ಮಾಡಿಕೊಂಡು, ನಂತರ ಇವಿಎಂಗಳ ಜತೆ ತಾಳೆ ಮಾಡುವ ವಿಧಾನ ಇದೆ. ಆದರೆ, ಎಲ್ಲ ಇವಿಎಂಗಳ ಜತೆ ತಾಳೆ ಹಾಕಬೇಕು ಎಂಬುದು ಅರ್ಜಿದಾರರ ವಾದವಾಗಿದೆ.
ಇದನ್ನೂ ಓದಿ: Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!